Advertisement

ವಿವಿಧ ಸಾಮಾಜಿಕ ಕಾರ್ಯಗಳಿಂದ ಕೃಷಿಕರಿಗೆ ನೆರವಾಗಿರುವ ಸಂಘ

01:14 AM Feb 24, 2020 | Sriram |

55 ವರ್ಷಗಳ ಹಿಂದೆ ಸ್ಥಾಪನೆಯಾದ ಕಲ್ಲಮುಂಡ್ಕೂರು ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ಕೃತಕ ಗರ್ಭಧಾರಣ ವ್ಯವಸ್ಥೆ, ಬಿಎಂಸಿ ಮೂಲಕ ಶೀಥಲೀಕರಣ ಹೀಗೆ ಸದಸ್ಯರಿಗೆ ನಾನಾ ಸೌಲಭ್ಯಗಳನ್ನು ನೀಡುವುದರೊಂದಿಗೆ ತಾಲೂಕು, ಜಿಲ್ಲಾ ಪ್ರಶಸ್ತಿಯನ್ನು ತನ್ನದಾಗಿಸಿದೆ.

Advertisement

ಮೂಡುಬಿದಿರೆ: ಕಲ್ಲಮುಂಡ್ಕೂರು ಹಾಲು ಉತ್ಪಾದಕರ ಸಹಕಾರ ಸಂಘವು 1965ರಲ್ಲಿ 120 ಮಂದಿ ಸದಸ್ಯರೊಂದಿಗೆ ನಿಡ್ಡೋಡಿಯಲ್ಲಿ ಆರಂಭವಾಯಿತು.

ಆರಂಭಿಕ ಸಂಗ್ರಹ ದಿನವಹಿ 20 ಲೀ. ಹಾಲು, 1986ರ ಮಾ. 24ರಿಂದ ಕೆ.ಎಂ.ಎಫ್‌. ಸಹಯೋಗದಲ್ಲಿ ಆಮುಲ್‌ ಮಾದರಿಯಲ್ಲಿ ಪರಿವರ್ತನೆಗೊಂಡು ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ಸಂಯೋಜನೆಗೊಂಡಿತು. ಎರಡು ಉಪಕೇಂದ್ರಗಳನ್ನು ರಚಿಸಿ 1500 ಲೀ. ಹಾಲನ್ನು ಸಂಗ್ರಹಿಸಲಾರಂಭಿಸಲು ಸಾಧ್ಯವಾಯಿತು.

ಮುಂದೆ, ಕುದ್ರಿಪದವು ಹಾಗೂ ಶುಂಠಿಲಪದವು ಪ್ರದೇಶದಲ್ಲಿ ಸ್ವಂತ ನೆಲೆಯಲ್ಲಿ ಸಂಘ ಸ್ಥಾಪನೆಯಾದ ಅನಂತರ ಕಲ್ಲಮುಂಡ್ಕೂರು ಸಂಘದಲ್ಲಿ ಪ್ರಸ್ತುತ ದಿನವಹಿ 600 ಲೀ. ಹಾಲು ಸಂಗ್ರಹಿಸಲಾಗುತ್ತಿದೆ. ಸದ್ಯ 197 ಮಂದಿ ಸದಸ್ಯರಿದ್ದಾರೆ.

1992ರ ನ. 3ರಂದು ಸ್ವಂತ ಕಟ್ಟಡವನ್ನು ಹೊಂದಿ, 1999ರ ಮೇ 5ರಂದು ವಿಸ್ತರಣ ಕಟ್ಟಡವನ್ನು ಅಂದಿನ ಕಾರ್ಮಿಕ ಸಚಿವ ಕೆ. ಅಮರನಾಥ ಶೆಟ್ಟಿ ಉದ್ಘಾಟಿಸಿದರು.
ಆಗ ಜಿ. ವೆಂಕಟರಮಣ ಭಟ್‌ ಅಧ್ಯಕ್ಷರಾಗಿದ್ದರು. ಕಟ್ಟಡ ನಿರ್ಮಾಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಅ. ಯೋಜನೆ, ದ.ಕ ಮತ್ತು ಉಡುಪಿ ಜಿ.ಪಂ. ಗಳು, ದ.ಕ. ಹಾಲು ಒಕ್ಕೂಟ ಪ್ರಮುಖವಾಗಿ ಸಹಕರಿಸಿವೆ.

Advertisement

2016ರ ಎ. 16ರಂದು, ಸಂಘದ ಸುವರ್ಣ ಮಹೋತ್ಸವ ಸಂದರ್ಭ, ಸಾಂದ್ರ ಶೀಥಲೀಕರಣ ಘಟಕವನ್ನು ಸ್ಥಾಪಿಸಲಾಯಿತು.

ಕಾರ್ಯವಾಹಿನಿ
ಸದಸ್ಯರು ಉತ್ಪಾದಿಸುವ ಹಾಲಿಗೆ ವರ್ಷಪೂರ್ತಿ ಸ್ಥಿರ ಮಾರುಕಟ್ಟೆ, ಶುದ್ಧ ಹಾಗೂ ಗುಣಮಟ್ಟಕ್ಕೆ ಅನುಗುಣವಾಗಿ ಧಾರಣೆ. ನಂದಿನ ಪಶುಆಹಾರ, ನಂದಿನಿ ಲವಣ ಮಿತ ದರದಲ್ಲಿ ಒದಗಿಸಲಾಗುತ್ತಿದೆ. ರಾಸುಗಳಿಗೆ ಸಂಘದ ಮೂಲಕ ಕೃತಕ ಗರ್ಭಧಾರಣೆ ಹಾಗೂ ಪ್ರಥಮ ಚಿಕಿತ್ಸೆ ಸೌಲಭ್ಯ. ರಾಸುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ, ಸಣ್ಣ ಕರುಗಳಿಗೆ ನಿರಂತರವಾಗಿ ಜಂತು ಹುಳ ನಿವಾರಣ ಔಷಧವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಸಾಮಾಜಿಕ ಕಳಕಳಿ
ಸಂಘದ ಕಟ್ಟಡದ ಮಾಳಿಗೆಯ ಸಭಾ ಭವನವನ್ನು ಸದಸ್ಯರು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಉಚಿತ ವಾಗಿ ನೀಡಲು ಉದ್ದೇಶಿ ಸಲಾಗಿದೆ. ಯಕ್ಷಗಾನ ತಾಳಮದ್ದಳೆ, ಶುದ್ಧ ಹಾಲು ಉತ್ಪಾದನೆ ಕುರಿತಾದ ಮಾಹಿತಿ ಕಾರ್ಯಾ ಗಾರವನ್ನು ಏರ್ಪಡಿಸಲಾಗಿದೆ. ಸಂಘದ ಕೌಂಟರ್‌ನಲ್ಲಿ ಪ್ರತಿ ತಿಂಗಳ 15 ಮತ್ತು 23ರಂದು ಮೆಸ್ಕಾಂ ಬಿಲ್‌ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಸದಸ್ಯರಿಗೆ ಅಧ್ಯಯನ ಪ್ರವಾಸ, ಪಶು ಆಹಾರ ಕಾರ್ಖಾನೆ, ಹಾಲಿನ ಡೈರಿ ಸಂದರ್ಶನ ಏರ್ಪಡಿಸಲಾಗಿದೆ.

ಪ್ರಶಸ್ತಿ
1997-98ರಲ್ಲಿ ಸಂಘಕ್ಕೆ ತಾಲೂಕಿನ ಉತ್ತಮ ಸಂಘ ಪ್ರಶಸ್ತಿ, 2018-19ರಲ್ಲಿ ಜಿಲ್ಲಾ ಉತ್ತಮ ಬಿಎಂಸಿ ಪ್ರಶಸ್ತಿ ಬಂದಿವೆ. ಪ್ರಾರಂಭದಿಂದ ಈವರೆಗೂ ಎಂಬಿಆರ್‌ಟಿಯಲ್ಲಿ ಸರಾಸರಿ ನಿಗದಿತ ಸಮಯ ಕಾಯ್ದುಕೊಂಡು ಬರಲಾಗಿದೆ.

ರೈತರ/ಹೈನುಗಾರರ ಹಿತರಕ್ಷಣೆಯನ್ನು ಗಮನದಲ್ಲಿರಿಸಿಕೊಂಡು ಯುವಕರನ್ನು, ಮಹಿಳೆಯರನ್ನು ಪ್ರೋತ್ಸಾಹಿಸುವುದು ಆಡಳಿತ ಮಂಡಳಿಯ ಉದ್ದೇಶ. ಈ ದಿಶೆಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹಾಗೂ ಆಡಳಿತ ಮಂಡಳಿ ಸದಸ್ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಯುವಕರಲ್ಲಿ ಹೈನುಗಾರಿಕೆ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಮೆಲ್ವಿನ್‌ ಸಲ್ಡಾನ್ಹಾ , ಅಧ್ಯಕ್ಷರು, ಕಲ್ಲಮುಂಡ್ಕೂರು ಹಾಲು ಉತ್ಪಾದಕರ ಸಹಕಾರ ಸಂಘ

ಅಧ್ಯಕ್ಷರು
ಎನ್‌. ಶಿವರಾಮ ಶೆಟ್ಟಿ, ಎನ್‌. ಜಗನ್ನಾಥ ಶೆಟ್ಟಿ ನಿಡ್ಡೋಡಿ ಬಾವ, ಬಿ. ಕೃಷ್ಣ ರೈ, ನಿಡ್ಡೋಡಿ ಬಾವ ನರಸಿಂಹ ಮಡಿವಾಳ, ಮಾಧವರಾಯ ಪ್ರಭು, ಜಿ. ವೆಂಕಟರಮಣ ಭಟ್‌, ಚಂದಯ್ಯ ಸುವರ್ಣ, ದಿನಕರ ಶೆಟ್ಟಿ, 2019ರಿಂದ ಮೆಲ್ವಿನ್‌ ಸಲ್ಡಾನ್ಹಾ.
ಕಾರ್ಯದರ್ಶಿಗಳು
ಕಾರ್ಯದರ್ಶಿಗಳಾಗಿ ಕಮಲಾಕ್ಷ ಭಟ್‌, ಬ್ಯಾಪ್ಟಿಸ್ಟ್‌ ಡಿ’ಸೋಜಾ ಹಾಗೂ 1986ರಿಂದ ಚಂದ್ರಹಾಸ ಜೋಗಿ ಕಲ್ಲಮುಂಡ್ಕೂರು ಸೇವೆಯಲ್ಲಿದ್ದಾರೆ.

-  ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next