Advertisement

26ಕ್ಕೆ ಮತ್ತೆ ಕಲ್ಯಾಣ ಆಂದೋಲನ ಪೂರ್ವಭಾವಿ ಸಭೆ

07:35 AM Jun 25, 2019 | Team Udayavani |

ದಾವಣಗೆರೆ: ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಆ. 22 ರಂದು ನಡೆಯಲಿರುವ ಮತ್ತೆ ಕಲ್ಯಾಣ…ಆಂದೋಲನದ ಹಿನ್ನೆಲೆಯಲ್ಲಿ ಜೂ. 26 ರಂದು ಕುವೆಂಪು ಕನ್ನಡ ಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಹಮತ ವೇದಿಕೆಯ ಡಾ| ಎಚ್.ಎಸ್‌. ಮಂಜುನಾಥ್‌ ಕುರ್ಕಿ ತಿಳಿಸಿದ್ದಾರೆ.

Advertisement

ಮತ್ತೆ ಕಲ್ಯಾಣ… ಆಂದೋಲನದ ಯಶಸ್ಸಿಗೆ ರೂಪುರೇಷೆ, ಎಲ್ಲಾ ಜಾತಿ, ವರ್ಗದ ಮಠಾಧೀಶರು, ಮುಖಂಡರನ್ನು ಆಹ್ವಾನಿಸುವುದು ಒಳಗೊಂಡಂತೆ ಅನೇಕ ವಿಚಾರಗಳ ವಿನಿಮಯ, ಚಿಂತನೆ-ಮಂಥನ ಮಾಡುವ ಉದ್ದೇಶದಿಂದ ಬುಧವಾರ ಬೆಳಗ್ಗೆ 11ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ನಾಡಿನಲ್ಲಿ 900 ವರ್ಷಗಳ ಹಿಂದೆ ಬಸವಾದಿ ಶರಣರ ನೇತೃತ್ವದಲ್ಲಿ ಜಾತಿ, ಮತ, ಪಂಥ, ಲಿಂಗ ಭೇದ, ಅಸಮಾನತೆಯ ವಿರುದ್ಧ ಕಲ್ಯಾಣ ಕ್ರಾಂತಿ ನಡೆದಿತ್ತು. ಪ್ರಸ್ತುತ ವಾತಾವರಣದಲ್ಲಿ ಅಂತಹ ಕ್ರಾಂತಿಯ ಅಗತ್ಯತೆ ಇದೆ. ಅಂತಹ ತತ್ವಗಳು, ಮಾನವೀಯ ಚಿಂತನೆಗಳತ್ತ ಹೊರಳಿ ನೋಡುವ ಪ್ರಯತ್ನವೇ ಮತ್ತೆ ಕಲ್ಯಾಣ… ಆಂದೋಲನ ಎಂದು ತಿಳಿಸಿದರು.

ಮತ್ತೆ ಕಲ್ಯಾಣ ಆಂದೋಲನ… ಕೇವಲ ಒಂದು ಸಮಾರಂಭ, ವಿಚಾರ ಸಂಕಿರಣ ಅಲ್ಲ. ಸಮಾಜದ ಇಂದಿನ ತಲ್ಲಣಗಳಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ಅನ್ವೇಷಣೆ. ವ್ಯಕ್ತಿ, ಕಸುಬು, ಜಾತಿ, ಲಿಂಗ, ಭಾಷೆ, ಧರ್ಮಗಳ ಹೆಸರಲ್ಲಿ ಮನುಷ್ಯರು ಸಹಜೀವಿಗಳಿಂದ ಸರಿಯುತ್ತಾ ಒಡೆದು ಹೋಗುತ್ತಿರುವ ಆತಂಕದ ಮಧ್ಯೆ ಜೊತೆ ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸ ಪ್ರಕ್ರಿಯೆ ಎಂದು ತಿಳಿಸಿದರು.

ಆಗಸ್ಟ್‌ ತಿಂಗಳ ಪೂರ್ತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಡೆಯಲಿರುವ ಮತ್ತೆ ಕಲ್ಯಾಣ ಆಂದೋಲನ… ಆ.1 ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಪ್ರಾರಂಭವಾಗಲಿದೆ. 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ನಂತರ ಕೆಲವರು ವಚನಗಳನ್ನು ಸುಡುವ ಪ್ರಯತ್ನ ನಡೆಸಿದಾಗ ವಚನಕಾರ್ತಿ ಅಕ್ಕನಾಗಮ್ಮ ವಚನಗಳ ಗಂಟು ಹೊತ್ತುಕೊಂಡು ಬಂದು ತರೀಕೆರೆ ಸಮೀಪದ ಎಣ್ಣೆಹಳ್ಳಿಯಲ್ಲಿ ಸಂರಕ್ಷಿಸಿ, ಸಂವರ್ಧನೆಗೆ ತಂದ ನೆನಪಿನಲ್ಲಿ ತರೀಕೆರೆಯಿಂದ ಪ್ರಾರಂಭಿಸಿ, ಆ.30 ರಂದು ಬಸವ ಕಲ್ಯಾಣದಲ್ಲಿ ಮುಕ್ತಾಯವಾಗಲಿದೆ. ದಾವಣಗೆರೆಯಲ್ಲಿ ಆ.22 ರಂದು ಆಂದೋಲನದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

Advertisement

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ್‌, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್‌, ಜಿಪಂ ಸದಸ್ಯ ಕೆ.ಎಸ್‌. ಬಸವಂತಪ್ಪ, ನಗರಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್‌ ಶಿವಗಂಗಾ, ಶಶಿಧರ್‌ ಹೆಮ್ಮನಬೇತೂರು, ಶ್ರೀನಿವಾಸ್‌ ಮಳ್ಳೆಕಟ್ಟೆ, ಕೊರಟಿಕೆರೆ ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next