Advertisement

ರಾಹುಲ್‌ ಸ್ವಾಗತಕ್ಕೆ ಕಲಬುರಗಿ ಸಜ್ಜು

10:02 AM Feb 12, 2018 | Team Udayavani |

ಕಲಬುರಗಿ: ಅಖೀಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ, ಸಂಸದ ರಾಹುಲ್‌ ಗಾಂಧಿ ಸ್ವಾಗತಕ್ಕೆ ಕಲಬುರಗಿ ಜಿಲ್ಲೆ ಸಜ್ಜಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಜಿಲ್ಲೆಯ ಜೇವರ್ಗಿ ಪಟ್ಟಣ ಹಾಗೂ ನಗರದ ನೂತನ ಮಹಾವಿದ್ಯಾಲಯದಲ್ಲಿ ಫೆ. 12ರಂದು ಜನಾಶೀರ್ವಾದ ಯಾತ್ರೆ ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

ಎಐಸಿಸಿ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಹೈದ್ರಾಬಾದ್‌ ಕರ್ನಾಟಕ ಭಾಗದ ಮೂಲಕ ಪ್ರವೇಶಿಸಿ ಜನಾಶೀರ್ವಾದ ಆರಂಭಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಸಂಚಲನ ಮೂಡಿದೆ. ಹೀಗಾಗಿ ರಾಹುಲ್‌ ಸ್ವಾಗತಕ್ಕೆ ಕಾತರದಿಂದ ಎದುರು ನೋಡುವಂತಾಗಿದೆ. 

ರಾಹುಲ್‌ ಗಾಂಧಿ ಸ್ವಾಗತಕ್ಕಾಗಿ ಜೇವರ್ಗಿ ಹಾಗೂ ಮಹಾನಗರದಲ್ಲಿ ಬೃಹದಾಕಾರದ ಸ್ವಾಗತ ಕಮಾನು ಹಾಗೂ ಕಟೌಟ್‌ ನಿಲ್ಲಿಸಲಾಗಿದೆ.  ಒಂದು ತರಹ ಹಬ್ಬದಂತೆ ವಾತಾವರಣ ನಿರ್ಮಾಣಗೊಂಡಿದೆ. ರಾಹುಲ್‌ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ| ಜಿ. ಪರಮೇಶ್ವರ, ಕರ್ನಾಟಕದ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಲೋಕಸಭೆಯಲ್ಲಿನ ಕಾಂಗ್ರೆಸ್‌ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ್‌ ಖರ್ಗೆ, ಸಚಿವರಾದ ಡಿ.ಕೆ. ಶಿವಕುಮಾರ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
 
ಇದೇ ನೂತನ ವಿದ್ಯಾಲಯ ಮೈದಾನದಲ್ಲಿ 2009ರಲ್ಲಿ ರಾಹುಲ್‌ ಗಾಂಧಿ ಅವರು ಹೈದ್ರಾಬಾದ್‌ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಸಂವಿಧಾನ 371ನೇ (ಜೆ) ವಿಧಿ ಜಾರಿ ಮಾಡುವುದಾಗಿ ಹೇಳಿದ್ದರು. ಅವರ ನಡೆಯಂತೆ ಮುಂದಿನ ದಿನಗಳಲ್ಲಿ ಸಂವಿಧಾನ 371ನೇ(ಜೆ) ವಿಧಿ ಜಾರಿಗೆ ಬಂತು. ಈಗ ಏನು ಭರವಸೆ ಕೊಡ್ತಾರೆ ಎಂಬುದನ್ನು ಜನ ಕಾತರದಿಂದ ಕಾಯುತ್ತಿದ್ದಾರೆ. 

ಈ ಹಿಂದೆ 1978-79ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಜೇವರ್ಗಿಗೆ ಆಗಮಿಸಿದ್ದರು. ಆಗ ತಮ್ಮ ತಂದೆ ಧರ್ಮಸಿಂಗ್‌ ಅವರು ಪ್ರಥಮ ಸಲ ಶಾಸಕರಾಗಿದ್ದರು. 40 ವರ್ಷಗಳ ನಂತರ ಈಗ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರು ಆಗಮಿಸುತ್ತಿದ್ದಾರೆ. ತಾವೂ ಈಗ ಪ್ರಥಮ ಸಲ ಶಾಸಕರಾಗಿದ್ದು, ಆವಾಗ ಇಂದಿರಾಗಾಂಧಿ ಅವರು ಜೇವರ್ಗಿಗೆ ಬಂದ ನಂತರ ರಾಜಕೀಯದಲ್ಲಿ ಮತ್ತೆ ಅಧಿಕಾರ ಗದ್ದುಗೆ ಏರಿದರು. ಈಗಲೂ ರಾಹುಲ್‌ ಗಾಂಧಿ ಅವರು ಭವಿಷ್ಯದ ನಾಯಕರಾಗಲಿದ್ದಾರೆ ಎಂದು ಜೇವರ್ಗಿ ಶಾಸಕ ಡಾ| ಅಜಯಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಜೇವರ್ಗಿ ಪಟ್ಟಣಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಸೋಮವಾರ ಆಗಮಿಸುತ್ತಿರುವುದು ಕ್ಷೇತ್ರದ ಸೌಭಾಗ್ಯವಾಗಿದೆ. ವೈಯಕ್ತಿಕವಾಗಿ ನನಗೆ ಸಂಭ್ರಮ ತಂದಿದೆ. ತಂದೆ, ಮಾಜಿ ಮುಖ್ಯಮಂತ್ರಿ ದಿ| ಧರ್ಮಸಿಂಗ್‌ ಅವರು ಶಾಸಕರಿದ್ದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ನಂತರ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು 1977-1978ರಲ್ಲಿ ರಸ್ತೆ ಮೂಲಕವೇ ಕಲಬುರ್ಗಿಗೆ ಆಗಮಿಸಿ, ಅಲ್ಲಿಂದ ಜೇವರ್ಗಿ, ಶಹಾಪುರ, ಹತ್ತಿಗುಡೂರ, ರಾಯಚೂರಿಗೆ ತೆರಳಿದ್ದರು.

Advertisement

ಸೋಮವಾರ ರಾಹುಲ್‌ಗಾಂಧಿ ಅವರು ಭೇಟಿ ನೀಡುವ ಮೂಲಕ ಗತವೈಭವ ನೆನಪಿಸುತ್ತಿದ್ದಾರೆ ಎಂದು ಶಾಸಕರು ವಿವರಿಸಿದರು. ರಾಹುಲ್‌ ಗಾಂಧಿ ಅವರ ಬಹಿರಂಗ ಸಭೆಗೆ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಶಾಸಕ ಡಾ| ಅಜಯಸಿಂಗ್‌ ಧರ್ಮಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next