Advertisement
ಕರ್ನಾಟಕ-ಗೋವಾ ಮಧ್ಯ ದೊಡ್ಡ ಸಮರಕ್ಕೆ ಕಾರಣವಾಗಿ ಮಹದಾಯಿ, ಕಳಸಾ-ಬಂಡೂರಿ ವಿವಾದ ಸೃಷ್ಟಿಯಾಗಿದೆ. ನೀರು ಹಂಚಿಕೆ ವಿಚಾರದಲ್ಲಿ ಹೋರಾಟ, ರಾಜಕೀಯ ಆರೋಪ-ಪ್ರತ್ಯಾರೋಪ, ಕಾನೂನು ಸಮರ, ನ್ಯಾಯಾಧಿಕರಣ ರಚನೆ, ನೀರು ಹಂಚಿಕೆ ತೀರ್ಪು, ಕೇಂದ್ರದಿಂದ ಅಧಿಸೂಚನೆ, ಡಿಪಿಆರ್‌ಎಗೆ ಒಪ್ಪಿಗೆ, ಕೇಂದ್ರದಿಂದ ಮಹದಾಯಿ ಪ್ರಾಧಿಕಾರ ರಚನೆ ಹಂತದವರೆಗೂ ನಡೆದುಬಂದಿದೆ. ರಾಜ್ಯದ ಮಟ್ಟಿಗೆ ನೋಡುವುದಾದರೆ ಎಸ್.ಆರ್. ಬೊಮ್ಮಾಯಿ ಅವರಿಂದ ಹಿಡಿದು ಇಂದಿನ ಬಸವ ರಾಜ ಬೊಮ್ಮಾಯಿ ಅವರವರೆಗೆ ಆಳ್ವಿಕೆ ನಡೆಸಿದ ಎಲ್ಲ ಮುಖ್ಯಮಂತ್ರಿಗಳು ಒಂದಿಲ್ಲ ಒಂದು ರೀತಿಯಲ್ಲಿ ಮಹದಾಯಿ, ಕಳಸಾ-ಬಂಡೂರಿ ವಿಚಾರದಲ್ಲಿ ಯತ್ನ, ಭರವಸೆ, ಕ್ರಮ ತೋರುತ್ತ ಬಂದಿದ್ದರೂ, ಇದುವರೆಗೂ ರೈತರ ದೃಷ್ಟಿಯಿಂದ ಸಣ್ಣ ಪ್ರತಿಫಲವೂ ದೊರೆಯದಾಗಿದೆ.
Related Articles
Advertisement
ಕಳಸಾ-ಬಂಡೂರಿ ನಾಲಾಕ್ಕಾಗಿ ನೀಡಿದ ಮನವಿಗಳಿಗೆ ಲೆಕ್ಕವಿಲ್ಲ, ಮಾಡಿದ ಹೋರಾಟಕ್ಕೆ ಅಂತ್ಯವಿಲ್ಲ, ನೀರಿಗಾಗಿ ಪಾದಯಾತ್ರೆ ನಡೆದಿತ್ತು, ರಕ್ತದಲ್ಲಿ ಪತ್ರ ಬರೆದಿದ್ದಾಗಿದೆ, ಇದಕ್ಕಾಗಿ ಕೆಲವರು ಜೈಲು ಕಂಡಿದ್ದರು, ಪ್ರಾಣ ಬಿಟ್ಟಿದ್ದು ಇದೆ. ಸರಿಸುಮಾರು ಎರಡು ವರ್ಷಗಳ ಕಾಲ ನಿರಂತರ ಹೋರಾಟ ನಡೆದ ಇತಿಹಾಸ ಇದಕ್ಕಿದ್ದರೂ ಇಂದಿಗೂ ರಾಜ್ಯಕ್ಕೆ ಹನಿ ನೀರು ದಕ್ಕದಾಗಿದೆ.
ಕಳೆದೆರಡು ದಶಕಗಳಿಂದ ವಿಧಾನಸಭೆ ಇಲ್ಲವೇ ಲೋಕಸಭೆ ಚುನಾವಣೆ ಬಂದಾಗಲೊಮ್ಮೆ ಮಹ ದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಪ್ರತಿಧ್ವನಿಸುತ್ತದೆ. ನಮ್ಮ ಸರಕಾರ ಬಂದರೆ ಕಾಮ ಗಾರಿ ಪೂರ್ಣಗೊಳಿಸುವ, 24 ಗಂಟೆಯಲ್ಲಿ ನೀರು ತರುತ್ತೇವೆ ಎಂಬ ಸ್ವರ್ಗ ಸೃಷ್ಟಿಸುವ, ಅಲ್ಲಿ ನಿಮ್ಮವರಿಗೆ ಹೇಳಿ, ಇಲ್ಲಿ ನಿಮ್ಮವರನ್ನು ಸರಿಪಡಿಸಿ ಎಂಬೆಲ್ಲ ಆರೋಪ ಪ್ರತ್ಯಾರೋಪದಲ್ಲೇ ಕಾಲ ಕಳೆದಾಗಿದೆ. ಡಿಪಿಆರ್‌ಗೆ ಒಪ್ಪಿಗೆ ಸಿಕ್ಕಿದೆ ಇನ್ನೇನು ಕಾಮಗಾರಿಗೆ ಚಾಲನೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾಗಲೇ ಪ್ರಾಧಿಕಾರ ರಚನೆಯಾಗಿದೆ. ಇನ್ನಾದರೂ ಕಾಮ ಗಾರಿ ಚಾಲನೆ ಪಡೆದು ಹಂಚಿಕೆಯಾದ ನೀರಿನ ಪಾಲಾದರೂ ನಮಗೆ ದಕ್ಕೀತೆ ಅಥವಾ ನಮ್ಮ ಮುಂದಿನ ಪೀಳಿಗೆಯೂ ನಮ್ಮಂತೆಯೇ ನೀರಿಗಾಗಿ ಹೋರಾಟ ಮುಂದುವರಿಸಬೇಕೇ ಎಂಬ ಪ್ರಶ್ನೆ ಈ ಭಾಗದ ಜನತೆಯನ್ನು ಕಾಡತೊಡಗಿದೆ.
-ಅಮರೇಗೌಡ ಗೋನವಾರ