ಗಂಗಾವತಿ : ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸಂಸತ್ತಿನಲ್ಲಿ ಕಲಂ 371(ಜೆ) ಗೆ ತಿದ್ದುಪಡಿ ಮಾಡಿ ಶೈಕ್ಷಣಿಕ, ಉದ್ಯೋಗ ಸೇರಿ ಸರಕಾರದ ಅನುದಾನ ಪಡೆಯಲು ಅವಕಾಶ ಕಲ್ಪಿಸಿದ್ದರೂ ಕೆಲ ಶಕ್ತಿಗಳು ವಾಮ ಮಾರ್ಗದ ಮೂಲಕ ಕ.ಕ.ಭಾಗದ ಅಭ್ಯರ್ಥಿಗಳು ಶಿಕ್ಷಣ ಉದ್ಯೋಗ ಪಡೆಯುವ ಸಂದರ್ಭದಲ್ಲಿ ಇನ್ನಿಲ್ಲದ ನಿಯಮಗಳನ್ನು ಹೇರಿ ನಿರಾಸೆಗೊಳಿಸುತ್ತಿದ್ದಾರೆ. ಕಲಂ 371(ಜೆ) ಅನುಷ್ಠಾನಕ್ಕೆ ಸಚಿವ ಸಂಪುಟ ಉಪಸಮಿತಿ ರಚಿಸಿ ಕಕ ಭಾಗದ ಸಚಿವರನ್ನು ಅಧ್ಯಕ್ಷರನ್ನಾಗಿಸಿದರೂ ಕೆಲ ಅಧಿಕಾರಿಗಳು ಚುನಾಯಿತರನ್ನು ದಾರಿ ತಪ್ಪಿಸುವ ಕಾರ್ಯ ನಿತ್ಯವೂ ಮಾಡುತ್ತಿದ್ದಾರೆ.
ಇತ್ತೀಚಿಗೆ ಪಿಎಸ್‌ಐ ಹುದ್ದೆಗಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಕ ಭಾಗದ 75 ಕ್ಕೂ ಹೆಚ್ಚು ಅಭ್ಯರ್ಥಿಗಳು ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯ ಮಟ್ಟದ ಮೇರಿಟ್‌ನಲ್ಲಿದ್ದರೂ ಅವರನ್ನು ಸ್ಥಳೀಯ ವೃಂದ ಎಂದು ಪರಿಗಣಿಸಿದ್ದರಿಂದ ಕಲಂ 371(ಜೆ) ಮೀಸಲಾತಿ ಅನ್ವಯ ಆಯ್ಕೆಯಾಗಬೇಕಿದ್ದ 75 ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ.
ಕೇಂದ್ರ ಸರಕಾರ ಕಲಂ 371(ಜೆ) ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿ ಮಾಡಿದ ಮೊದಲೆರಡು ವರ್ಷ ಕಕ ಭಾಗದ ಅಭ್ಯರ್ಥಿಗಳು ರಾಜ್ಯ ಮಟ್ಟದ ಮೇರಿಟ್ ಇದ್ದರೆ ಅವರನ್ನು ಕಕ ಭಾಗದ ಸ್ಥಳೀಯ ವೃಂದಕ್ಕೆ ಸೇರ್ಪಡೆ ಮಾಡದೇ ರಾಜ್ಯ ಮಟ್ಟದಲ್ಲಿ ಪರಿಗಣಿಸಲಾಗುತ್ತಿತ್ತು. ಇದರಿಂದ ಕಕ ಭಾಗದ ಉಳಿದ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಮೇರೀಟ್ ಮತ್ತು ಕಲಂ 371(ಜೆ) ಎರಡರಲ್ಲೂ ಅವಕಾಶವಿದ್ದರಿಂದ ಕಕ ಭಾಗದ ಅನೇಕರಿಗೆ ಲಾಭವಾಗುತ್ತಿತ್ತು. ಸರಕಾರಿ ನೌಕರರಿಗೆ ಮುಂಬಡ್ತಿ ನೆಪದಲ್ಲಿ ಕಳೆದ 2020 ರಲ್ಲಿ ಸರಕಾರ ಸುತ್ತೋಲೆ ಹೊರಡಿಸಿ ರಾಜ್ಯ ವೃಂದ ಮತ್ತು ಕಕ ಭಾಗದ ಸ್ಥಳೀಯ ವೃಂದ ಎಂದು ವಿಭಜನೆ ಮಾಡಿ ಶೈಕ್ಷಣಿಕ ಅಥವಾ ಉದ್ಯೋಗ ಪಡೆಯುವಾಗ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಬೇಕು. ಇದರಿಂದ ಕಲಂ 371(ಜೆ) ಮೂಲ ಉದ್ದೇಶವನ್ನು ನಿರ್ಬಂಧಿಸಿದಂತಾಗಿದೆ . ಮೊದಲಿದ್ದಂತೆ ರಾಜ್ಯ ಮತ್ತು ಸ್ಥಳೀಯ ವೃಂದ ಎರಡಕ್ಕೂ ಅಭ್ಯರ್ಥಿಗಳನ್ನು ಪರಿಗಣಿಸಬೇಕು. ಇದರಿಂದ ಕಕ ಭಾಗಕ್ಕೆ ಅಧಿಕ ಅವಕಾಶ ಕಲ್ಪಿಸಿದಂತಾಗುತ್ತದೆ.
ಇದನ್ನೂ ಓದಿ : ಗೊಲ್ಲ ಸಮುದಾಯದ ಪೂರ್ಣಿಮಾರಿಗೆ ಸಚಿವ ಸ್ಥಾನಕ್ಕಾಗಿ ರಕ್ತ ಪತ್ರ ಚಳವಳಿ
ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಅವಕಾಶ ಕಡಿಮೆ: ಕಲಂ 371(ಜೆ) ಅನುಷ್ಠಾನವಾದ ಮೊದಲೆರಡು ವರ್ಷ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಅಂದು ಎಚ್‌ಕೆಡಿಬಿ) ಅಧ್ಯಕ್ಷ ಸ್ಥಾನ ಕಕ ಭಾಗದ ಸಚಿವರೊಬ್ಬರನ್ನು ನೇಮಕ ಮಾಡಲಾಗುತ್ತಿತ್ತು. ಇದರಿಂದ ಸಚಿವ ಸಂಪುಟದ ಸಭೆಯಲ್ಲಿ ಕಲಂ 371(ಜೆ) ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗುತ್ತಿತ್ತು. ಇತ್ತೀಚೆಗೆ ರಾಜ್ಯ ಸರಕಾರ ತಮ್ಮ ಶಾಸಕರಿಗೆ ಪುನರ್ವಸತಿ ಕಲ್ಪಿಸಲು ಕಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದು ಕಕ ಭಾಗದ ವಿಷಯಗಳನ್ನು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲು ಹೆಚ್ಚಿನ ಧ್ವನಿ ಇಲ್ಲವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸರಕಾರ ಕಲಂ 371(ಜೆ) ಪರಿಣಾಮಾತ್ಮಕವಾಗಿ ಅನುಷ್ಠಾನ ಮಾಡಲು ಸ್ಥಳೀಯ ಸಚಿವರನ್ನು ಕಲ್ಯಾಣ ಕರ್ನಾಟಕ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕು. ಶಿಕ್ಷಣ ಅಥವಾ ಉದ್ಯೋಗ ಅರ್ಜಿ ಫಾರಂಗಳ ಭರ್ತಿಯಲ್ಲಿ ರಾಜ್ಯ ಮತ್ತು ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ಎಂಬ ಖಾಲಂ ಹಾಗೂ 2020 ರ ರಾಜ್ಯ ಸುತ್ತೋಲೆ ರದ್ದು ಮಾಡಿದರೆ ಮಾತ್ರ ಕಲಂ 371(ಜೆ) ಕಾಯ್ದೆ ತಿದ್ದುಪಡಿ ಸಾರ್ಥಕವಾಗುತ್ತದೆ.
ಮೂಲ ಉದ್ದೇಶ ಈಡೇರಿಸಬೇಕು :
6 ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ನಿರಂತರ ಹೋರಾಟ ನಂತರ ಸಂಸತ್ತಿನಲ್ಲಿ ಸಂವಿಧಾನದ ಕಲಂ371(ಜೆ)ಗೆ ತಿದ್ದುಪಡಿ ವಿಶೇಷ ಸ್ಥಾನಮಾನ ನೀಡಿದ್ದು ಕೆಲವು ಅಧಿಕಾರಿಗಳು ಚುನಾಯಿತರಿಂದ ನಿಯಮವನ್ನು ತಮಗೆ ಬೇಕಾದಂತೆ ತಿದ್ದುಪಡಿ ಮಾಡಿಕೊಂಡು ಮೊದಲಿನಂತೆ 6 ಜಿಲ್ಲೆಯ ಅಭ್ಯರ್ಥಿಗಳು ರಾಜ್ಯಮಟ್ಟದಲ್ಲಿ ಮೇರಿಟ್ ಬಂದರೂ ಮುಂಬಡ್ತಿ ನೆಮದಲ್ಲಿ ಸ್ಥಳೀಯ ವೃಂದ ಎಂದು ಪರಿಗಣಿಸುತ್ತಿದ್ದು ಇದರಿಂದ ಪ್ರತಿಭಾನ್ವಿತರಿಗೆ ಮಾತ್ರ ಅವಕಾಶ ದೊರಕಿ ಕಲಂ 371(ಜೆ) ಮೀಸಲಿನಡಿಯಲ್ಲಿ ಬರುವವರಿಗೆ ಅನ್ಯಾಯವಾಗುತ್ತದೆ. 6 ಜಿಲ್ಲೆ ಅಭ್ಯರ್ಥಿಗಳಿಗೆ ರಾಜ್ಯ ಸಾಮಾನ್ಯ ವೃಂದ ಮತ್ತು ಸ್ಥಳೀಯ ಕಲಂ 371(ಜೆ) ವೃಂದದಲ್ಲಿ ಅವಕಾಶ ಕಲ್ಪಿಸಬೇಕು.ಇದರಿಂದ ಮತ್ತಷ್ಟು ಮೆಡಿಕಲ್, ಇಂಜಿನಿಯರಿಂಗ್ ಸೀಟುಗಳು ಮತ್ತು ಉದ್ಯೋಗಗಳು ಲಭಿಸಲಿವೆ. 2020 ರ ಸರಕಾರ ಸುತ್ತೋಲೆ ಕೂಡಲೇ ರದ್ದಾಗಬೇಕೆಂದು ಪಿಎಸ್‌ಐ ಪರೀಕ್ಷೆ ಬರೆದ ಅಭ್ಯರ್ಥಿ ಎಮ್ .ಆರ್. ಕುರಿ ಉದಯವಾಣಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ .
– ಕೆ. ನಿಂಗಜ್ಜ ಗಂಗಾವತಿ