ಮಣಿಪಾಲ:ಯಕ್ಷರಂಗದಲ್ಲಿ ದಿ.ಕಾಳಿಂಗ ನಾವಡರು ಸ್ವತಃ ಪ್ರಯೋಗಶೀಲರಾಗಿದ್ದರು. ನಾರಣಪ್ಪ ಉಪ್ಪೂರರ ಶಿಷ್ಯರಾಗಿದ್ದರು. ಕಡತೋಕ ಮಂಜುನಾಥ ಭಾಗವತರ ಪದ್ಯದಿಂದ ನಾವಡರು ಪ್ರಭಾವಿತರಾಗಿದ್ದರು. ಉಪ್ಪೂರರ ಶೈಲಿಯೇ ಬೇರೆಯಾಗಿತ್ತು, ಇವರು ಕಲಿತದದ್ದು ಮಾರ್ವಿ ಶೈಲಿ. ಆದರೆ ನಾವಡರು ಹೊಸ ಶೈಲಿಗೆ ನಾಂದಿ ಹಾಡಿದ ವ್ಯಕ್ತಿಯಾಗಿದ್ದರು.
(ಕಂಚಿನ ಕಂಠದ ಕಾಳಿಂಗ ನಾವಡರು ನಮ್ಮನ್ನಗಲಿ ಇಂದಿಗೆ 30ವರ್ಷಗಳಾಗಿದ್ದು, ಅವರ ಒಡನಾಡಿಗಳು ಅವರನ್ನು ನೆನಪಿಸಿಕೊಂಡ ಬರಹ)
ಬಹುತೇಕ ಶೈಲಿಗಳು ಹಾಗೆ..ಚಿಟ್ಟಾಣಿ, ಶೇಣಿಯವರು ಇರಲಿ ಒಂದು ಹಂತದಲ್ಲಿ ಪ್ರಯೋಗ ಮಾಡುತ್ತಾರೆ. ಆದರೆ ಕಾಲಾಂತರದಲ್ಲಿ ಬದುಕಿ ಉಳಿಯುವುದು ಇದೆಯಲ್ಲ ಅದು ಮುಖ್ಯವಾದದ್ದು. ಆ ನಿಟ್ಟಿನಲ್ಲಿ ಕಾಳಿಂಗ ನಾವಡರು ಹುಟ್ಟುಹಾಕಿದ ಶೈಲಿ ಇದೆಯಲ್ಲ..ಅದು ಮೂವತ್ತು ಆದ ನಂತರವೂ ಉಳಿದುಕೊಂಡು ಯಕ್ಷರಂಗದಲ್ಲಿ ಮುಂದುವರಿದಿದೆ.
ಭೀಷ್ಮ ವಿಜಯ, ಕಂಸ ವಧೆ, ಗದಾಯುದ್ಧ ಈ ತರದ ಪ್ರಸಂಗಗಳಲ್ಲಿ ನಾವಡರು ಅಂದು ಹಾಕಿಕೊಟ್ಟ ನಡೆಯಲ್ಲಿಯೇ ಯಕ್ಷಗಾನ ಪ್ರಸಂಗ ನಡೆಯುತ್ತಿದೆ. ಕಪಟ ನಾಟಕರಂಗ ಇರಬಹುದು, ಕಂಸ ವಧೆಯ ಪದ್ಯಗಳು ಇರಬಹುದು(ಉತ್ತರಕನ್ನಡ, ದಕ್ಷಿಣಕನ್ನಡ) ಆ ಶೈಲಿಯಲ್ಲಿಯೇ ನಡೆದುಕೊಂಡು ಹೋಗುತ್ತಿದೆ ಎಂಬುದನ್ನು
ಗಮನಿಸಬಹುದು.
ಅವರೊಬ್ಬ ಸ್ಟಾರ್ ಪಟ್ಟ ಪಡೆದ ಮೊದಲ ಭಾಗವತರಾಗಿದ್ದರು ಎಂದರೆ ಅತಿಶಯೋಕ್ತಿಯಾಗಲಾರದು. ಹೊಸ ಭಾಗವತರಾಗಿ ಐದಾರು ವರ್ಷದ ನಂತರ ಹ್ಯಾಂಡ್ ಬಿಲ್ ನಲ್ಲಿ ಭಾಗವತಿಕೆಯಲ್ಲಿ ಮೊದಲ ಹೆಸರೇ ನಾವಡರದ್ದು ಇರುತ್ತಿತ್ತು. ಅವರಿಗಿಂತ ತುಂಬಾ ಹಿರಿಯರು, ಹೆಸರು ಪಡೆದವರು ಇದ್ದರು ಕೂಡಾ ಆ ಹೆಸರು ನಂತರದಲ್ಲಿ ಇರುತ್ತಿತ್ತು. ಅವರು ಕಿರಿಯ ವಯಸ್ಸಿನಲ್ಲಿಯೇ ದಟ್ಟ ಪ್ರಭಾವ ಬೀರಿದ್ದ ವ್ಯಕ್ತಿಯಾಗಿದ್ದರು. ಪ್ರಸಂಗದ ಆಯ್ಕೆಯಲ್ಲಿ ತುಂಬಾ ಪ್ರಬುದ್ಧತೆ ಇತ್ತು. 20-25ನೇ ವಯಸ್ಸಿಗೆ ಮೊದಲ ಪ್ರಸಂಗ ಬರೆದಿದ್ದ ಪ್ರತಿಭಾವಂತರಾಗಿದ್ದರು.
ನಾವಡರು ಬಹಳ ಸರಳವಾಗಿ ಪದ್ಯಗಳನ್ನು ರಚಿಸುತ್ತಿದ್ದರು. ಅಷ್ಟೇ ಅಲ್ಲ ಪ್ರತೀ ವರ್ಷ ಒಂದು ಹೊಸ ರಾಗವನ್ನು ಅವರು ಮುಂದಕ್ಕೆ ತರುತ್ತಿದ್ದರು. ಅವರೊಬ್ಬ ಸ್ನೇಹಜೀವಿ, ಸಮಯಪ್ರಜ್ಞೆ, ರಂಗಪ್ರಜ್ಞೆ, ಸಾಹಿತ್ಯಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಶಿಸ್ತಿನ ವ್ಯಕ್ತಿತ್ವ ನಾವಡರದ್ದಾಗಿತ್ತು.ತೆಂಕು, ಬಡಗು, ಉತ್ತರಕನ್ನಡ, ಮಲೆನಾಡು ಸೇರಿದಂತೆ ಎಲ್ಲೆಡೆ ಒಂದೇ ತೆರನಾದ ಜನಪ್ರಿಯತೆ ಪಡೆದುಕೊಂಡಿದ್ದರು. ದೊಡ್ಡ, ದೊಡ್ಡ ಕಲಾವಿದರು ಕೂಡಾ ನಾವಡರು ಬಂದಾಗ ಒಂದು ತೆರನಾದ ಸ್ಪಂದನೆ ಇರುತ್ತಿತ್ತು.
ರಮೇಶ್ ಬೇಗಾರ್
ರಂಗಕರ್ಮಿ