Advertisement

ಎಪ್ರಿಲ್‌ ಮೊದಲ ವಾರದೊಳಗೆ ಮಾರುಕಟ್ಟೆಗೆ “ಕಲ್ಪರಸ’

10:06 AM Mar 06, 2020 | mahesh |

ಕುಂದಾಪುರ: ತೆಂಗಿನ ಮರಗಳಿಂದ “ಕಲ್ಪರಸ’ ಉತ್ಪಾದಿಸುವ ಸಂಬಂಧ, ರಾಜ್ಯದ 2ನೇ ತೆಂಗು ಸಂಸ್ಕರಣ ಘಟಕವನ್ನು ಕುಂದಾಪುರದ ಜಪ್ತಿಯಲ್ಲಿ ಆರಂಭಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಎಪ್ರಿಲ್‌ ಮೊದಲ ವಾರದಲ್ಲಿ ನೀರಾ ಮಾದರಿಯ “ಕಲ್ಪರಸ’ ಮಾರುಕಟ್ಟೆಗೆ ಬರಲಿದೆ.

Advertisement

ಉಡುಪಿ ಜಿಲ್ಲೆಯ 54 ತೆಂಗು ಬೆಳೆಗಾರರ ಸೊಸೈಟಿಗಳ 4,820 ಸದಸ್ಯರನ್ನು ಒಳಗೊಂಡ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಂಬಾರ ಉತ್ಪಾದಕರ ಕಂಪೆನಿ (ಉಕಸ) ಆರಂಭಿಸುವ ಯೋಜನೆಯನ್ನು ಉಡುಪಿಯ ಭಾರತೀಯ ಕಿಸಾನ್‌ ಸಂಘ ಹಾಕಿಕೊಂಡಿತ್ತು.

ಏನಿದು “ಕಲ್ಪರಸ’?
ಕಾಸರಗೋಡಿನ ಸಿಪಿಸಿಆರ್‌ಐ ಮಾರ್ಗ ದರ್ಶನದಲ್ಲಿ ತೆಂಗಿನ ಮರದ ಕೊಂಬನ್ನು ಟ್ಯಾಪಿಂಗ್‌ ಮಾಡಿ ನೀರಾದಂಥ ರಸ ತೆಗೆಯಲಾಗುತ್ತದೆ. ಅದನ್ನು ಸಂಸ್ಕರಣ ಘಟಕದಲ್ಲಿ
60 ಡಿಗ್ರಿ ಸೆ. ಉಷ್ಣತೆಯಲ್ಲಿ ಪ್ಯಾಶ್ಚರೀಕರಿಸಿ, ಹುಳಿಯ ಅಂಶ ತೆಗೆದು ತಂಪು ಪಾನೀಯವಾಗಿ ಮಾರುಕಟ್ಟೆಗೆ ಬಿಡಲಾಗುತ್ತದೆ.

ವಾರ್ಷಿಕ 2.40 ಲಕ್ಷ ರೂ. ಆದಾಯ
ಜಿಲ್ಲೆಯ ತೆಂಗು ಬೆಳೆಗಾರರ ಸೊಸೈಟಿಗಳಲ್ಲಿ ನೋಂದಾಯಿಸಿದ 4,820 ಬೆಳೆಗಾರರಿದ್ದು, 3.88 ಲಕ್ಷ
ತೆಂಗಿನ ಮರಗಳಿವೆ. ಕಲ್ಪರಸ ತೆಗೆಯಲು ರೈತರು 8 ಮರಗಳನ್ನು ನೀಡಿದರೆ ಅದರಿಂದ ವರ್ಷಕ್ಕೆ 2.40 ಲಕ್ಷ ರೂ. ಆದಾಯ ಸಿಗಲಿದೆ. ಮರ ಹತ್ತುವುದಕ್ಕೆ ಏಣಿ, ಕಲ್ಪರಸವನ್ನು ಇಳಿಸುವ ವಿಶಿಷ್ಟ ರೀತಿವಿನ್ಯಾಸ ಗೊಳಿಸಿರುವ ಪಾತ್ರೆ, ಅದನ್ನು ಸಂಗ್ರಹಿಸಿಡಲು ತಾಪಮಾನ ನಿಯಂತ್ರಿತ ಬಾಕ್ಸ್‌ಗಳನ್ನು ಘಟಕವೇ ಪೂರೈಸುತ್ತದೆ.

ಉದಯವಾಣಿ ವರದಿ
ಶಿವಮೊಗ್ಗದ ಭದ್ರಾವತಿ ಬಳಿಕ ರಾಜ್ಯದ 2ನೇ ತೆಂಗು ಘಟಕ ಜಪ್ತಿಯಲ್ಲಿ ಆರಂಭವಾಗುವ ಬಗ್ಗೆ, ನೀರಾ ಮಾದರಿಯ “ಕಲ್ಪರಸ’ ಮಾರುಕಟ್ಟೆಗೆ ಬರುವ ಕುರಿತಂತೆ “ಉದಯವಾಣಿ’ ಜ. 6ರಂದು ವಿಶೇಷ ವರದಿಯನ್ನು ಪ್ರಕಟಿಸಿತ್ತು.

Advertisement

ತಾಂತ್ರಿಕ ಅನುಮೋದನೆ
ಇದು ನೀರಾ ಮಾದರಿಯದಾಗಿದ್ದರೂ ಸಂಸ್ಕರಿಸುವುದರಿಂದ ಅಮಲು ಇರುವುದಿಲ್ಲ. ಈಗಾಗಲೇ ಅಬಕಾರಿ ಇಲಾಖೆಯಿಂದ ತಾಂತ್ರಿಕ ಅನುಮೋದನೆ ಸಿಕ್ಕಿದೆ. ಪ್ರಾಯೋಗಿಕವಾಗಿ ಕಲ್ಪರಸ ತೆಗೆಯಲಾಗುತ್ತಿದೆ. ಸದ್ಯಕ್ಕೆ ಜಪ್ತಿಯಲ್ಲಿ ತಾತ್ಕಾಲಿಕ ಕಟ್ಟಡವನ್ನು ನಿರ್ಮಿಸಿ, ಅಲ್ಲಿ ಸಂಸ್ಕರಣ ಘಟಕ ಕಾರ್ಯಾರಂಭಿಸಲಿದೆ. ಆ ಬಳಿಕ ಇಲ್ಲೇ ದೊಡ್ಡ ಮಟ್ಟದಲ್ಲಿ ಆರಂಭವಾಗಲಿದೆ. ಎಪ್ರಿಲ್‌ ಮೊದಲ ವಾರದಲ್ಲಿ ಕಲ್ಪರಸ ಮಾರುಕಟ್ಟೆಗೆ ಬರಲಿದೆ.
– ಸತ್ಯನಾರಾಯಣ ಉಡುಪ ಜಪ್ತಿ, ಪ್ರ. ಕಾರ್ಯದರ್ಶಿ, ಭಾರತೀಯ ಕಿಸಾನ್‌ ಸಂಘ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next