Advertisement
ಬಸ್ ನಿಲ್ದಾಣದ ಛಾವಣಿಯ ಮರದ ಪಕ್ಕಾಸು ಮುರಿದು ಹೋಗಿದೆ. ಹೆಂಚಿನ ಛಾವಣಿಯ ಒಂದು ಭಾಗ ಕುಸಿದು ಹೋಗಿದ್ದು, ಪ್ರಯಾಣಿಕರಿಗೆ ಬಸ್ ನಿಲ್ದಾಣದೊಳಗೆ ಕುಳಿತುಕೊಳ್ಳದ ರೀತಿಯಲ್ಲಿದೆ. ಕಲ್ಲಪಣೆಗೆ ದಿನಂಪ್ರತಿ ಸರಕಾರಿ ಬಸ್ ಹೋಗುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಆದರೆ ಬಸ್ ನಿಲ್ದಾಣದ ದುಃಸ್ಥಿತಿಯಿಂದಾಗಿ ಪ್ರಯಾಣಿಕರು ರಸ್ತೆಯಲ್ಲೇ ಬಸ್‌ಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಳಿ ಮಳೆಗೆ ಮರದ ಛಾವಣಿಯ ಪಕ್ಕಾಸು ಶಿಥಿಲಗೊಂಡು ಭಾಗಶಃ ಕುಸಿದು ಹೋಗಿದ್ದು, ಛಾವಣಿ ಪೂರ್ಣವಾಗಿ ಕುಸಿದು ಬೀಳುವ ಅಪಾಯದಲ್ಲಿದೆ. ಮುಖ್ಯ ರಸ್ತೆಯ ಬದಿಯಲ್ಲೇ ಇರುವ ಈ ಬಸ್ ನಿಲ್ದಾಣದಲ್ಲಿ ಅಂಗಡಿ ಕೋಣೆ ಸಹಿತ ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪ್ರಯಾಣಿಕರು ಬಿಸಿಲಿಗೆ ನಿಂತು ಕಾಯುವುದನ್ನು ತಪ್ಪಿಸಲು ಛಾವಣಿಗೆ ಸಿಮೆಂಟ್ ಶೀಟ್ ಹಾಕಿಯಾದರೂ ಸರಿಪಡಿಸಿಕೊಡಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಬಸ್ ನಿಲ್ದಾಣದ ಛಾವಣಿ ರಿಪೇರಿ ಮಾಡಿದಲ್ಲಿ ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಹಲವು ವರ್ಷಗಳಿಂದ ಸಾರ್ವಜನಿಕ ಬಸ್ ನಿಲ್ದಾಣ ರಿಪೇರಿಯಾಗದೆ ಬೀಳುವ ಸ್ಥಿತಿಯಲ್ಲಿದೆ. ಛಾವಣಿ ಸಂಪೂರ್ಣ ಕುಸಿದು ಬೀಳುವ ಮೊದಲು ಸರಿಪಡಿಸಬೇಕಿದೆ.
– ಸಂತೋಷ್ ಕೊಡಿಯಾಲ, ಸ್ಥಳೀಯರು ಶೀಘ್ರ ದುರಸ್ತಿ
ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಲು ನಮ್ಮ ಗ್ರಾಮ ನಮ್ಮ ಯೋಜನೆಯಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಪಂಚಾಯತ್ ಸಭೆಯಲ್ಲೂ ಬಸ್ ನಿಲ್ದಾಣದ ದುರಸ್ತಿ ಬಗ್ಗೆ ಪ್ರಸ್ತಾವಿಸಿದ್ದೇವೆ. ಅನುದಾನ ಬಂದ ಕೂಡಲೇ ಛಾವಣಿ ದುರಸ್ತಿಪಡಿಸಲಾಗುವುದು.
- ಹೂವಪ್ಪ , ಪಿಡಿಒ, ಕೊಡಿಯಾಲ ಗ್ರಾ.ಪಂ.