Advertisement

ಕೈ ತಪ್ಪುತ್ತಿರುವ ಯೋಜನೆ; ಕಲಬುರಗಿಗೆ ಬರೆ

06:20 PM Mar 20, 2021 | Team Udayavani |

ಕಲಬುರಗಿ: ಕಲಬುರಗಿಗೆ ಬರಬೇಕಿದ್ದ ಚುಕ್‌ ಬುಕ್‌ ರೈಲಿನ ವಿಭಾಗೀಯ ಕಚೇರಿ ಬಾರದೇ ರದ್ದಾಯಿತು ಡುಂ..ಡುಂ…, 1300 ಕೋಟಿ ರೂ. ವೆಚ್ಚದ ಇಎಸ್‌ಐ ಆಸ್ಪತ್ರೆಯಿದ್ದರೂ ಏಮ್ಸ್‌ ಹುಬ್ಬಳ್ಳಿ-ಧಾರವಾಡ ಪಾಲಾಯಿತು ಡುಂ..ಡುಂ.., ಜವಳಿ ಪಾರ್ಕ್‌ ಮೈಸೂರು ಹೊಂಟೊಯಿತು ಡುಂ..ಡುಂ.., ಸಿಯುಕೆಯಲ್ಲಿ ಸ್ಥಾಪನೆಯಾಗಬೇಕಿದ್ದ ಸೆಂಟರ್‌ ಆಫ್ ಎಕ್ಸಲೆನ್ಸ್ ‌ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದೆ ಡುಂ..ಡುಂ..ತೊಗರಿ ಟೆಕ್ನಾಲಾಜಿ ಪಾರ್ಕ್‌ ಕೈ ಬಿಡಲಾಗಿದೆಯಂತೆ ಡುಂ..ಡುಂ.. ನಿಮ್ದಂತೂ ಕನಸಿನ ಮಾತು ಡುಂ..ಡುಂ..

Advertisement

ಇದು ಕಲಬುರಗಿಯಲ್ಲಿ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಅನ್ಯಾಯ ಹಾಗೂ ಶೋಷಣೆ ಹಾಡು. ಕಲಬುರಗಿಗೆ ಬರಬೇಕಿದ್ದ ಯೋಜನೆಗಳೆಲ್ಲ ಬೇರೆಯವರ ಪಾಲಾಗುತ್ತಿರುವುದು ಹಾಗೂ ರದ್ದಾಗುತ್ತಿರುವುದು ಎಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಲಬುರಗಿ ಕರ್ನಾಟಕದಲ್ಲಿ ಇದೇಯೋ? ಇಲ್ಲವೋ ಎನ್ನುವ
ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಲಬುರಗಿಯಲ್ಲಿ ಕಾರ್ಯಾನುಷ್ಠಾನಕ್ಕೆ ಬರಬೇಕಾದ ಯೋಜನೆ ಅಥವಾ ಅಭಿವೃದ್ಧಿ ಕಾರ್ಯಗಳು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ದಕ್ಕದೇ ಇರುವುದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಅಲ್ಲದೇ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ.

ಇಂದಲ್ಲ ನಾಳೆ ರೈಲ್ವೆ ವಿಭಾಗೀಯ ಕಚೇರಿ ಕಲಬುರಗಿಯಲ್ಲಿ ಆಗುತ್ತದೆ ಎನ್ನುವ ಬಹು ನಿರೀಕ್ಷೆಗೆ ಎಳ್ಳು ನೀರು ಬಿಡಲಾಗಿದೆ. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಯನ್ನು ಕೇಂದ್ರ ಕೈ ಬಿಟ್ಟಿದೆ ಎಂಬುದಾಗಿ ರೈಲ್ವೆ ಸಚಿವ ಪಿಯುಷ್‌ ಗೋಯೆಲ್‌ ಹೇಳುವುದರ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಬರೆ ಎಳೆಯಲಾಗಿದೆ. 2013ರಲ್ಲೇ ಆಗ ಕೇಂದ್ರದ ರೈಲ್ವೆ ಸಚಿವರಾಗಿದ್ದ ಈಗ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ಘೋಷಣೆ ಮಾಡಿ, ಆಡಳಿತಾತ್ಮಕ ಮಂಜೂರಾತಿ ಕಲ್ಪಿಸಿದ್ದರು. ಕಚೇರಿಗಾಗಿ ಅಗತ್ಯ ಭೂಮಿ ನೀಡಲಾಗಿದ್ದರೂ, ವಿಭಾಗೀಯ ಕಚೇರಿ ಸ್ಥಾಪನೆ ಅಗತ್ಯ ಎನ್ನುವ ಕುರಿತು ಅನೇಕ ವರದಿಗಳಿದ್ದರೂ ಕೇಂದ್ರ ಪರಿಗಣಿಸಿದೇ ನಿರ್ಲಕ್ಷಿಸಿರುವುದು ರಾಜಕೀಯ ಸಂಘರ್ಷಕ್ಕೆ ಹಿಡಿದ ಕನ್ನಡಿ ಎನ್ನಬಹುದಾಗಿದೆ. ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿಯಾದರೆ ಖರ್ಗೆ ಅವರಿಗೆ ಶ್ರೇಯಸ್ಸು ಸಲ್ಲುತ್ತದೆ ಎನ್ನುವ ಕಾರಣದಿಂದಲೇ ಕೇಂದ್ರದ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಒಂದುಗೂಡಿಸಲು ದೊಡ್ಡ ಹೋರಾಟವೇ ನಡೆದು, 1956ರಲ್ಲಿ ಏಕೀಕರಣಗೊಂಡು ಹೈದ್ರಾಬಾದ್‌ ಪ್ರಾಂತದಲ್ಲಿದ್ದ ಕಲಬುರಗಿ, ಬೀದರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಮತ್ತೆ ಕರ್ನಾಟಕ ಸೇರಿದವು. ಆದರೆ, ಈಗಿನ ಕಲ್ಯಾಣ ಕರ್ನಾಟಕದ ರೈಲ್ವೆ ಮಾತ್ರ ಇನ್ನು ಹರಿದು ಹಂಚಿ ಹೋಗಿರುವ ಸ್ಥಿತಿಯಲ್ಲೇ ಇದೆ. ಇದನ್ನು ಒಂದುಗೂಡಿಸಲು ಕಲಬುರಗಿಯಲ್ಲೊಂದು ರೈಲ್ವೆ ವಿಭಾಗೀಯ ಕಚೇರಿ ಆಗದಿರುವುದು ವಿಪರ್ಯಾಸವೇ ಸರಿ.

ಕಲಬುರಗಿಯಲ್ಲಿ ಪ್ರತ್ಯೇಕ ರೇಲ್ವೆ ವಿಭಾಗದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ 1984ರಲ್ಲಿ ರಚಿಸಿದ್ದ ರೈಲ್ವೆ ಸುಧಾರಣಾ ಸಮಿತಿಯೇ ಶಿಫಾರಸು ಮಾಡಿದೆ. ಈ ಶಿಫಾರಸು ಮಾಡಿ ನಾಲ್ಕು ದಶಕ ಕಳೆದರೂ ಕಾರ್ಯಾನುಷ್ಠಾನಕ್ಕೆ ತರದೇ, ಈಗ ಕೈ ಬಿಡಲಾಗಿದೆ ಎಂದು ಹೇಳುತ್ತಿರುವುದು ಯಾವ ನ್ಯಾಯ? ನೆರೆಯ ಆಂಧ್ರ ಪ್ರದೇಶದಲ್ಲಿ ಆರು ರೈಲ್ವೆ ವಿಭಾಗಗಳಿವೆ. ಮಹಾರಾಷ್ಟ್ರದಲ್ಲಿ ಏಳು ರೈಲ್ವೆ ವಿಭಾಗಗಳಿದ್ದರೆ, ಕರ್ನಾಟಕದಲ್ಲಿ ಕೇವಲ ಮೂರು ವಿಭಾಗಗಳಿವೆ. ಅವುಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಸೇರಿವೆ. ಸರ್ವೋತೋಮುಖ ದೃಷ್ಟಿಯಿಂದ ಕಲ್ಯಾಣ ಕರ್ನಾಟಕಕ್ಕೆ ವಿಭಾಗೀಯ ಕಚೇರಿ ಅತ್ಯಗತ್ಯವಾಗಿದೆ.

Advertisement

ಕೇಂದ್ರ ಸರ್ಕಾರ ಸಣ್ಣ ಸಣ್ಣ ವಿಭಾಗಗಳಿಗೆ ಪ್ರತ್ಯೇಕ ವಿಭಾಗೀಯ ರೈಲ್ವೆ ಕಚೇರಿಯನ್ನು ಇತ್ತೀಚೆಗೆ ಸ್ಥಾಪಿಸುತ್ತಿದೆ. ಆದರೆ ಕಲಬುರಗಿಯನ್ನು ಮಾತ್ರ ಸಂಪೂರ್ಣ ಮರೆತಿದೆ. ರೈಲ್ವೆ ರಾಜ್ಯ ಸಚಿವರೇ ಆಗಿದ್ದ ಸುರೇಶ ಅಂಗಡಿ ಕಲಬುರಗಿಗೆ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಯಾದರೇ ಮಾತ್ರ ಕಲಬುರಗಿಗೆ ಬರುವುದಾಗಿ ಹೇಳಿದ್ದರು. ಆದರೆ ಅವರು ಬಾರದ ದಾರಿಗೆ ಹೋದರು. ಈಗ ರೈಲ್ವೆ ವಿಭಾಗೀಯ ಕಚೇರಿಯೂ ಹೋಯಿತು.

ಏಮ್ಸ್‌ ಯಾಮಾರಿಸಿತು: 1300 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಇಎಸ್‌ಐ ಆಸ್ಪತ್ರೆ ಕಲಬುರಗಿಯಲ್ಲಿದೆ. ವೈದ್ಯಕೀಯ ಕಾಲೇಜು ಸೇರಿದಂತೆ ಇತರ ವೈದ್ಯಕೀಯ ಕೋರ್ಸುಗಳು ನಡೆಯುತ್ತಿವೆ. ಬೃಹದಾಕಾರದ ಕಟ್ಟಡದಲ್ಲಿ ಕೇವಲ ಅರ್ಧದಷ್ಟನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಇನ್ನರ್ಧ ಕಟ್ಟಡಗಳು ಹಾಗೆ ಬಿದ್ದಿವೆ. ಹೀಗಾಗಿ ರಾಜ್ಯದ ಏಕೈಕ ಏಮ್ಸ್‌ (ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ ) ಸ್ಥಾಪನೆಯಾದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಬಡ ಜನತೆಗೆ ಉಪಯೋಗವಾಗುವುದು. ಅಲ್ಲದೇ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗುವುದು ಎಂದು ನಿರೀಕ್ಷಿಸಲಾಗಿತ್ತು. ಏಮ್ಸ್‌ ಕಲಬುರಗಿಯಲ್ಲಿ ಸ್ಥಾಪನೆಯಾಗಿಯೇ ಬಿಟ್ಟಿತು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಅದು ಹುಬ್ಬಳ್ಳಿ-ಧಾರವಾಡದ ಇಟ್ಟಿಗಟ್ಟಿಯಲ್ಲಿ ಸ್ಥಾಪನೆಯಾಗುತ್ತಿದೆ. ಈ ಯೋಜನೆ ಸಹ ಕೈ ತಪ್ಪುವಿಕೆಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಪೆಟ್ಟು
ನೀಡಿದಂತಾಗಿದೆ. ಇಎಸ್‌ಐ ಆಸ್ಪತ್ರೆ ಹಿಂದುಗಡೆ ಗುಲ್ಬರ್ಗ ವಿವಿಗೆ ಸೇರಿದ್ದ ಜಾಗ ಬಹಳಷ್ಟುವಿದೆ. ಇಷ್ಟಿದ್ದರೂ ಜಾಗವಿಲ್ಲವೆಂದು ಹೇಳಿ ಹುಬ್ಬಳ್ಳಿ -ಧಾರವಾಡ ಕಡೆ ಸ್ಥಾಪಿಸಲು ಮುಂದಾಗುತ್ತಿರುವುದು ಯಾವ ನ್ಯಾಯ? ಎನ್ನುವುದು ಈ ಭಾಗದ ಜನರ ಪ್ರಶ್ನೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲೂ ಪ್ರಭಾವಶಾಲಿ ಜನಪ್ರತಿನಿಧಿಯಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಲಾಗುತ್ತಿದೆ.

ಜವಳಿ ಪಾರ್ಕ್‌ ಸಹ ಕಲಬುರಗಿಯಲ್ಲಿ ಸ್ಥಾಪನೆಯಾಗಿಯೇ ಬಿಟ್ಟತು ಎಂದು ಸಂಭ್ರಮಿಸಲಾಗಿತ್ತು. ಆದರೆ ಈಗ ಮೈಸೂರಿನಲ್ಲಿ ಪಾರ್ಕ್‌ ಸ್ಥಾಪನೆಯಾಗುತ್ತಿದೆ. ದಶಕಗಳ ಹಿಂದೆಯೇ ಜವಳಿ ಪಾರ್ಕ್‌ಗಾಗಿ ಭೂಮಿ ಸಹ ಮೀಸಲಿಡಲಾಗಿದೆ. ಆದರೆ ಕಲಬುರಗಿಯಲ್ಲಿ ಸ್ಥಾಪಿಸುವ ಕುರಿತು ಯಾವುದೇ ಸುಳಿವಿಲ್ಲ. ಅದೇ ರೀತಿ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಬೇಕಿದ್ದ ಸೆಂಟರ್‌ ಆಫ್ ಎಕ್ಸಲೆನ್ಸ್‌ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದೆ. 100 ಕೋಟಿ ರೂ. ವಿವಿಯಿಂದ ನೀಡಲಾಗುತ್ತದೆ. ಆದರೆ ಕೇಂದ್ರ ಬೆಂಗಳೂರಿನಲ್ಲಿ ಏಕೆ? ಎನ್ನುವುದಕ್ಕೆ ಅನ್ಯಾಯ-ಶೋಷಣೆಯೇ ಕನ್ನಡಿಯಾಗಿದೆ.

ತೊಗರಿ ಟೆಕ್ನಾಲಾಜಿ ಪಾರ್ಕ್‌ಗೂ ಗುಂಡಿ: ಕಲಬುರಗಿ ತೊಗರಿ ಕಣಜ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ದಶಕದಿಂದ ತೊಗರಿ ಟೆಕ್ನಾಲಾಜಿ ಪಾರ್ಕ್‌ ಸ್ಥಾಪನೆಯಾಗುವುದು ಎನ್ನುವುದಕ್ಕೂ ಸರ್ಕಾರ ಗುಂಡಿ ತೋಡಿದೆ. ಸಾವಿರ ಕೋಟಿ ರೂ. ವೆಚ್ಚದ ತೊಗರಿ ಟೆಕ್ನಾಲಜಿ ಪಾರ್ಕ್‌ ಸಹ ಕೈ ಬಿಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ತಿಳಿಸಿದ್ದಾರೆ. ತೊಗರಿ ಟೆಕ್ನಾಲಜಿ ಪಾರ್ಕ್‌ ಬೇರೆ ಕಡೆ ಸ್ಥಾಪನೆ ಮಾಡುವಂತಿದ್ದರೆ ಪಾರ್ಕ್‌ ಸಹ ಬೇರೆಯವರ ಪಾಲಾಗುತ್ತಿತ್ತು. ಒಟ್ಟಾರೆ ಕಲಬುರಗಿಗೆ ಬರಬೇಕಿದ್ದ ಯೋಜನೆಗಳು ಒಂದೊಂದಾಗಿ ಕೈ ತಪ್ಪುವುದರ ಮುಖಾಂತರ ಕಲಬುರಗಿಗೆ ಅನ್ಯಾಯ ಹಾಗೂ
ಶೋಷಣೆಯಾಗುತ್ತಿದೆ. ಇದಕ್ಕೆ ಕೊನೆ ಯಾವಾಗ? ಈಗ ಆಗಿರುವ ಅನ್ಯಾಯ ಸರಿಪಡಿಸಲು ಸಾಧ್ಯವಾ?

ತೊಗರಿ ಟೆಕ್ನಾಲಜಿ ಪಾರ್ಕ್‌ನ್ನು ಕೈ ಬಿಟ್ಟ ಸರ್ಕಾರ
ಕಲಬುರಗಿ: ಸಾವಿರ ಕೋಟಿ ರೂ. ವೆಚ್ಚದ ಕಲಬುರಗಿಯಲ್ಲಿನ ತೊಗರಿ ಟೆಕ್ನಾಲಜಿ ಪಾರ್ಕ್‌ ಕೈ ಬಿಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ತಿಳಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೊಗರಿ ಪಾರ್ಕ್‌ ಸ್ಥಾಪನೆಗಾಗಿ 250 ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಪಡೆಯಲು ಕ್ರಮ ವಹಿಸಲಾಗಿತ್ತು. ಆದರೆ ಕೆಐಎಡಿಬಿ ನಂತರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟ ಹಿನ್ನೆಲೆಯಲ್ಲಿ ಸೂಕ್ತ ಜಮೀನು ದೊರೆತಿಲ್ಲ. ಹೀಗಾಗಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸೂಕ್ತ ಜಮೀನು ಲಭ್ಯವಾಗದ ಕಾರಣ ಯೋಜನೆ ಅನುಷ್ಠಾನ ಕೈ ಬಿಟ್ಟು ಕೆಐಎಡಿಬಿಯಲ್ಲಿ ಭೂಸ್ವಾಧೀನಕ್ಕಾಗಿ ಠೇವಣಿ ಇಡಲಾಗಿದ್ದ 489.50 ಕೋಟಿ ರೂ. ಮೊತ್ತವನ್ನು ಹಿಂದಕ್ಕೆ ಪಡೆದು, ಈಗಾಗಲೇ ಠೇವಣಿ
ಶರಣಾಗತಿ ಮಾಡಲಾಗಿದೆ. ಒಟ್ಟಾರೆ ಕಲಬುರಗಿಯಲ್ಲಿನ ತೊಗರಿ ಟೆಕ್ನಾಲಜಿ ಪಾರ್ಕ್‌ ಯೋಜನೆಯನ್ನು ಅನುಷ್ಠಾನ ಕೈ ಬಿಡಲಾಗಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.

*ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next