ಕಳಸ: ಯಾವುದಾದರೂ ಕಾರ್ಯ ಸಾಧ್ಯವಾಗ ಬೇಕಾದರೆ ಭಗವಂತನ ಅನುಗ್ರಹ ಮತ್ತು ಪರಿಪೂರ್ಣ ಪ್ರಯತ್ನ ಇವೆರಡೂ ಇರಬೇಕು. ಇವೆರಡರಲ್ಲಿ ಯಾವುದಾದರೂ ಒಂದು ಇಲ್ಲವೆಂದರೂ ನಾವಂದುಕೊಂಡ ಕೆಲಸವಾಗಲು ಸಾಧ್ಯವಿಲ್ಲ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರ ಕಳಸದ ಕಲಶೇಶ್ವರ ಸ್ವಾಮಿ ದೇವಸ್ಥಾನದ ಯಾಗಶಾಲೆಯ ಶಿಲಾನ್ಯಾಸ ಹಾಗೂ ನೂತನ ಶ್ರೀ ಪಾರ್ವತಿ ಕಲಶೇಶ್ವರಸ್ವಾಮಿ ದಾಸೋಹ ಭವನದ ಉದ್ಘಾಟನೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು.
ನಮ್ಮ ಜೀವನಕ್ಕೆ ಭಗವಂತನ ಅನುಗ್ರಹ ಅತೀ ಮುಖ್ಯ. ಭಗವಂತನ ಅನುಗ್ರಹವನ್ನು ಪಡೆಯುವುದು ನಮ್ಮ ಕರ್ತವ್ಯ. ಇದರಿಂದ ನಮ್ಮ ಜೀವನವನ್ನು ಸುಗಮಗೊಳಿಸಬಹುದು. ಮಾನವ ಜನ್ಮ ಅತ್ಯಂತ ಶ್ರೇಷ್ಠವಾದ ಜನ್ಮ. ಈ ಜನ್ಮವನ್ನು ವ್ಯರ್ಥ ಮಾಡದೆ ದಿನದಲ್ಲಿ ಒಂದು ಸಮಯವನ್ನು ಆಧ್ಯಾತ್ಮಿಕವಾಗಿ ಮುಂದುವರೆಯಲು ಮೀಸಲಿಡಬೇಕು ಎಂದರು.
ದೇಶಾದಾದ್ಯಂತ ಅನೇಕ ಪ್ರಸಿದ್ಧ ಕ್ಷೇತ್ರಗಳಿವೆ. ಈ ಕ್ಷೇತ್ರಗಳನ್ನು ಚೆನ್ನಾಗಿಟ್ಟುಕೊಳ್ಳಬೇಕು. ಭಗವಂತನ ಸಾನ್ನಿಧ್ಯ, ಅಲ್ಲಿಯ ಪೂಜಾ ವಿಧಾನ, ಸಂಪ್ರದಾಯಗಳನ್ನು ಸಂರಕ್ಷಿಸಿಕೊಳ್ಳಬೇಕು. ಈ ಹಿಂದೆ ಯಾವ ರೀತಿ ಪೂಜೆ-ಪುನಸ್ಕಾರಗಳು, ಆಚಾರ ವಿಚಾರಗಳು ನಡೆಯುತ್ತಿತ್ತೋ ಅದಕ್ಕೆ ಯಾವುದಕ್ಕೂ ಧಕ್ಕೆ ಬರದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಹೊರನಾಡಿನ ಧರ್ಮಕರ್ತ ಡಾ| ಭೀಮೇಶ್ವರ ಜೋಷಿ ಮಾತನಾಡಿ, ಕಲಶೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ನಡೆದ ಅಷ್ಟಬಂಧ ಬ್ರಹ್ಮಕಲಶ ಸಂದರ್ಭದಲ್ಲಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳು ಆಗಮಿಸಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟಿದ್ದರು. ಇಲ್ಲಿಯ ಭಕ್ತರ ಆಶಯದಂತೆ ಇಲ್ಲಿ ದಾಸೋಹ ಭವನ ವಾಗಿದೆ. ಯಾಗಶಾಲೆಗೂ ಶಿಲನ್ಯಾಸ ಮಾಡಲಾಗಿದೆ ಎಂದು ಹೇಳಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕಲಶೇಶ್ವರ ದೇವಸ್ಥಾನ ರಾಜ್ಯದಲ್ಲಿ ಗುರುತಿಸಿಕೊಂಡಿರುವ ದೇವಸ್ಥಾನವಾಗಿದೆ. ಇಲ್ಲಿಗೆ ಇನ್ನಷ್ಟು ಭಕ್ತರು ಬರುವಂತ ಪರಿಸ್ಥಿತಿ ನಿರ್ಮಾಣವಾಗಬೇಕು. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಯಾತ್ರಿ ನಿವಾಸ ಮಾಡಲು ಅನುದಾನ ಬಿಡುಗಡೆಯಾಗಿದೆ. ಅದರ ಕಾಮಗಾರಿಯನ್ನು ಕೂಡ ಆದಷ್ಟು ಬೇಗ ಪ್ರಾರಂಬಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಎನ್.ಎಂ.ಹರ್ಷ, ಜಿಪಂ ಸದಸ್ಯ ಕೆ.ಆರ್.ಪ್ರಭಾಕರ್, ತಾಪಂ ಸದಸ್ಯರಾದ ಮಹಮ್ಮದ್ ರಫೀಕ್, ಮೀನಾಕ್ಷಿ ಮೋಹನ್, ಕಾರ್ಯನಿರ್ವಹಣಾ ಧಿಕಾರಿ ಕೆ.ಎನ್. ಯೋಗೇಶ್ ಇತರರಿದ್ದರು.