Advertisement

ಕಾಳಿದಾಸನ ಕಾಳಜಿ ಮತ್ತು ಕಾಮಿಡಿ

09:56 AM Nov 24, 2019 | Lakshmi GovindaRaj |

ಮಕ್ಕಳು ಮಾರ್ಕ್ಸ್ ತೆಗೆಯುವ ಮೆಷಿನ್‌ಗಳಾಗುತ್ತಿದ್ದಾರಾ? ಪಾಲಕರು ಮಕ್ಕಳ ಆಸೆಗಳನ್ನು ಪರಿಗಣಿಸದೇ ಶಾಲೆ, ಪಾಠ, ಮಾರ್ಕ್ಸ್ಗಷ್ಟೇ ಸೀಮಿತಗೊಳಿಸುತ್ತಿದ್ದಾರಾ? ಶಿಕ್ಷಣ ವ್ಯವಸ್ಥೆಯಲ್ಲಿನ ತಾರತಮ್ಯ ಬದಲಾಗೋದೇ ಇಲ್ವಾ? ಮಕ್ಕಳು ತಮ್ಮ ಬಾಲ್ಯ, ಕನಸುಗಳನ್ನು ನಾಲ್ಕು ಗೋಡೆ ನಡುವಿನ “ಶಿಕ್ಷಣ’ದಲ್ಲೇ ಕಳೆದುಬಿಡುತ್ತಾರಾ? “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ನೋಡಿ ಹೊರಬರುತ್ತಿದ್ದಂತೆ ಇಂತಹ ಹಲವು ಪ್ರಶ್ನೆಗಳು ನಿಮ್ಮನ್ನು ಕಾಡುತ್ತದೆ. ಪಾಲಕರ ಆಸೆಗಳನ್ನು ಈಡೇರಿಸುವ ಭರದಲ್ಲಿ ಮಕ್ಕಳು ತಮ್ಮ ಕನಸುಗಳು ಕಮರಿ ಹೋಗುತ್ತಿವೆಯೇ ಎಂಬ ಭಾವನೆ ಕೂಡಾ ಮೂಡುತ್ತದೆ.

Advertisement

ಇದಕ್ಕೆ ಕಾರಣ ಚಿತ್ರದ ಕಥಾವಸ್ತು. ನಿರ್ದೇಶಕ ಕವಿರಾಜ್‌ ಇವತ್ತಿನ ಶಿಕ್ಷಣ ವ್ಯವಸ್ಥೆ, ಪಾಲಕರ ಅತಿಯಾಸೆ, ಮಾನಸಿಕವಾಗಿ ಕುಗ್ಗುತ್ತಿರುವ ಮಕ್ಕಳು ಹಾಗೂ ಇವುಗಳಿಗೆ ಮೂಲ ಕಾರಣವಾಗಿರುವ ಶಿಕ್ಷಣ ವ್ಯವಸ್ಥೆಯನ್ನೇ ತಮ್ಮ ಮೂಲಕಥಾವಸ್ತುವನ್ನಾಗಿಟ್ಟುಕೊಂಡು “ಕಾಳಿದಾಸ ಕನ್ನಡ ಮೇಷ್ಟ್ರು’. ಜಗ್ಗೇಶ್‌ ಸಿನಿಮಾ ಎಂದರೆ ಅಲ್ಲಿ ಹಾಸ್ಯ ಇರಲೇಬೇಕು. ಇಷ್ಟೊಂದು ಗಂಭೀರ ವಿಚಾರವನ್ನಿಟ್ಟುಕೊಂಡು ಹಾಸ್ಯ ಮಾಡೋದು ಹೇಗೆ ಎಂದು ನೀವು ಕೇಳಬಹುದು. ಆ ನಿಟ್ಟಿನಲ್ಲಿ ಕವಿರಾಜ್‌ ಜಾಣ್ಮೆ ಮೆರೆದಿದ್ದಾರೆ.

ಜಗ್ಗೇಶ್‌ ಅಭಿಮಾನಿಗಳಿಗೆ ಬೋರ್‌ ಆಗಬಾರದು ಮತ್ತು ಅತಿಯಾದ ಸಂದೇಶ ಎಂಬ ಚಿತ್ರದ ಹಣೆಪಟ್ಟಿಯಿಂದ ಮುಕ್ತವಾಗಬೇಕೆಂಬ ಕಾರಣಕ್ಕೆ ಸಂದರ್ಭ, ಸನ್ನಿವೇಶವನ್ನಿಟ್ಟುಕೊಂಡು ಹಾಸ್ಯ ಮಾಡಿದ್ದಾರೆ. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿರಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಹಾಗಂತ ಕಾಮಿಡಿ ಕಥೆ ಹಾಗೂ ಚಿತ್ರದ ಮೂಲ ಆಶಯವನ್ನು ಓವರ್‌ಟೇಕ್‌ ಮಾಡಿಲ್ಲ. ಕಥೆಯ ಆಶಯ ಏನಿತ್ತೋ ಅದು ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಆರಂಭದಲ್ಲಿ ಒಂದು ಫ್ಯಾಮಿಲಿ ಸ್ಟೋರಿಯಾಗಿ ತೆರೆದುಕೊಳ್ಳುವ ಸಿನಿಮಾ ಸಾಗುತ್ತಾ ಸಮಾಜದ, ಕಾಡುವ ಕಥೆಯಾಗಿ ಪರಿವರ್ತನೆಯಾಗುತ್ತದೆ. ಆರಂಭ ಎಷ್ಟು ಜಾಲಿಯಾಗಿ ಸಾಗಿತ್ತೋ, ಚಿತ್ರದ ದ್ವಿತೀಯಾರ್ಧ ಅಷ್ಟೇ ಗಂಭೀರವಾಗಿದೆ. ಏಕಾಏಕಿ ಇಷ್ಟೊಂದು ಗಂಭೀರ ಬೇಕಿತ್ತಾ ಎಂಬ ಸಣ್ಣ ಪ್ರಶ್ನೆಯೂ ಬರುತ್ತದೆ. ಆದರೆ, ಆ ಕಥೆಗೆ ಆ ಮಟ್ಟಿನ ಗಂಭೀರತೆಯ ಅಗತ್ಯವಿತ್ತು. ಎಲ್ಲವನ್ನು ಕಾಮಿಡಿಯಾಗಿ ಹೇಳಿದರೆ ಕಥೆಯ ಆಶಯಕ್ಕೆ ಧಕ್ಕೆಯಾಗುತ್ತದೆ ಎಂಬ ಲೆಕ್ಕಾಚಾರದೊಂದಿಗೆ ಕವಿರಾಜ್‌ ಮಾಡಿದಂತಿದೆ.

ಚಿತ್ರದಲ್ಲಿ ಸರ್ಕಾರಿ ಶಾಲೆ ಕುರಿತಾದ ತಾತ್ಸಾರ, ಮಕ್ಕಳ ಹಾಗೂ ಶಿಕ್ಷಕರ ಕೊರತೆ, ಸರ್ಕಾರಿ ಶಾಲೆ ಮುಚ್ಚುವಲ್ಲಿನ ಒಳಗೊಳಗಿನ ಲಾಭಿ … ಅನೇಕ ಅಂಶಗಳನ್ನು ಏಕಕಾಲಕ್ಕೆ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದ ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ವೇಗ ಹೆಚ್ಚಿಸುವ ಅವಕಾಶ ಕೂಡಾ ನಿರ್ದೇಶಕರಿಗಿತ್ತು. ಅದರ ಹೊರತಾಗಿ “ಕಾಳಿದಾಸ’ ಒಂದು ಪ್ರಯತ್ನವಾಗಿ ಮೆಚ್ಚಬಹುದು.

Advertisement

ನಟ ಜಗ್ಗೇಶ್‌ ಇಡೀ ಕಥೆಯನ್ನು ಹೊತ್ತು ಸಾಗಿದ್ದಾರೆ. ಸರ್ಕಾರಿ ಶಾಲೆಯ ಮೇಷ್ಟ್ರು ಆಗಿ ನಟಿಸಿರುವ ಅವರಿಗೆ ಇಲ್ಲಿ ಎರಡು ಶೇಡ್‌ ಇರುವ ಪಾತ್ರ ಸಿಕ್ಕಿದೆ. ನಗುವಿನ ಜೊತೆಗೆ ಗಂಭೀರವಾಗಿಯೂ ಇಷ್ಟವಾಗುತ್ತಾರೆ. ನಟಿ ಮೇಘನಾ ಗಾಂವ್ಕರ್‌ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಉಳಿದಂತೆ ಅಂಬಿಕಾ, ತಬಲ ನಾಣಿ, ಯತಿರಾಜ್‌ ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗುರುಕಿರಣ್‌ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ಪೂರಕವಾಗಿದೆ.

ಚಿತ್ರ: ಕಾಳಿದಾಸ ಕನ್ನಡ ಮೇಷ್ಟ್ರು
ನಿರ್ಮಾಣ: ಉದಯ್‌ ಕುಮಾರ್‌
ನಿರ್ದೇಶನ: ಕವಿರಾಜ್‌
ತಾರಾಗಣ: ಜಗ್ಗೇಶ್‌, ಮೇಘನಾ ಗಾಂವ್ಕರ್‌, ಅಂಬಿಕಾ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next