ಕಲಬುರಗಿ: ಕೊರೊನಾ ಎರಡನೆ ಅಲೆ ಯಿಂದ ರಾಜ್ಯದಲ್ಲಿ ಸೃಷ್ಟಿಯಾಗಿರುವ ಆಕ್ಸಿಜನ್ ಬೆಡ್ ಕೊರತೆ ನಿವಾರಣೆ ನಿಟ್ಟಿನಲ್ಲಿ ಬೋಯಿಂಗ್ ಇಂಡಿಯಾ ಸಂಸ್ಥೆ ಎರಡು ಆಸ್ಪತ್ರೆ ಸ್ಥಾಪಿಸಲು ಮುಂದೆ ಬಂದಿದ್ದು, ಜಿಲ್ಲೆಗೆ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪಿಸಲು ಸಂಸ್ಥೆ ಮಂಜೂರಾತಿ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು. ನಗರದ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಯಲಹಂಕದಲ್ಲಿ 200 ಆಕ್ಸಿಜನ್ ಬೆಡ್ ಸ್ಥಾಪಿಸಲು ಬೋಯಿಂಗ್ ಇಂಡಿಯಾ ಸಂಸ್ಥೆ ತಿರ್ಮಾನಿಸಿದ್ದು, ಜಿಲ್ಲೆಯಲ್ಲಿ 250 ಬೆಡ್‌ಗಳ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಿದೆ ಎಂದರು.
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ದಲ್ಲಿ ಆಸ್ಪತ್ರೆಗಳ ಸ್ಥಾಪನೆ ಮಾಡಲಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸದ ಡಾ| ಉಮೇಶ ಜಾಧವ ಹಾಗೂ ಎಲ್ಲ ಶಾಸಕರ ಶ್ರಮದ ಫಲವಾಗಿ ಹೊಸ ಆಸ್ಪತ್ರೆ ಸ್ಥಾಪಿಸಲು ಮಂಜೂರಾತಿ ಸಿಕ್ಕಿದೆ ಎಂದರು.
ಹೊಸ ಆಸ್ಪತ್ರೆಯನ್ನು ಯಾವ ಸ್ಥಳದಲ್ಲಿ ಸ್ಥಾಪಿಸಬೇಕು ಎನ್ನುವುದರ ಕುರಿತು ರವಿವಾರದಿಂದಲೇ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಬೋಯಿಂಗ್ ಇಂಡಿಯಾದವರು ರೆಡಿಮೆಡ್ ಸೆಟ್ ಅಪ್ ತಂದು, ಶೀಘ್ರ ಆಸ್ಪತ್ರೆ ಕಾಮಗಾರಿ ಆರಂಭಿಸಲಿದ್ದಾರೆ. ಆರು ತಿಂಗಳೊಳಗೆ ಆಸ್ಪತ್ರೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಹೆಚ್ಚುತ್ತಿದೆ ಆಕ್ಸಿಜನ್ ಬೇಡಿಕೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕ್ಸಿಜನ್ ಬೇಡಿಕೆ ಹೆಚ್ಚುತ್ತಿದೆ. ಆರಂಭದಲ್ಲಿ 10 ಕೆಎಲ್ ಆಕ್ಸಿಜನ್ ಬಳಕೆ ಆಗುತ್ತಿತ್ತು. ಈಗ 15ರಿಂದ 25 ಕೆಎಲ್ ಆಕ್ಸಿಜನ್‌ಗೆ ಬೇಡಿಕೆ ಬರುತ್ತಿದೆ. ಮುಂದೆ 30 ಕೆಎಲ್ ಆಕ್ಸಿಜನ್ ಅವಶ್ಯಕತೆ ಆಗಲಿದೆ. ಜಿಲ್ಲೆಗೆ ವಿವಿಧ ಮೂಲಗಳಿಂದ ಆಕ್ಸಿಜನ್ ಲಭ್ಯವಿದೆ. ಆದರೆ, ಆಕ್ಸಿಜನ್ ತುಂಬಿಕೊಂಡು ಬರುವ ಟ್ರೈಯೋಜನ್ ಟ್ಯಾಂಕರ್‌ಗಳು ಸಿಗುತ್ತಿಲ್ಲ. ಇದೇ ಸಮಸ್ಯೆಗೆ ಮೂಲ ಎಂದು ಸಚಿವರು ವಿವರಿಸಿದರು. ಜಿಲ್ಲೆಗೆ ಶನಿವಾರ ಆಕ್ಸಿಜನ್ ತುಂಬಿದ ಒಂದು ಟ್ಯಾಂಕರ್ ಬಂದಿದೆ. ಶೀಘ್ರದಲ್ಲಿ ಮತ್ತೂಂದು ಟ್ಯಾಂಕರ್ ಬರಲಿದೆ. ಇನ್ನೆರಡು ದಿನಗಳ ಈ ಆಕ್ಸಿಜನ್ ಟ್ಯಾಂಕರ್ ಪ್ರತಿದಿನ ಆಕ್ಸಿಜನ್ ಪೂರೈಸಲಿದೆ. ಕೆಕೆಆರ್‌ಡಿಬಿಯಿಂದ ಹೊಸದಾಗಿ ಟ್ರೈಯೋಜನ್ ಟ್ಯಾಂಕರ್ ಖರೀದಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,600 ಕೋವಿಡ್ ಬೆಡ್‌ಗಳಿವೆ. ಇವುಗಳ ಪೈಕಿ 440 ಆಕ್ಸಿಜನ್ ಬೆಡ್ ಮತ್ತು 378 ಐಸಿಯು ಬೆಡ್‌ಗಳು ಲಭ್ಯ ಇವೆ. ಸೌಮ್ಯ ಲಕ್ಷಣದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ 500 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಕ್ಸಿಜನ್ ಸಮಸ್ಯೆಗೆ ತುರ್ತು ಪರಿಹಾರವಾಗಿ ಆಕ್ಸಿಜನ್ ಕಾನ್ಸ್‌ಂಟ್ರೇಟರ್ ಖರೀದಿಸಿದ್ದು, ಸೋಮವಾರ ಜಿಲ್ಲೆಗೆ ತಲುಪಲಿವೆ. ತಲಾ ಇಬ್ಬರು ರೋಗಿಗಳಿಗೆ ಒಂದು ಕಾನ್ಸ್‌ಂಟ್ರೇಟರ್‌ನಿಂದ ಆಕ್ಸಿಜನ್ ಪೂರೈಸಬಹುದಾಗಿದೆ ಎಂದು ಹೇಳಿದರು.
ರೆಮ್‌ಡೆಸಿವಿಯರ್‌ಗೂ ಪರಿಹಾರ: ಜಿಲ್ಲೆಗೆ ಶನಿವಾರ 200 ವಯಲ್ ರೆಮ್‌ಡೆಸಿವಿಯರ್ ಇಂಜೆಕ್ಷನ್ ಬಂದಿವೆ. ಇಂಜೆಕ್ಷನ್ ಕೊರತೆ ಆಗುತ್ತಿರುವುದರಿಂದ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಇಂಜೆಕ್ಷನ್ ಒದಗಿಸುವಂತೆ ಡಿಸಿಎಂ ಅಶ್ವತ್ಥನಾರಾಯಣ ಅವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯ ಕೋಟಾ ಹೆಚ್ಚಿಸುವಂತೆಯೂ ಬೇಡಿಕೆ ಮುಂದಿಡಲಾಗಿದೆ ಎಂದರು.
ರಾಜ್ಯದಲ್ಲೇ ಎರಡು ಕಡೆ ರೆಮ್ ಡೆಸಿವಿಯರ್ ಇಂಜೆಕ್ಷನ್ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ರೆಮ್‌ಡೆಸಿವಿಯರ್ ಉತ್ಪಾದನೆ ಮೇ 17ರಿಂದ ಶುರುವಾಗಲಿದೆ. ಉತ್ಪಾದನೆಯಾದ 72 ಗಂಟೆಯಲ್ಲಿ ಇಂಜೆಕ್ಷನ್ ಬಳಕೆಗೆ ಬರಲಿದೆ. ಹೀಗಾಗಿ ರೆಮ್‌ಡೆಸಿವಿಯರ್ ಕೊರತೆ ಸಂಪೂರ್ಣ ಪರಿಹಾರವಾಗಲಿದೆ ಎಂದರು.
ಸಂಸದ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿ, ಬಿ.ಜಿ. ಪಾಟೀಲ, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕರಾದ ಅಮರನಾಥ ಪಾಟೀಲ, ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಜಿಪಂ ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾ ° ಇದ್ದರು.