ಪುಣೆ: ತಾಯ್ನಾಡನ್ನು ತೊರೆದು ಮಹಾರಾಷ್ಟ್ರದ ಈ ಪುಣೆಯನ್ನು ಕರ್ಮಭೂಮಿಯನ್ನಾಗಿಸಿಕೊಂಡು ಇಲ್ಲಿ ವಿವಿಧ ಉದ್ಯೋಗ ವ್ಯವಹಾರಗಳೊಂದಿಗೆ ಶ್ರಮ ವಹಿಸಿ ಸಾಧನೆಯನ್ನು ಮಾಡಿದ ಬಂಟ ಸಮಾಜ ಸಮಾಜ ಮುಖೀಯಾಗಿಯೂ ಗುರುತಿಸಿಕೊಂಡು ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಸಂತಸದ ವಿಚಾರವಾಗಿದೆ1 ಎಂದು ಕರಾವಳಿ ಕರ್ನಾಟಕದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದ ಮುಂದಾಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖರಾಗಿರುವ ಡಾ| ಕಲ್ಲಡ್ಕ ಪ್ರಭಾಕರ ಭಟ್ ನುಡಿದರು.
ಅವರು ಜು. 2 ರಂದು ಪುಣೆ ಬಂಟರ ಭವನದಲ್ಲಿ ಬಂಟರ ಸಂಘದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಪುಣೆಯಲ್ಲಿ ಬಂಟ ಸಮಾಜವು ನಿರ್ಮಿಸಿದ ಈ ಸುಂದರವಾದ ಭವ್ಯವಾದ ಸಮಾಜದ ಭವನವು ಸುಸಜ್ಜಿತವಾಗಿ ರೂಪುಗೊಂಡಿದೆ. ತುಳು ನಾಡನ್ನು ನೆನಪಿಸುವ ಸುಂದರ ಕಲಾ ಕೃತಿಯ ಚಾವಡಿ, ದೇವರ ಮಂಟಪ, ಸಮಾಜದ ಅಭ್ಯುದಯದ ಸಾಧ ಕರ ಚಿಂತನೆ ಯೊಂದಿಗೆ ಸಾಂಸ್ಕೃತಿಕ, ಸಾಮಾ ಜಿಕ, ಧಾರ್ಮಿಕ ಚಿಂತನೆಗಳು ಇಲ್ಲಿ ಕಲಾತ್ಮಕವಾಗಿ ಮೂಡಿ ಬಂದಿದೆ ಎಂದರು.
ಬಂಟ ಸಮಾಜವು ತನ್ನ ಸಮಾಜದ ಕೆಳಸ್ತರದ ಬಂಧುಗಳನ್ನೂ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ನೆರವಾಗುತ್ತಾ ತನ್ನ ಹುಟ್ಟಿದೂರನ್ನೂ ಮರೆಯದೆ ಅಲ್ಲಿನ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಲ್ಲದೆ ಅನ್ಯ ಸಮಾಜವನ್ನೂ ಪ್ರೀತಿಸಿಕೊಂಡು ಅವರ ಬೆಳವಣಿಗೆಗೂ ಮಹತ್ವದ ಕೊಡುಗೆ ನೀಡಿ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದರು.
ನಾವು ಎಲ್ಲಿದ್ದರೂ ನಮ್ಮ ಭಾಷೆ ಸಂಸ್ಕೃತಿಯನ್ನು ಮರೆಯದೆ ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ದೇಶಭಕ್ತಿ, ದೈವ ದೇವರ ಮೇಲಿನ ಭಕ್ತಿ, ಸಮಾಜದ ಬಗ್ಗೆ ಅಭಿಮಾನ, ಮಾತಾ ಪಿತರ ಬಗ್ಗೆ, ಗುರುಹಿರಿಯರ ಬಗ್ಗೆ ಗೌರವವನ್ನು ಬೆಳೆಸಿಕೊಂಡು ಜೀವನವನ್ನು ಸಾರ್ಥಕವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರೂ ನಮ್ಮ ಹಿಂದೂ ಧರ್ಮದ ಬಗ್ಗೆ ಅಭಿಮಾನ ಬೆಳೆಸಿಕೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಂಡು ದೇಶವನ್ನು ಕಟ್ಟಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ಮಾತನಾಡಿ, ವಿವಿಧ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಕಾರ್ಯಗಳನ್ನು ಮಾಡುತ್ತಿರುವ ಹಿಂದೂಪರ ವಿಚಾರ ಧಾರೆಗಳನ್ನು ಪ್ರಮುಖವಾಗಿ ಅಳವಡಿಸಿಕೊಂಡಿರುವ ಮಹಾನ್ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಳ್ಳುವ ಡಾ| ಪ್ರಭಾಕರ್ ಭಟ್ ನಮ್ಮ ವಿನಂತಿ ಅನಿರೀಕ್ಷಿತವಾಗಿ ನಮ್ಮ ಭವನಕ್ಕೆ ಆಗಮಿಸಿ ಭವನವನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದಕ್ಕೆ ನಮಗೆ ಅಭಿಮಾನವೆನಿಸುತ್ತಿದೆ. ಅವರ ಪಾದಸ್ಪರ್ಶದಿಂದ, ಅವರ ಆಶೀರ್ವಾದದಿಂದ ನಮ್ಮ ಸಮಾಜ ಇನ್ನಷ್ಟು ಮುಂದುವರಿಯಲು ಪ್ರೇರಣೆ ನೀಡಿದೆ. ಸಮಾಜ ಮುಖೀಯಾಗಿ ಜೀವನವನ್ನು ಮುಡಿಪಾಗಿಟ್ಟ ಇಂತಹ ಮಹೋನ್ನತ ವ್ಯಕ್ತಿಗಳಿಂದ ಸಮಾಜ ಸುಧಾರಣೆಯ ಪಥದಲ್ಲಿ ಮುನ್ನಡೆಯುತ್ತಿದೆ. ಪುಣೆ ಬಂಟರ ಸಂಘದ ವತಿಯಿಂದ ಅವರನ್ನು ಗೌರವಿಸಲು ಆನಂದವಾಗುತ್ತಿದೆ. ಭವಿಷ್ಯದಲ್ಲಿ ಹಿಂದುತ್ವದ ಬೆಳವಣಿಗೆಯಲ್ಲಿ ನಿಮ್ಮ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಶುಭವನ್ನು ಹಾರೈಸೋಣ ಎಂದರು.
ಮೊದಲಿಗೆ ಭವನದ ಚಾವಡಿಯಲ್ಲಿ ಡಾ| ಪ್ರಭಾಕರ ಭಟ್ ದೀಪ ಪ್ರಜ್ವಲಿಸಿದರು. ಪ್ರಭಾಕರ ಭಟ್ ಅವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ಸಮ್ಮಾನಿಸಲಾಯಿತು. ಅವರೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿಯ ಶಂಭು ಶೆಟ್ಟಿ ಅವರನ್ನೂ ಗೌರವಿಸಲಾಯಿತು. ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಜತೆ ಕಾರ್ಯದರ್ಶಿ ಸತೀಶ್ ಶೆಟ್ಟಿ, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಆವರ್ಸೆ, ಸದಸ್ಯತ್ವ ನೋಂದಣಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಗಣೇಶ್ ಪೂಂಜಾ, ಮಾಜಿ ಲಯನ್ಸ್ ಜಿÇÉಾ ಗವರ್ನರ್ ಲಯನ್ ಹಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
ಸಂತೋಷ್ ಶೆಟ್ಟಿಯವರು ಸಮಾಜದ ಹಿರಿಕಿರಿಯರೆಲ್ಲರನ್ನೂ ಒಗ್ಗೂಡಿಸಿಕೊಂಡು ಸಮಾಜ ಸೇವೆಯ ತುಡಿತದೊಂದಿಗೆ ಸಮಾಜಕ್ಕೆ ದೊಡ್ಡದಾದ ಕೊಡುಗೆಯನ್ನು ನೀಡಿ¨ªಾರೆ . ಅವರ ಸಮಾಜದ ಮೇಲಿನ ಪ್ರೀತಿ, ಇಂತಹ ಕಾರ್ಯವನ್ನು ಮಾಡಿಸಿದೆ. ಇಂತಹ ಅಪೂರ್ವ ವಿನ್ಯಾಸದೊಂದಿಗೆ ವಿಶಿಷ್ಟ ಸಾಮಾಜಿಕ, ಧಾರ್ಮಿಕ ಚಿಂತನೆಯೊಂದಿಗೆ ಈ ಭವನವನ್ನು ನಿರ್ಮಿಸಿದ್ದು ಇಂತಹ ಅದ್ಭುತ ಕಾರ್ಯವನ್ನು ಮಾಡಿದ ಸಾಧಕರನ್ನು ಅಭಿನಂದಿಸಬೇಕಾಗಿದೆ ಎಂದು ಡಾ| ಪ್ರಭಾಕರ ಭಟ್ ಅವರು ಹೇಳಿದರು.
ಚಿತ್ರ-ವರದಿ: ವರದಿ : ಕಿರಣ್ ಬಿ. ರೈ ಕರ್ನೂರು