Advertisement

ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ದೀರ್ಘ‌ ಯೋಜನೆ

01:08 PM Sep 18, 2022 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ದೀರ್ಘ‌ ಕಾಲದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

Advertisement

ನಗರದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳನ್ನು ವಿಸ್ತರಿಸುವುದು, ಶಿಕ್ಷಣ ಅಭಿವೃದ್ಧಿ, ಹೆಣ್ಣು ಮಕ್ಕಳ ಪೌಷ್ಟಿಕತೆ ಹೆಚ್ಚಳ, ಆರೋಗ್ಯ ಸುಧಾರಣೆ ಹಾಗೂ ಯುವಶಕ್ತಿಗೆ ಉದ್ಯೋಗದಂತಹ ಕ್ಷೇತ್ರಗಳಲ್ಲಿ ಸುದೀರ್ಘ‌ ಯೋಜನೆಗಳನ್ನು ಕೈಗೊಂಡು ಪ್ರಾದೇಶಿಕ ಅಸಮತೋಲನ ನಿವಾರಿಸಲಾಗುವುದು ಎಂದು ಹೇಳಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರೊ|ನಂಜುಂಡಪ್ಪ ನೀಡಿರುವ ವರದಿ ಎರಡು ದಶಕಗಳು ಕಳೆದಿದ್ದು, ವರದಿ ಆಧಾರದ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಆಗಿರುವ ಸುಧಾರಣಾ ಕ್ರಮಗಳು, ಇನ್ನೂ ಆಗಬೇಕಿರುವ ಕಾರ್ಯಗಳ ಕುರಿತಾಗಿ ಹೊಸದಾದ ವರದಿ ರೂಪಿಸಿ ಅದರ ಆಧಾರದ ಮೇಲೆ ಅಭಿವೃದ್ಧಿ ಕೇಂದ್ರಿಕೃತಗೊಳಿಸುವ ಮುಖಾಂತರ ಅಭಿವೃದ್ಧಿಗೆ ನಾಂದಿ ಹಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 2100 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಹೊಸದಾಗಿ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾತಿ ನೀಡಲಾಗಿದೆ. 14 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಲಾ 8ಕೋಟಿ ರೂ.ಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಹಿಂದಿನ ಸರ್ಕಾರ ಮಂಡಳಿಗೆ ಹಣ ಘೋಷಣೆ ಮಾಡಿತ್ತು. ಆದರೆ ಬಿಡುಗಡೆ ಮಾಡಿರಲಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಘೋಷಿತ ಅನುದಾನ ಬಿಡುಗಡೆ ಮಾಡಿದ್ದೇವೆಯಲ್ಲದೇ ಕ್ರಿಯಾಯೋಜನೆ ರೂಪಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದು ಅಭಿವೃದ್ಧಿಯ ಬದ್ಧತೆ ತೋರಿಸುತ್ತದೆ ಎಂದರು.

ಮಾನವ ಸಂಪನ್ಮೂಲ ಸಂಘಕ್ಕೆ 300ಕೋಟಿ ರೂ.: ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರು ಅಧ್ಯಕ್ಷರಾಗಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ 300 ಕೋಟಿ ರೂ. ಅನುದಾನ ಮಂಜೂರು ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಘೋಷಿಸಿದರು.

Advertisement

ಎರಡನೇ ವರ್ತುಲ್ರಸ್ತೆ: ಕಲಬುರಗಿ ನಗರದ ಎರಡನೇ ವರ್ತುಲ ರಸ್ತೆಗೆ ಕೇಂದ್ರ ಸರ್ಕಾರ ಮುಂದಾಗಿದೆಯಲ್ಲದೇ ಶೇ. 25 ಭೂಮಿ ರಾಜ್ಯ ಸರ್ಕಾರ ನೀಡಲು ನಿರ್ಧಾರ ತೆಗೆದುಕೊಂಡಿದೆ. ಶೀಘ್ರ ಕಾರ್ಯ ಆರಂಭವಾಗಲಿದೆ ಎಂದು ಸಿಎಂ ಹೇಳಿದರು.

ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಗೃಹ ಸಚಿವ ಆರಗ ಜ್ಞಾನೇಂದ್ರ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ತೋಟಗಾರಿಕೆ ಮತ್ತು ಯೋಜನೆ ಹಾಗೂ ಸಾಂಖ್ಯಿಕ ಸಚಿವ ಮುನಿರತ್ನ, ಸಂಸದ ಡಾ|ಉಮೇಶ್‌ ಜಾಧವ, ಶಾಸಕರಾದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕೆಕೆಆರ್‌ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ, ಕೃಷಿ ಮತ್ತು ಮಾನವ ಸಂಪನ್ಮೂಲ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಶಾಸಕರಾದ ಬಸವರಾಜ ಮತ್ತಿಮಡು, ಡಾ|ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಬಾಬುರಾವ ಚಿಂಚನಸೂರ, ಬಿ.ಜಿ. ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next