ಕೊಟ್ಟಿಗೆಹಾರ: ಬಣಕಲ್ ಸಮೀಪದ ಕೋಳೂರು ಸಾವಿರದ ಫಲ್ಗುಣಿ ಐತಿಹಾಸಿಕ ಶ್ರೀಕಲಾನಾಥೇಶ್ವರ ಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜಾತ್ರೋತ್ಸವದ ಅಂಗವಾಗಿ ನಾಲ್ಕು ದಿನಗಳಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಜಾತ್ರಾಮಹೋತ್ಸವದ ಅಂಗವಾಗಿ ಪ್ರಾರ್ಥನಾ ಪೂಜೆ, ಗಣಪತಿ ಹೋಮ, ಅಂಕುರಾರ್ಪಣೆ, ಧ್ವಜಾರೋಹಣ, ರಥರೋಹಣ ಕಾರ್ಯಕ್ರಮಗಳು ಯಥಾವತ್ತಾಗಿ ನಡೆದವು. ಪ್ರತಿವರ್ಷವೂ ಹೂವು ಹಾಗೂ ಧ್ವಜಗಳಿಂದ ಅಲಂಕೃತಗೊಂಡ ರಥದಲ್ಲಿ ಕಲಾನಾಥೇಶ್ವರ ಸ್ವಾಮಿಯನ್ನು ಕುಳ್ಳಿರಿಸಿ ರಥವನ್ನು ಜನಸಾಗರದ ನಡುವೆ ದೇವಸ್ಥಾನ ಆವರಣದಲ್ಲಿ ಮೂರು ಸುತ್ತು ಎಳೆಯುವ ಮೂಲಕ ಜಾತ್ರಾಮಹೋತ್ಸವದಲ್ಲಿ ಭಕ್ತರು ಶೃಧ್ದಾಭಕ್ತಿಯಿಂದ ರಥೋತ್ಸವದ ಸಂಭ್ರಮ ಮೆರೆದರು.
ವಾರ್ಷಿಕ ಉತ್ಸವದ ಅಂಗವಾಗಿ ಶ್ರೀಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆಯಿತು. ಭಾನುವಾರದಂದು ಕಲಾನಾಥೇಶ್ವರ ಸ್ವಾಮಿಗೆ ಅವಭೃತ ಸ್ನಾನ, ಉತ್ಸವ ಪೂಜೆಗಳನ್ನು ಸಮರ್ಪಿಸುವ ಮೂಲಕ ಮಹೋತ್ಸವದ ಸಂಪ್ರದಾಯ ನಡೆಯಲಿದೆ. ನಂತರ ವಿಶೇಷ ಉತ್ಸವದ ಪೂಜೆಯ ಬಳಿಕ ಜಾತ್ರಾಮಹೋತ್ಸವಕ್ಕೆ ಅದ್ದೂರಿಯ ತೆರೆ ಬೀಳಲಿದೆ.
ಇದನ್ನೂ ಓದಿ : ಕುಣಿಗಲ್: ಜೆಡಿಎಸ್, ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಫಲ್ಗುಣಿಯ ಗ್ರಾಮದ ದೂರವಿರುವ ಅನೇಕ ಮಂದಿ ಭಕ್ತರು, ವಿವಿಧ ಊರಿನಿಂದ ಜನರು ಜಾತ್ರಾಮಹೋತ್ಸವಕ್ಕೆ ಆಗಮಿಸಿ ಉತ್ಸವದಲ್ಲಿ ಸಮಾವೇಶಗೊಂಡು ರಥೋತ್ಸವಕ್ಕೆ ಕಳೆ ತಂದರು. ಬಂದ ಭಕ್ತರು ಶೃಧ್ದಾಭಕ್ತಿಯಿಂದ ದೇವರ ದರ್ಶನ ಪಡೆದು ಪುನೀತರಾದರು. ಮೂಡಿಗೆರೆ ತಾಲ್ಲೂಕಿನ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಚಿವೆ ಮೋಟಮ್ಮ, ಎಂ.ಕೆ.ಪ್ರಾಣೇಶ್, ತಹಶೀಲ್ದಾರ್ ಎಂ.ಎ.ನಾಗರಾಜ್, ಅಧ್ಯಕ್ಷ ಬಿ.ಆರ್.ಸುಧೀರ್ ಸೇರಿದಂತೆ ದೇವಸ್ಥಾನದ ಅಬಿವೃದ್ದಿ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.