ಜೋಯಿಡಾ: ಕಾಳಿ ನದಿ ಜೋಯಿಡಾದಲ್ಲಿ ಹುಟ್ಟಿದ್ದರೂ ತಾಲೂಕಿನ ಜನತೆಗೆ ನೀರನ್ನು ನೀಡದೆ ಹೊರಜಿಲ್ಲೆಗೆ ಸಾಗಿಸುವುದನ್ನು ವಿರೋಧಿಸಿ ಸೋಮವಾರ ಜೋಯಿಡಾ ಬಂದ್ ಪ್ರತಿಭಟನೆ ನಡೆಯಿತು.
ಕಾಳಿ ಬ್ರೀಗೆಡ್, ಜೋಯಿಡಾ ವ್ಯಾಪಾರಸ್ಥರ ಸಂಘ, ಜೋಯಿಡಾ, ಉಳವಿ, ಕುಂಬಾರವಾಡಾ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ವಿವಿಧ ಸಂಘಟನೆಗಳು ಈ ಬಂದಗೆ ಕರೆನೀಡಿದ್ದವು.
ಕಾಳಿ ಬ್ರೀಗೆಡ್ ಸಂಚಾಲಕ ರವಿ ರೆಡ್ಕರ್ ಮಾತನಾಡಿ, ಕಾಳಿ ನದಿಗೆ ಸೂಪಾದಲ್ಲಿ ಜಲಾಶಯ ನಿರ್ಮಿಸಿ 40 ವರ್ಷಗಳಾಗಿವೆ. ಜಲಾಶಯ ಅರ್ಧ ಆಯುಷ್ಯ ಮುಗಿದ ನಂತರ ನಾವು ಕುಡಿಯುವ ನೀರಿಗೆ ಬೇಡಿಕೆ ಸಲ್ಲಿಸುವ ಸ್ಥಿತಿ ಬಂದಿದೆ. ಕಳೆದ 40 ವರ್ಷಗಳಿಂದ ಜನಪ್ರತಿನಿಧಿಗಳು ಜನರ ಕುಡಿಯವ ನೀರಿನ ಸಮಸ್ಯೆ ಬಗೆಹರಿಸಿಲ್ಲ. ನಿರಾಶ್ರಿತ ರಾಮನಗರದ ಜನರಿಗೆ 15 ದಿನಗಳಿಗೊಮ್ಮೆ ನೀರು ಕೊಡಲಾಗುತ್ತಿದೆ. ಅದೂ ಉತ್ತಮ ನೀರಲ್ಲ. ತಾಲೂಕಿನ ಜನತೆಗೆ ವಿವಿಧ ಯೋಜನೆಗಳನ್ನು ಹೇರುವ ಮೂಲಕ ಮಹಾ ಮೋಸ ಮಾಡಲಾಗಿದೆ. ಯಾವ ಯೋಜನೆಗೂ ಜನರ ಅಹವಾಲನ್ನೇ ಕೇಳಿಲ್ಲ. ಈಗ ಕಾಳಿ ನೀರನ್ನು ನಾವು ಹೊರಜಿಲ್ಲೆಗೆ ಬಿಡುವ ಪ್ರಶ್ನೆಯೇ ಇಲ್ಲ. ಇದಕ್ಕಾಗಿ ದಿಲ್ಲಿವರೆಗೂ ಹೋಗುತ್ತೇವೆ ಎಂದರು.
ವ್ಯಾಪಾರಿ ಸಂಘದ ಅಧ್ಯಕ್ಷ ರಫಿಕ ಖಾಜಿ ಮಾತನಾಡಿ, ಕಾಳಿ ನೀರನ್ನು ಮೊದಲು ತಾಲೂಕಿನ ಜನತೆಗೆ ನೀಡಿ, ನಂತರ ಮುಂದಿನ ವಿಚಾರ ಕೈಗೊಳ್ಳಿ. ಕಾಳಿ ನೀರನ್ನು ಬೇರೆಡೆಗೆ ಒಯ್ದಲ್ಲಿ ಹೋರಾಟಕ್ಕೆ ಎಂದಿಗೂ ಸಿದ್ಧ. ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆಯನ್ನು ಮುಖ್ಯ ಮಂತ್ರಿಗಳಿಗೆ ಗ್ರಾ.ಪಂ ವತಿಯಿಂದ ನೀಡಿದ್ದು, ಅನುಮೋದನೆ ನಿರೀಕ್ಷೆಯಲ್ಲಿದ್ದೇವೆ ಎಂದರು.
ನ್ಯಾಯವಾದಿ ಸುನೀಲ ದೇಸಾಯಿ ಮಾತನಾಡಿ, ಕಾಳಿ ನದಿಗೆ ಅಣೆಕಟ್ಟು ಕಟ್ಟುವ ಮೊದಲು ನದಿಯ ಅಕ್ಕಪಕ್ಕದ ರೈತರು ಸಂತೋಷದಿಂದ ಕೃಷಿ ನಡೆಸುತ್ತಿದ್ದರು. ನಂತರ ಅವರನ್ನು ರಾಮನಗರಕ್ಕೆ ಎತ್ತಂಗಡಿ ಮಾಡಿ ಕುಡಿಯಲೂ ನೀರಿಲ್ಲದೆ ಪರಿತಪಿಸುವಂತೆ ಮಾಡಿದರು. ಇದು ತುಂಬಾ ಅನ್ಯಾಯ ಎಂದರು.
ವ್ಯಾಪಾರಿ ಸಂಘದ ಅಧ್ಯಕ್ಷ ರಫಿಕ ಖಾಜಿ, ಜೋಯಿಡಾ ಗ್ರಾ.ಪಂ ಉಪಾಧ್ಯಕ್ಷ ಶ್ಯಾಮ ಪೊಕಳೆ, ಸದಸ್ಯ ವಿನಯ ದೇಸಾಯಿ, ಕುಂಬಾರವಾಡಾ ಗ್ರಾ.ಪಂ ಅಧ್ಯಕ್ಷ ಮಂಗೇಶ ಕಾಮತ್, ಉಳವಿ ಗ್ರಾ.ಪಂ. ಅಧ್ಯಕ್ಷ ಮಂಜುನಾತ ಮೊಕಾಶಿ, ಶ್ರೀಕಾಂತ ಟೆಂಗ್ಸೆ, ಬಿಜೆಪಿ ತುಕಾರಾಮ ಮಾಂಜ್ರೇಕರ್, ರೈತ ಸಂಘದ ಪ್ರೇಮಾನಂದ ವೇಳಿಪ, ದಾಂಡೇಲಿಯ ವಾಸುದೇವ ಪ್ರಭು ಮುಂತಾದವರು ಮಾತನಾಡಿದರು.
ನೂರಾರು ಜನ ಜೋಯಿಡಾ ಸರ್ಕಲ್ದಿಂದ ತಹಶೀಲ್ದರ್ ಕಚೇರಿಗೆ ಮೆರವಣಿಗೆಯಲ್ಲಿ ಬಂದು ತಹಶೀಲ್ದಾರ್ ಸಂಜಯ ಕಾಂಬ್ಳೆಗೆ ಹಾಗೂ ರಾಜ್ಯದ ಮುಖ್ಯ ಮಂತ್ರಗಳಿಗೆ ಮನವಿ ಸಲ್ಲಿಸಲಾಯಿತು.
ಜೋಯಿಡಾ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಕಚೇರಿ, ಶಾಲಾ ಕಾಲೇಜು ತೆರೆದಿದ್ದು, ಬಸ್ ಸಂಚಾರ ಎಂದಿನಂತಿತ್ತು. ರಾಮನಗರ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ರಾಮನಗರ, ಜಗಲಬೇಟ್ ಸೇರಿದಂತೆ ಹಲವೆಡೆ ಬಂದಿಗೆ ಪ್ರತಿಕ್ರಿಯೆ ಕಂಡುಬರಲಿಲ್ಲ.