Advertisement

ವಿದ್ಯೆಗೆ ವಿನಯವೇ ಭೂಷಣ

03:11 PM Jun 22, 2019 | Vishnu Das |

ಅಹಂಕಾರವೆಂಬುದು ತಲೆಗೇರಿದರೆ ಸಜ್ಜನರೂ ದುರ್ಜನರಾಗಿ ಬದಲಾಗುತ್ತಾರೆ. ‘ಅಹಂ’ ಎಂಬುದು ಜೊತೆಯಾದರೆ, ಆನಂತರದಲ್ಲಿ ನಾನು ಹೇಳಿದ್ದೇ ಸರಿ ಎಂಬ ಮನೋಭಾವ ಮನುಷ್ಯನ ಜೊತೆಯಾಗುತ್ತದೆ. ಎಂಥ ಮೇಧಾವಿಯೇ ಆಗಿರಲಿ: ಅಹಮಿಕೆಯನ್ನು ದೂರವಿಟ್ಟಾಗ ಮಾತ್ರ ಬೆಳೆಯಲು, ನೆಮ್ಮದಿಯಿಂದ ಬದುಕಲು ಸಾಧ್ಯ. ಇಲ್ಲವಾದರೆ, ಪತನದ ಹಾದಿ ಜೊತೆಯಾಯಿತು ಎಂದೇ ಊಹಿಸಬೇಕಾಗುತ್ತದೆ.

Advertisement

‘ಅಹಂ’ ಎಂಬ ಅಮಲು ಎಲ್ಲರಿಗೂ ತಾಗುವುದುಂಟು. ಕೆಲವರು, ಅದರ ಜಾಲಕ್ಕೆ ಬೀಳದೆ ತಪ್ಪಿಸಿಕೊಳ್ಳುವುದೂ ಉಂಟು. ಅಹಮಿಕೆಯಿಂದ ದೂರವಿರಬೇಕು ಎಂಬುದನ್ನು ಉದಾಹರಿಸಲು ಮಹಾಕವಿ ಕಾಳಿದಾಸನ ಒಂದು ಕಥೆಯನ್ನು ಹಲವರು ಹೇಳುವುದುಂಟು. ಅದು ಇಲ್ಲಿದೆ:

ಕವಿ ಕಾಳಿದಾಸನಿಗೆ ತಾನು ಜ್ಞಾನಿಯೆಂಬ ಹೆಮ್ಮೆ ಕೊಂಚ ಹೆಚ್ಚೇ ಇತ್ತು. ಒಂದು ಬಾರಿ ಪರ್ಯಟನೆ ಮಾಡುತ್ತ ಒಂದು ಊರಿನ ಬಳಿ ಬಂದಾಗ ಬಹಳ ಬಾಯಾರಿಕೆ ಆಯಿತು. ಊರ ಹೊರಗಿನ ಬಾವಿಯ ಬಳಿ ಒಬ್ಬ ವೃದ್ಧೆ ನೀರು ಸೇದುತ್ತಿದ್ದಳು. ಕಾಳಿದಾಸ ಸ್ತ್ರೀಯ ಬಳಿ ಹೋಗಿ- ‘ತಾಯೇ, ನನ್ನ ದಾಹ ಅಡಗಿಸಲು ಕೊಂಚ ನೀರು ಕೊಡುವ ಕೃಪೆ ಮಾಡುವಿರಾ?’ ಎಂದು ಕೇಳಿದ.

ವೃದ್ಧೆ ನನಗೆ ನಿನ್ನ ಪರಿಚಯವಿಲ್ಲವಲ್ಲ ಮಗೂ, ನೀನು ನಿನ್ನ ಪರಿಚಯ ಹೇಳು, ನಾನು ನೀರು ಕೊಡುತ್ತೇನೆ-ಎಂದಳು.

ಆಗ ಕಾಳಿದಾಸ ತನ್ನ ಪರಿಚಯ ನೀಡಲು ಪ್ರಾರಂಭಿಸಿದ.
ಕಾಳಿದಾಸ – ನಾನೊಬ್ಬ ಪ್ರವಾಸಿ.
ವೃದ್ಧೆ- ಲೋಕದಲ್ಲಿ ಪ್ರವಾಸಿಗರು ಇಬ್ಬರೇ. ಒಬ್ಬ ಸೂರ್ಯ, ಮತ್ತೂಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿ¨ªಾರೆ.
ಕಾಳಿದಾಸ- ನಾನೊಬ್ಬ ಅತಿಥಿ, ಈಗ ನೀರು ಸಿಗುವುದೇ?
ವೃದ್ಧೆ – ಲೋಕದಲ್ಲಿ ಅತಿಥಿಗಳೂ ಇಬ್ಬರೇ. ಒಂದು ಧನ, ಮತ್ತೂಂದು ಯೌವ್ವನ. ಇಬ್ಬರೂ ಬಂದು ಹೊರಟು ಹೋಗುತ್ತಾರೆ, ನಿಲ್ಲುವುದಿಲ್ಲ. ನಿಜ ಹೇಳು, ನೀನು ಯಾರು?
ಕಾಳಿದಾಸ- ನಾನು ಸಹನಶೀಲ. ಈಗಲಾದರೂ ನೀರು ದೊರೆಯುತ್ತದೆಯೇ?
ವೃದ್ಧೆ- ಲೋಕದಲ್ಲಿ ಸಹನಶೀಲರೂ ಇಬ್ಬರೇ!! ಒಂದು ಭೂಮಿ, ಮತ್ತೂಂದು ವೃಕ್ಷ. ಭೂಮಿ, ಪುಣ್ಯವಂತರೊಡನೆ ಪಾಪಿಷ್ಟರನ್ನೂ ಸಹಿಸುತ್ತದೆ. ಹಾಗೆಯೇ, ಮರವು ಕಲ್ಲೆಸೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ.
ಈಗ ಕಾಳಿದಾಸ ಹತಾಶನಾಗತೊಡಗಿದ.
ಕಾಳಿದಾಸ- ನಾನೊಬ್ಬ ಹಠಮಾರಿ.
ವೃದ್ಧೆ- ಇಲ್ಲ, ನೀನು ಹಠಮಾರಿ ಆಗಲು ಹೇಗೆ ಸಾದ್ಯ? ಲೋಕದಲ್ಲಿ ಹಠಮಾರಿಗಳೂ ಇಬ್ಬರೇ…ಒಂದು ಉಗುರು, ಇನ್ನೊಂದು ಕೂದಲು. ಎಷ್ಟು ಬಾರಿ, ಕತ್ತರಿಸಿದರೂ ಅವು ಮತ್ತೆ ಮತ್ತೆ ಬೆಳೆಯುತ್ತವೆ.
ಕಾಳಿದಾಸನಿಗೀಗ ಬೇಸರವಾಗತೊಡಗಿತು. ಅವನು ಸಿಡಿಮಿಡಿಯಿಂದ ಹೇಳಿದ: ನಾನೊಬ್ಬ ಮೂರ್ಖ!!
ವೃದ್ಧೆ – ಆದು ಹೇಗೆ ಸಾಧ್ಯ? ಲೋಕದಲ್ಲಿ ಮೂರ್ಖರೂ ಸಹ ಇಬ್ಬರೇ!! ಒಬ್ಬ ರಾಜ. ಯೋಗ್ಯತೆ ಇಲ್ಲದಿದ್ದರೂ ಅವನು ಎಲ್ಲರ ಮೇಲೂ ಆಳ್ವಿಕೆ ಮಾಡುತ್ತ ದರ್ಬಾರು ಮಾಡುತ್ತಾನೆ.
ಇನ್ನೊಬ್ಬ ಆ ರಾಜನ ಆಸ್ಥಾನ ಪಂಡಿತ. ಆತ ರಾಜನನ್ನು ಓಲೈಸುವುದಕ್ಕಾಗಿ, ಸುಳ್ಳು ಕಥೆಗಳನ್ನು ನಿಜವೆಂದು ಬಿಂಬಿಸುತ್ತಾನೆ..!
ಈಗ ಕಾಳಿದಾಸ ಏನೂ ಹೇಳುವ ಮನಸ್ಥಿತಿಯಲ್ಲಿ ಉಳಿದಿರಲಿಲ್ಲ. ಆ ವೃದ್ಧ ಸ್ತ್ರೀಯ ಕಾಲಿಗೆ ಬಿದ್ದು ನೀರಿಗಾಗಿ ಬೇಡತೊಡಗಿದ.
ಆಗ “ಏಳು ಮಗೂ…’ ಎಂಬ ಧ್ವನಿ ಕೇಳಿಸಿತು. ಕಾಳಿದಾಸ ತಲೆ ಎತ್ತಿ ನೋಡಿದ. ಅಲ್ಲಿ ವೃದ್ಧೆಯ ಜಾಗದಲ್ಲಿ ಸಾಕ್ಷಾತ್‌ ಸರಸ್ವತಿ ದೇವಿ ನಿಂತಿದ್ದಳು. ಕಾಳಿದಾಸ ಆಕೆಗೆ ಭಯ ಭಕ್ತಿಯಿಂದ ನಮಿಸಿದ. ಆಗ ದೇವಿ ಹೇಳಿದಳು:
ವಿದ್ಯೆಯಿಂದ ಜ್ಞಾನ ಸಂಪಾದನೆಯಾಗುತ್ತದೆ, ಗರ್ವವಲ್ಲ. ಅಹಂಕಾರವಲ್ಲ..! ನಿನ್ನ ವಿದ್ಯೆಗೆ ದೊರೆತ ಮಾನ ಸನ್ಮಾನಗಳನ್ನೇ ನೀನು ಸರ್ವಸ್ವವೆಂದು ಭಾವಿಸಿದೆ. ಅಹಮಿಕೆಯೆಂಬುದು ಎಂಥವರನ್ನೂ ಹಾದಿ ತಪ್ಪಿಸುತ್ತದೆ ಮಗೂ. ಅದು ನಿನ್ನೊಳಗೆ ಮನೆ ಮಾಡುವ ಮೊದಲೇ ನಿನ್ನ ಕಣ್ಣು ತೆರೆಸುವುದು ಅವಶ್ಯಕವಾಗಿತ್ತು.
ಕಾಳಿದಾಸನಿಗೆ ತನ್ನ ತಪ್ಪಿನ ಅರಿವಾಯಿತು. ಕ್ಷಮೆ ಯಾಚಿಸಿ, ದಾಹ ತಣಿಸಿಕೊಂಡು ತನ್ನ ಮುಂದಿನ ದಾರಿ ಹಿಡಿದು ಸಾಗಿದ.
ನೀತಿ: ವಿದ್ಯಾ ದಧಾತಿ ವಿನಯಮ್‌.
(ವಿದ್ಯೆಗೆ ವಿನಯವೇ ಭೂಷಣ)

Advertisement
Advertisement

Udayavani is now on Telegram. Click here to join our channel and stay updated with the latest news.

Next