Advertisement

26ರಂದು ಬೆಳಗಾವಿಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ

08:50 AM Jul 12, 2019 | Suhan S |

ಬೆಳಗಾವಿ: ವಿಶ್ವಗುರು ಬಸವಣ್ಣನವರ ಮೂಲ ಆಶಯವಾಗಿರುವ ಮೇಲು ಕೀಳುಗಳಿಲ್ಲದ ಸಮಾನ ಸಮಾಜ ನಿರ್ಮಾಣವೇ ಮತ್ತೆ ಕಲ್ಯಾಣ ಚಳವಳಿಯ ಆಶಯವಾಗಿದೆ ಎಂದು ಗದುಗಿನ ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಹೇಳಿದರು.

Advertisement

ನಗರದ ಎಸ್‌.ಜಿ. ಬಾಳೇಕುಂದ್ರಿ ಸಭಾಗೃಹದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ ಆ. 1ರಿಂದ 30ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಆ.26 ರಂದು ಈ ಕಾರ್ಯಕ್ರಮ ನಡೆಯಲಿದೆ ಎಂದರು.

ದೇವರು ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ನಿಲ್ಲಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬುದೇ ಬಸವಣ್ಣನವರ ಆಶಯವಾಗಿತ್ತು. ಈಗ ನಾವು 21ನೇ ಶತಮಾನದಲ್ಲಿ 12ನೇ ಶತಮಾನದ ಬಸವಾದಿ ಶರಣರ ಆಶಯಗಳನ್ನು ನೆನಪಿಸಿಕೊಂಡು, ಅವುಗಳನ್ನು ಮರು ಸ್ಥಾಪಿಸಬೇಕಾಗಿದೆ. ಬಸವಾದಿ ಶರಣರ ಆಶಯಗಳನ್ನು ನಮ್ಮ ಇಂದಿನ ಯುವ ಪೀಳಿಗೆಗೆ ಹಾಗೂ ಭವಿಷ್ಯದ ಯುವ ಜನಾಂಗಕ್ಕೆ ತಲುಪಿಸಬೇಕಾಗಿದೆ ಎಂದು ಹೇಳಿದರು.

ಮತ್ತೆ ಕಲ್ಯಾಣದಲ್ಲಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗುವುದು. ನಂತರ ಸಾಮರಸ್ಯದ ನಡೆ. ವೇದಿಕೆ ಕಾರ್ಯಕ್ರಮ. ವಚನ ಸಂದೇಶ ಮತ್ತು ಬಸವಾದಿ ಶರಣರ ಆಶಯಗಳನ್ನು ಪರಿಚಯಿಸುವ ನಾಟಕಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಬಸವ ಭೀಮ ಸೇನೆಯ ಅಧ್ಯಕ್ಷ ಆರ್‌.ಎಸ್‌.ದರ್ಗೆ ಮಾತನಾಡಿ, ಮತ್ತೆ ಕಲ್ಯಾಣ ಎಂಬ ನೆನಪೇ ಒಂದು ರೋಮಾಂಚನ. 21ನೇ ಶತಮಾನದಲ್ಲಿ ನಾವು 12ನೇ ಶತಮಾನದ ಬಸವಾದಿ ಶರಣರ ಆಶಯಗಳನ್ನು ಈಡೇರಿಸಬೇಕಾಗಿದೆ. ಅನುಭವ ಮಂಟಪದ ವೈಭವವನ್ನು ಮರುಕಳಿಸಬೇಕಾಗಿದೆ. ಲಿಂಗಾಯತರು ಸೇರಿದಂತೆ ಎಲ್ಲ ಶೋಷಿತ ಸಮುದಾಯಗಳು ಬಸವ ತತ್ವದ ಅಡಿಯಲ್ಲಿ ಒಂದಾಗುವ ಮೂಲಕ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

Advertisement

ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗಾಗಿ ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಿದಗೌಡ ಮೋದಗಿ ಅವರ ಸಂಪಾದಕತ್ವದ ರೈತ ಕ್ರಾಂತಿ ಪಾಕ್ಷಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು.

ನಾಗನೂರು ರುದ್ರಾಕ್ಷಿಮಠದ ಸಾವಳಗೀಶ್ವರ ಸ್ವಾಮೀಜಿ, ಶೇಗುಣಸಿಯ ಮಹಾಂತದೇವರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಅರವಿಂದ ಪರುಶೆಟ್ಟಿ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಸಂಗಮೇಶ ವಾಲಿ, ಎಸ್‌.ವೈ.ಹಂಜಿ ಉಪಸ್ಥಿತರಿದ್ದರು. ಮಹಾನಂದಾ ಪರುಶೆಟ್ಟಿ ವಚನ ಪ್ರಾರ್ಥನೆ ಮಾಡಿದರು. ಶಂಕರ ಗುಡಸ್‌ ಸ್ವಾಗತಿಸಿದರು. ಅಶೋಕ ಮಳಗಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next