ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ-2022 ಅಂಗವಾಗಿ ನಗರದ ಎನ್.ವಿ.ಮೈದಾನದಲ್ಲಿ ಸೆ.15ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ಕಲ್ಯಾಣ ಕನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ವಿವಿಧ ಜನಪ್ರತಿನಿಗಳು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳಿಗೆಗಳನ್ನು ವೀಕ್ಷಿಸಿದರು.
ಇದು ಮೊಟ್ಟ ಮೊದಲ ಬಾರಿಗೆ ಕಲಬುರಗಿ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ 200ಕ್ಕೂ ಹೆಚ್ಚಿನ ಮಳಿಗೆಯ ವೈವಿಧ್ಯಮಯ ವಸ್ತು ಪ್ರದರ್ಶನ ಮತು ಮಾರಾಟ ಮೇಳ ಆಯೋಜಿಸಲಾಗಿದೆ. ಕಲಬುರಗಿ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸ್ಥಳೀಯವಾಗಿ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿದಲ್ಲಿ ದೇಶದಲ್ಲಿ 10 ಕೋಟಿ ಜನರ ಉದ್ಯೋಗ ಸಮಸ್ಯೆ ನಿವಾರಿಸಬಹುದಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿ, ಈ ಭಾಗದ ಜಿಲ್ಲೆಗಳ ಭೌಗೋಳಿಕ ಮತ್ತು ಸ್ಥಳೀಯವಾಗಿ ಮಹತ್ವ ಪಡೆದಿರುವ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯರು ತಯಾರು ಮಾಡಿರುವ ವಸ್ತುಗಳಾದ ಕೈಮಗ್ಗ, ಬಟ್ಟೆ, ತಿಂಡಿ-ತಿನಿಸುಗಳನ್ನು ಖರೀದಿಸುವ ಮೂಲಕ ಸ್ಥಳೀಯರಿಗೆ ಪ್ರೋತ್ಸಾಹಿಸಬೇಕಿದೆ. ಸೆ.17ರಂದು ಮುಖ್ಯಮಂತ್ರಿಗಳು ಈ ಮಾರಾಟ ಮೇಳವನ್ನು ಉದ್ಘಾಟಿಸಲಿದ್ದಾರೆ. ಪ್ರತಿ ದಿನ ಬೆಳಗ್ಗೆ 10ಗಂಟೆಯಿಂದ ರಾತ್ರಿ 10ಗಂಟೆ ವರೆಗೆ ಮಾರಾಟ ಮೇಳ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಬಂದು ವಸ್ತು, ಉತ್ಪನ್ನಗಳು ಖರೀದಿಸಬೇಕೆಂದರು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿ, ಸ್ಥಳೀಯರಿಗೆ ನೆರವಾಗಲೆಂದೆ ಬೃಹತ್ ವಸ್ತು ಪ್ರದರ್ಶನ ಮೇಳ ಆಯೋಜಿಸಿದೆ. ಪ್ರದೇಶದ ವಿವಿಧ ಜಿಲ್ಲೆಗಳಿಂದ ಮಳಿಗೆ ಹಾಕಲು ಉದ್ಯಮಿಗಳು, ಸಂಘ-ಸಂಸ್ಥೆಗಳು ಮುಂದೆ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಜೆಸ್ಕಾಂ ಎಂ.ಡಿ. ರಾಹುಲ್ ಪಾಂಡ್ವೆ, ಕೆ.ಕೆ. ಆರ್.ಡಿ.ಬಿ ಉಪ ಕಾರ್ಯದರ್ಶಿ ಆನಂದ ಪ್ರಕಾಶ ಮೀನಾ, ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ಮಾಣಿಕರಾವ್ ರಘೋಜಿ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.