Advertisement

ಮೊದಲ ಬಾರಿಗೆ ಹಾಡಿದ ಕಲ್ಯಾಣ್‌

01:42 PM Apr 10, 2020 | Suhan S |

ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರರಾಗಿ ಗುರುತಿಸಿಕೊಂಡಿರುವ ಕೆ.ಕಲ್ಯಾಣ್‌ ಸಂಗೀತ ನಿರ್ದೇಶಕರಾಗಿಯೂ ಜನಪ್ರಿಯಗೊಂಡವರು. ಅಷ್ಟೇ ಅಲ್ಲ, ನಿರ್ದೇಶಕರಾಗಿಯೂ ಸೈ ಎನಿಸಿಕೊಂಡವರು. ಈಗ ಹೊಸ ಸುದ್ದಿ ಆಂದರೆ, ಇದೇ ಮೊದಲ ಬಾರಿಗೆ ಆವರು ಹಾಡುವ ಮೂಲಕ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.

Advertisement

ಹೌದು, ಹೊಸಬರ ಚಿತ್ರಕ್ಕೆ ಎರಡು ಗೀತೆಗಳನ್ನು ರಚಿಸುವುದರ ಜೊತೆಗೆ ಒಂದು ಹಾಡನ್ನೂ ಹಾಡಿದ್ದಾರೆ. ಅಂದಹಾಗೆ, ಕೆ.ಕಲ್ಯಾಣ್‌ ಹಾಡಿರುವ ಚಿತ್ರದ ಹೆಸರು “ಜೊತೆಯಾಗಿರು’. ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಇದೇ ಮೊದಲ ಬಾರಿಗೆ ಸತೀಶ್‌ಕುಮಾರ್‌ “ಜೊತೆಯಾಗಿರು’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕಳೆದ ಒಂದು ದಶಕದಿಂದಲೂ ಚಿತ್ರರಂಗದಲ್ಲಿರುವ ನಿರ್ದೇಶಕ ಸತೀಶ್‌ಕುಮಾರ್‌, ಈ ಹಿಂದೆ “ಅಲೆ ‘, “ಅಜರಾಮರ’ ಸೇರಿದಂತೆ 15 ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೊಂದು ನೈಜ ಘಟನೆ ಆಧರಿಸಿದ ಚಿತ್ರವಾಗಿದ್ದು, ಪ್ರೇಮಕಥೆ ಹೊಂದಿದೆ.

ತಿಳುವಳಿಕೆ ಮತ್ತು ತಿಳುವಳಿಕೆ ಇಲ್ಲದ ವಯಸ್ಸಲ್ಲಿ ಲವ್‌ ಮಾಡಿದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ, ಪೋಷಕರು ಮಾಡುವ ತಪ್ಪುಗಳೇನು ಎಂಬ ಕಥೆ ಹೊಂದಿದೆ. ಚಿತ್ರಕ್ಕೆ ವಿನುಮನಸು ಸಂಗೀತ ನೀಡಿದ್ದು, ಐದು ಹಾಡುಗಳಿವೆ. ಕೆ.ಕಲ್ಯಾಣ್‌ ಎರಡು ಗೀತೆ ರಚಿಸಿದ್ದು, ಆ ಪೈಕಿ ಒಂದು ಹಾಡನ್ನು ಹಾಡಿದ್ದಾರೆ. ನಿರ್ದೇಶಕರು ಬರೆದಿರು “ಊರ್‌ ತುಂಬ ಹುಡುಗೀರು, ನಮಗಂತ ಯಾರವರೋ, ಯಾರೊಬ್ಬರೂ ಸಿಗ್ತಾ ಇಲ್ವಲ್ಲೋ …’? ಎಂಬ ಗೀತೆಗೆ ಕಲ್ಯಾಣ್‌ ಧ್ವನಿಯಾಗಿದ್ದಾರೆ. ಇದೇ ಮೊದಲ ಸಲ ಹಾಡಿರುವ ಕಲ್ಯಾಣ್‌, ಈ ಹಿಂದೆ ತಮ್ಮ ಸಂಗೀತ ನಿರ್ದೇಶನದ ಚಿತ್ರಗಳಿಗೆ ಟ್ರಾಕ್‌ ಹಾಡಿದ್ದರು. ಈಗ ಗೆಳೆತನಕ್ಕೆ ಈ ಹಾಡು ಹಾಡಿದ್ದಾರೆ.

ಸದ್ಯಕ್ಕೆ “ಜೊತೆಯಾಗಿರು’ ಸಿನಿಮಾ ಡಿಐ ಕೆಲಸದಲದಲ್ಲಿ ನಿರತವಾಗಿದೆ. ಏಪ್ರಿಲ್‌ನಲ್ಲಿ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಕೋವಿಡ್ 19 ಸಮಸ್ಯೆಯಿಂದಾಗಿ ಮುಂದಕ್ಕೆ ಹೋಗಿದೆ. ಚಿತ್ರಕ್ಕೆ ವೆಂಕಟೇಶ್‌ ಹಾಗು ರಶ್ಮಿ ನಾಯಕರಾಗಿದ್ದಾರೆ. ಸುನೀಲ್‌ ಕಾಂಚನಾ, ಪೂಜಾ ಕೂಡ ನಾಯಕ, ನಾಯಕಿಯರು. ರೇಣು ಮೂವೀಸ್‌ ಬ್ಯಾನರ್‌ನಲ್ಲಿ ಗೆಳೆಯರು ಸೇರಿ ಸಿನಿಮಾ ನಿರ್ಮಿಸಿದ್ದಾರೆ. ಕಳಸ , ಸಕಲೇಶಪುರ, ಮಂಗಳೂರು, ಬೆಂಗಳೂರು, ಮಡಿಕೇರಿ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. “ಮಜಾಟಾಕೀಸ್‌’ ಖ್ಯಾತಿಯ ರಾಜಶೇಖರ್‌ ಸಂಭಾಷಣೆ ಬರೆದು, ಒಂದು ಪಾತ್ರದಲ್ಲೂ ನಟಿಸಿದ್ದಾರೆ. ರಾಜಾ ಶಿವಶಂಕರ್‌ ಮತ್ತು ಆನಂದ್‌ ಛಾಯಾಗ್ರಹಣವಿದೆ. ಸತೀಶ್‌ ಚಂದ್ರಯ್ಯ ಸಂಕಲನವಿದೆ.­

Advertisement

Udayavani is now on Telegram. Click here to join our channel and stay updated with the latest news.

Next