Advertisement

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಕಲ್ಯಾಣಪ್ಪ ಮಳಖೇಡ

12:05 PM Oct 21, 2021 | Team Udayavani |

ಕಲಬುರಗಿ: ಬಹಳ ದಿನಗಳಿಂದ ಮಧ್ಯಮಾವಧಿ (ಪೈಪ್‌ಲೈನ್‌) ಸಾಲ ವಿತರಿಸಲು ಮತ್ತೆ ಫಾರ್‍ಂಗಳ ವಿತರಣೆಗೆ ಮುಂದಾಗಲಾಗುತ್ತಿದೆ ಎನ್ನುವ ವದಂತಿಗೆ ಬುಧವಾರ ನಡೆದ ಇಲ್ಲಿನ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ ಆಡಳಿತ ಮಂಡಳಿ ಸಭೆಯಲ್ಲಿ ತೆರೆ ಎಳೆಯಲಾಗಿದೆ.

Advertisement

ಬ್ಯಾಂಕ್‌ನ ಅಧ್ಯಕ್ಷರಾಗಿರುವ ಸೇಡಂ ಮತಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಧ್ಯಾಮಾವಧಿ ಸಾಲ ವಿತರಣೆಗೆ ಯಾವುದೇ ಫಾರಂ ಇಲ್ಲದೇ ಬರೀ ಸರಳ ಅರ್ಜಿಯೊಂದನ್ನು ರೈತರಿಂದ ಪಡೆದು ಅದನ್ನು ಆಯಾ ಸಂಬಂಧಪಟ್ಟ ಪ್ರಾಥಮಿಕ ಸಹಕಾರ ಸಂಘಕ್ಕೆ ಕಳುಹಿಸಿ ಅಲ್ಲಿಂದ ಸೂಕ್ತ ದಾಖಲಾತಿ ಪಡೆದು ಸಾಲ ಮಂಜೂರಾತಿ ನೀಡುವ ಮಾದರಿಯ, ಅದರಲ್ಲೂ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದಿರುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈಗಾಗಲೇ ನಬಾರ್ಡ್‌ ಬ್ಯಾಂಕ್‌ನ ಉನ್ನತ ಮಟ್ಟದ ಸಭೆಯಲ್ಲಿ ಮಧ್ಯಮಾವಧಿ ಸಾಲಕ್ಕೆ ಹಸಿರುನಿಶಾನೆ ನೀಡಲಾಗಿದ್ದು, ಡಿಸಿಸಿ ಬ್ಯಾಂಕ್‌ದಿಂದ ಮಧ್ಯಮಾವಧಿ ಸಾಲ ನೀಡಬಹುದಾಗಿದೆ. ಅಲ್ಲದೇ ಶೇ. 35ರಷ್ಟು ಪ್ರತಿಶತ ಸಾಲ ನೀಡುವುದಾಗಿ ಈಗಾಗಲೇ ನಬಾರ್ಡ್‌ ಪ್ರಕಟಿಸಿದೆ.

ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ನಿರ್ದೇಶಕರಾಗಿ ಕಲ್ಯಾಣಪ್ಪ ಪಾಟೀಲ ಮಳಖೇಡ ನಾಮನಿರ್ದೇಶನ (ನೇಮಕ)ವಾಗಿದ್ದಾರೆ. ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲೇ ನಾಮನಿರ್ದೇಶನದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೇಡಂ ತಾಲೂಕು ಕ್ಷೇತ್ರದಿಂದ ಚುನಾಯಿತರಾಗಿದ್ದ ನಂದಕಿಶೋರ ರೆಡ್ಡಿ ನಿಧನರಾದ ಪ್ರಯುಕ್ತ ತೆರವಾದ ಸ್ಥಾನಕ್ಕೆ ಕಲ್ಯಾಣರಾವ್‌ ಮಳಖೇಡ ಅವರನ್ನು ನೇಮಕ ಮಾಡಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ವೀರಶೈವ ಸಮಾಜದ ಉಪಾಧ್ಯಕ್ಷ ಕಲ್ಯಾಣರಾವ್‌ ಪಾಟೀಲ ನಾಮನಿರ್ದೆಶನ ವಿಷಯವನ್ನು ಅಧ್ಯಕ್ಷರು ಪ್ರಸ್ತಾಪಿಸಿದರು. ತದನಂತರ ನಾಮನಿರ್ದೇಶನ ಮಾಡಲಾಯಿತು.

ಅದೇ ರೀತಿ ಬ್ಯಾಂಕ್‌ ನೌಕರರಿಗೆ ಶೇ. 37 ರಷ್ಟು ತುಟ್ಟಿ ಭತ್ತೆ ಹೆಚ್ಚಳ, ಇದೇ ಅಕ್ಟೋಬರ್‌ 25ರಂದು ನಗರದ ಡಾ| ಎಸ್‌.ಎಂ ಪಂಡಿತ ರಂಗಮಂದಿರದಲ್ಲಿ ನಡೆಸುವುದು ಹಾಗೂ ಅಗತ್ಯ ಸಿಬ್ಬಂದಿಗಳನ್ನು 11 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳುವುದು ಸೇರಿದಂತೆ ಇತರ ನಿರ್ಧಾರ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಬ್ಯಾಂಕ್‌ ಉಪಾಧ್ಯಕ್ಷರಾದ ಸುರೇಶ ಸಜ್ಜನ್‌, ನಿರ್ದೇಶಕರಾದ ಶರಣಬಸಪ್ಪ ಪಾಟೀಲ ಅಷ್ಠಗಾ, ಸೋಮಶೇಖರ ಗೋನಾಯಕ, ಗೌತಮ ಪಾಟೀಲ, ಅಶೋಕ ಸಾವಳೇಶ್ವರ, ಅಪ್ಪಾಸಾಬ್‌ ಮಾನಕರ, ಬಾಪುಗೌಡ ಪಾಟೀಲ, ಗುರುನಾಥರೆಡ್ಡಿ, ಚಂದ್ರಶೇಖರ ತಳ್ಳಳ್ಳಿ, ಬ್ಯಾಂಕ್‌ ನ ಎಂಡಿ ಚಿದಾನಂದ ನಿಂಬಾಳ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next