ಕಲಬುರಗಿ: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಏರುಗತಿಯಲ್ಲಿ ಸಾಗುತ್ತಿರುವ ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆಯೂ ಒಂದಾಗಿದ್ದು, ಬುಧವಾರದಿಂದ 14 ದಿನಗಳ ಕಾಲ ಜಾರಿಯಾದ ಕಠಿಣ ಕಫೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ನಾಲ್ಕು ಗಂಟೆ ಕಾಲ ಮಾತ್ರ ಅವಕಾಶ ಇದ್ದಿದ್ದರಿಂದ ರಸ್ತೆಯಲ್ಲಿ ಜನಜಂಗುಳಿ ಕಂಡು ಬಂತು. ನಂತರ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದರಿಂದ ದಿನವಿಡಿ ಜನ ಜೀವನ ಸ್ತಬ್ಧವಾಗಿತ್ತು. ಕಳೆದ ವರ್ಷ ಕೊರೊನಾ ಸೋಂಕಿಗೆ ದೇಶದಲ್ಲೇ ಮೊದಲ ಸಾವು ಕಂಡಿದ್ದರಿಂದ ಜಿಲ್ಲೆಯೇ ಲಾಕ್‌ಡೌನ್ ಆಗಿತ್ತು. ಈಗ ಮತ್ತೆ ಕೊರೊನಾ ಎರಡನೇ ಅಲೆ ಅಬ್ಬರಿಸಿದ್ದು, ರಾಜ್ಯಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಮೊದಲ ದಿನವಾದ ಬುಧವಾರ ಬಹುಕೇತ ಜನ ಜೀವನ ಸ್ತಬ್ಧಗೊಂಡಿತ್ತು. ಇದರ ನಡುವೆಯೂ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ಏಟು ಬೀಸಿದರಲ್ಲದೇ, ರಸ್ತೆಯಲ್ಲೇ ಬಸ್ಕಿ ಹೊಡೆಸಿ ಬಿಸಿ ಮುಟ್ಟಿಸಿದರು.
ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಕಟ್ಟಡ ಕಾಮಗಾರಿಗಳು, ಆಸ್ಪತ್ರೆಗಳು, ವೈದ್ಯಕೀಯ ಸೇವೆಗಳು, ತುರ್ತು ಸಂದರ್ಭಕ್ಕಾಗಿ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಅದೇ ರೀತಿ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ನಾಲ್ಕು ಗಂಟೆ ಮಾತ್ರ ಅವಕಾಶ ಇದ್ದುದರಿಂದ ಬೆಳಗ್ಗೆ ಹೊತ್ತಲ್ಲಿ ಕೊಂಚ ಜನ ದಟ್ಟಣೆ ಇತ್ತು. ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ಖರೀದಿಗಾಗಿ ಜನರು ಮುಗಿಬಿದ್ದಿದ್ದರು. ಈ ಸಮಯದಲ್ಲಿ ಆಟೋಗಳು ರಸ್ತೆಗಿಳಿದಿದ್ದವು. ದಿನಸಿ ಮತ್ತು ಕಿರಾಣಿ ಸಾಮಗ್ರಿ ಖರೀದಿಸಿ ಮನೆಗೆ ತೆರಳುವ ಧಾವಂತವೂ ಕಂಡು ಬಂತು. ಅಲ್ಲದೇ, ಹಣ್ಣು ಮತ್ತು ಹಾಲು ಮಾರಾಟ, ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೂ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 10 ಗಂಟೆ ಆಗುತ್ತಿದ್ದಂತೆ ಪೊಲೀಸರು ಅಂಗಡಿಗಳ ಬಳಿ ತೆರಳಿ ಮುಚ್ಚುವಂತೆ ಸೂಚನೆ ನೀಡಿದರು.
ಇತ್ತ, 10 ಗಂಟೆ ನಂತರವೂ ಹೋಟೆಲ್ ಗಳಲ್ಲಿ ಪಾರ್ಸೆಲ್‌ಗೆ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು.
ಬೇಕಾಬಿಟ್ಟಿ ಓಡಾಟಕ್ಕೆ ಶಾಸ್ತಿ: ಅನಗತ್ಯ ವಾಹನ ಮತ್ತು ಜನರ ಸಂಚಾರ ನಿಯಂತ್ರಣಕ್ಕಾಗಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪೊಲೀಸರು ರಸ್ತೆಗಳಿಗೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದರು. ಇದರ ನಡುವೆಯೂ ಕರ್ಫ್ಯೂ ನಿಯಮ ಮೀರಿ ಬೇಕಾಬಿಟ್ಟಿಯಾಗಿ ಬೈಕ್ ಮತ್ತು ಕಾರುಗಳಲ್ಲಿ ತಿರುಗಾಡುವವರು ಕಂಡು ಬಂದರು. ಹೀಗಾಗಿ ನಗರದಾದ್ಯಂತ ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದ ಪೊಲೀಸರು ಬೈಕ್, ಕಾರುಗಳಲ್ಲಿ ಹೋಗುವವರನ್ನು ತಡೆದು ನಿಲ್ಲಿಸಿ ವಿಚಾರಿಸಿದರು.
ತಪ್ಪಿಸಿಕೊಳ್ಳಲು ಯತ್ನಿಸಿದವರಿಗೆ ಮತ್ತು ಅನಾವಶ್ಯಕವಾಗಿ ರಸ್ತೆಗೆ ಬಂದವರಿಗೆ ಲಾಠಿ ಏಟಿನ ರುಚಿ ತೋರಿಸಿದರು. ಅಲ್ಲದೇ, ರಸ್ತೆಯಲ್ಲೇ ಬಸ್ಕಿ ಶಿಕ್ಷೆ ನೀಡಿ ಪೊಲೀಸರು ಬುದ್ಧಿ ಕಲಿಸಿದರು.
ನಗರಾದ್ಯಂತ ದೊಡ್ಡ ಮಾಲ್ ಗಳು, ಮಳಿಗೆಗಳು, ಬೀದಿ ಬದಿ ಸಣ್ಣ ಅಂಗಡಿಗಳು ಮತ್ತು ಬಂಡಿ ವ್ಯಾಪಾರ ಬಂದ್ ಆಗಿತ್ತು. ಕೇಂದ್ರ ಬಸ್ ನಿಲ್ದಾಣ, ರಾಷ್ಟ್ರಪತಿ ವೃತ್ತ, ಜೇವರ್ಗಿ ರಸ್ತೆ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ಚಪ್ಪಲ್ ಬಜಾರ್, ಗಂಜ್ ಪ್ರದೇಶ, ಆಳಂದ ನಾಕಾ, ಮುಸ್ಲಿಂ ಚೌಕ್, ದರ್ಗಾ ಪ್ರದೇಶ, ಶರಣಬಸವೇಶ್ವರ ದೇವಸ್ಥಾನ ರಸ್ತೆ, ಜಿಲ್ಲಾ ನ್ಯಾಯಾಲಯ ರಸ್ತೆ ಸೇರಿದಂತೆ ಎಲ್ಲ ಕಡೆಗಳಲ್ಲಿ ವಾಣಿಜ್ಯ ಅಂಗಡಿ-ಮುಂಗಟ್ಟುಗಳು ಬೀಗ ಹಾಕಿದ್ದವು. ಹೀಗಾಗಿ ಎಲ್ಲೆಡೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.