Advertisement

ನಾಯಿ ಕಡಿತಕ್ಕಿಲ್ಲ ಇಲ್ಲಿ ಲಸಿಕೆ

09:35 AM Jun 09, 2019 | Naveen |

ಹಣಮಂತರಾವ ಭೈರಾಮಡಗಿ
ಕಲಬುರಗಿ:
ನಾಯಿ ಕಡಿದವರಿಗೆ ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾಸ್ಪತ್ರೆಯಲ್ಲಿ ಆ್ಯಂಟಿ ರೇಬಿಸ್‌ ವ್ಯಾಕ್ಸಿನ್‌ ಚಿಕಿತ್ಸಾ ಲಸಿಕೆ ಸಿಕ್ಕುತ್ತಿಲ್ಲ. ಹೀಗಾಗಿ ನಾಯಿ ಕಡಿದವರಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ.

Advertisement

ಕಳೆದೆರಡು ತಿಂಗಳಿನಿಂದ ನಾಯಿ ಕಡಿತದ ಚಿಕಿತ್ಸಾ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಚಿಕಿತ್ಸೆಗೆ

ಅನುಸಾರವಾಗಿ ಲಸಿಕೆ ದೊರೆಯುತ್ತಿಲ್ಲ. ಖಾಸಗಿಯಾಗಿ ಲಸಿಕೆ ಖರೀದಿಸಿ ಚಿಕಿತ್ಸಾ ಸೌಲಭ್ಯ ಕಲ್ಪಿಸಿ ಎಂದು ಆರೋಗ್ಯಾಧಿಕಾರಿಗಳ ನಿರ್ದೇಶನವಿದೆಯಾದರೂ ಖಾಸಗಿಯಲ್ಲೂ ಸೂಕ್ತವಾಗಿ ಲಸಿಕೆ ದೊರೆಯದ ಕಾರಣ ನಾಯಿ ಕಡಿತಕ್ಕೊಳಗಾದವರಿಗೆ ದೇವರೇ ಗತಿ ಎನ್ನುವಂತಾಗಿದೆ.

ಜಿಲ್ಲೆಯ ಅಫ‌ಜಲಪುರ ತಾಲೂಕಿನ ಬಡದಾಳದ ಗಿರೀಶ ಊಡಗಿಯ ಪುತ್ರಿ ರಕ್ಷಿತಾಗೆ ಕಳೆದ ಜೂ.5ರಂದು ನಾಯಿ ಕಡಿದಿತ್ತು. ಅದೇ ದಿನ ಜಿಲ್ಲಾಸ್ಪತ್ರೆಯಲ್ಲಿ ಮೊಲದ ಹಂತದ ಚಿಕಿತ್ಸೆ ದೊರಕಿದೆ. ಶನಿವಾರ ಎರಡನೇ ಹಂತದ ಚಿಕಿತ್ಸೆ ದೊರಕಬೇಕಾಗಿತ್ತು. ಆದರೆ ಲಸಿಕೆ ಇಲ್ಲದ ಕಾರಣ ನಿರಾಸೆಯಿಂದ ಮರಳಿದರು.

ರಾಜ್ಯದಾದ್ಯಂತ ನಾಯಿ ಕಡಿತದ ಹಾವಳಿ ಜೋರಾಗಿದೆ. ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯೇ ಅನಿವಾರ್ಯ. ಖಾಸಗಿ ಆಸ್ಪತ್ರೆಗಳಲ್ಲಿ ನಾಯಿ ಕಡಿತದಕ್ಕೆ ಚಿಕಿತ್ಸಾ ಲಸಿಕೆ ಸಿಗುವುದು ಅಷ್ಟಕಷ್ಟೆ. ಅಲ್ಲದೇ ಚಿಕಿತ್ಸೆ ಬಲು ದುಬಾರಿ ಆಗಿರುತ್ತದೆ. ಹೀಗಾಗಿ ಜಿಲ್ಲಾಸ್ಪತ್ರೆಯೇ ಸೂಕ್ತವಾಗಿದೆ. ನಾಯಿ ಕಡಿತಕ್ಕೊಳಗಾದ ಶೇ. 90ಕ್ಕಿಂತಲೂ ಹೆಚ್ಚು ಜನ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ.

Advertisement

ನಾಯಿ ಕಡಿತಕ್ಕೆ ನೀಡುವ ಲಸಿಕೆ ಪೂರೈಕೆ ಟೆಂಡರ್‌ ಮುಗಿದಿದ್ದರಿಂದ ಲಸಿಕೆ ಪೂರೈಕೆ ಸಂಪೂರ್ಣ ಸ್ಥಗಿತವಾಗಿದೆ. ನಾಯಿ ಕಡಿತಕ್ಕೆ ಒಮ್ಮೆ ಲಸಿಕೆ ನೀಡದೇ ನಾಲ್ಕೈದು ಸಲವಾದರೂ ಚಿಕಿತ್ಸೆ ನೀಡಬೇಕು. ಜಿಲ್ಲಾಸ್ಪತ್ರೆಗೆ ದಿನಾಲು ಕನಿಷ್ಟ 80ರಿಂದ ನೂರು ಲಸಿಕೆ ಬೇಕು. ಪ್ರತಿನಿತ್ಯ ಸುಮಾರು 40ರಿಂದ 50 ಜನರು ನಾಯಿ ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ಬರುತ್ತಿರುತ್ತಾರೆ.

ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲದೇ ರಾಜ್ಯದ ಇತರ ಜಿಲ್ಲಾಸ್ಪತ್ರೆಗಳಲ್ಲೂ ನಾಯಿ ಕಡಿತದ ಆ್ಯಂಟಿ ರೇಬಿಸ್‌ ವ್ಯಾಕ್ಸಿನ್‌ ಚಿಕಿತ್ಸಾ ಲಸಿಕೆ ಕೊರತೆ ಕಂಡು ಬಂದಿದೆ. ಸಮಸ್ಯೆ ನಿವಾರಣೆಗೆ ಹೊಸ ಟೆಂಡರ್‌ವಾಗಿ ಸಮರ್ಪಕವಾಗಿ ಪೂರೈಕೆಯಾದಲ್ಲಿ ಮಾತ್ರ ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ದೊರೆಯಲಿದೆ.

ಟೆಂಡರ್‌ದಲ್ಲಿ ಪಾಲ್ಗೊಳ್ಳಲು ಹಿಂದೇಟು: ನಾಯಿ ಕಡಿತದ ಚಿಕಿತ್ಸಾದ ಲಸಿಕೆಗೆ ಈಗಾಗಲೇ ಎರಡು ಸಲ ಟೆಂಡರ್‌ ಕರೆದರೂ ಯಾರೂ ಪಾಲ್ಗೊಳ್ಳದ ಕಾರಣ ಮುಂದೂಡಿಕೆಯಾಗುತ್ತಿದೆ. ಅಭಾವ ಸೃಷ್ಟಿಸಿ ದರ ಹೆಚ್ಚಳ ಮಾಡುವ ಉದ್ದೇಶ ಟೆಂಡರ್‌ದಾರರು ಹೊಂದಿದ್ದಾರೆನ್ನಲಾಗಿದೆ.

ನಾಯಿ ಕಡಿತದ ಚಿಕಿತ್ಸೆ ಲಸಿಕೆ ಪೂರೈಕೆ ಟೆಂಡರ್‌ ಮುಗಿದಿದ್ದರಿಂದ ಸ್ಥಳೀಯವಾಗಿ ಖಾಸಗಿಯಾಗಿ ಖರೀದಿ ಮಾಡುವಂತೆ ಎಲ್ಲ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ. ಒಂದೆರಡು ಕಡೆ ಸ್ವಲ್ಪ ತೊಂದರೆ ಆಗಿರಬಹುದು. ಲಸಿಕೆಯನ್ನು ಮುಂಗಡವಾಗಿ ಖಾಸಗಿಯಾಗಿ ಖರೀದಿಸಿ ದಾಸ್ತಾನು ಇಡಲಾಗಿದೆ. ಒಟ್ಟಾರೆ ಮುಂದಿನ ಕೆಲವೇ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ.
ಶಿವಾನಂದ ಪಾಟೀಲ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ಕಳೆದ ಒಂದೂವರೆ ತಿಂಗಳಿನಿಂದ ನಾಡಿ ಕಡಿತದ ಆ್ಯಂಟಿ ರೇಬಿಸ್‌ ವ್ಯಾಕ್ಸಿನ್‌ ಚಿಕಿತ್ಸಾ ಲಸಿಕೆ ಪೂರೈಕೆ ಸ್ಥಗಿತವಾಗಿದೆ. ಆದರೆ ಖಾಸಗಿಯಾಗಿ ಸ್ಥಳೀಯವಾಗಿ ಖರೀದಿ ಮಾಡುವಂತೆ ಇಲಾಖೆ ನಿರ್ದೇಶನ ನೀಡಿದೆ. ಖಾಸಗಿ ಬೇಡಿಕೆಗೆ ಅನುಸಾರವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ತೊಂದರೆಯಾಗುತ್ತಿದೆ. ಇದಕ್ಕೆಲ್ಲ ಹೊಸದಾಗಿ ಟೆಂಡರ್‌ ಆಗದಿರುವುದು ಕಾರಣವಾಗಿದೆ.
•ಡಾ| ಶಿವಕುಮಾರ,
ವೈದ್ಯಕೀಯ ಅಧೀಕ್ಷಕ, ಜಿಮ್ಸ್‌

Advertisement

Udayavani is now on Telegram. Click here to join our channel and stay updated with the latest news.

Next