ಕಲಕೇರಿ: ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಸಮಸ್ಯೆಯನ್ನು ಕೇಳಿದ ರೈತರೊಂದಿಗೆ ಅನುಚಿತವಾಗಿ ವರ್ತಿಸಿದ ಹೆಸ್ಕಾ ನೌಕರರ ವಿರುದ್ಧ ತಿಳಗೂಳ, ಕೊಂಡಗೂಳಿ, ಕೆರುಟಗಿ, ಬಿಂಜಲಭಾವಿ ಸೇರಿದಂತೆ ಕಲಕೇರಿಯ ಸುತ್ತಮುತ್ತಲಿನ ರೈತರು ಕಲಕೇರಿ ಕೆಇಬಿ ಮುಂದೆ ಪ್ರತಿಭಟನೆ ನಡೆಸಿದರು.
ಹೆಸ್ಕಾ 33/11 ಕೆವಿ ಕಲಕೇರಿ ಶಾಖೆಯಿಂದ ಕೊಂಡಗೂಳಿ, ತಿಳಗೂಳ, ಕೆರುಟಗಿ, ಬಿಂಜಲಭಾವಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಪ್ರಸರಣವಾಗುವ ವಿದ್ಯುತ್‌ನಲ್ಲಿ ನಿರಂತರ ವ್ಯತ್ಯಯವಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು, ನೌಕರರು ಸಮಸ್ಯೆಯನ್ನು ಅರಿತು ತ್ವರಿತವಾಗಿ ಸರಿಪಡಿಸಿ ರೈತರ ಹೊಲಗಳಿಗೆ ಮತ್ತು ಕುಡಿಯುವ ನೀರು ಪೂರೈಕೆ ಸಂಬಂಧಿಸಿದ ವಿದ್ಯುತ್‌ನಲ್ಲಿ ನಿರಂತರ ಸಮಸ್ಯೆಯಾಗುತ್ತಿದ್ದು ಇದನ್ನು ಸರಿಪಡಿಸದೇ ನೌಕರರು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ.
ಕೂಡಲೇ ರೈತರಿಗೆ ಸಮಸ್ಯೆಯಾಗದಂತೆ ದಿನದಲ್ಲಿ 7 ತಾಸು 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಸೋಮನಗೌಡ ಯಾಳವಾರ, ಮಡಿವಾಳಪ್ಪ ಮಾಳನೂರ, ರಮೇಶ ಅಡಕಿ, ಪ್ರಭು ನೆಲ್ಲಗಿ, ಬಸವರಾಜ ಕರದಾಳಿ, ಮುತ್ತುಗೌಡ ಪೊಲೀಸ್‌ಪಾಟೀಲ ಸೇರಿದಂತೆ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ರೈತರು ಕೆಇಬಿಗೆ ಮುತ್ತಿಗೆ ಹಾಕಿ ಆಗ್ರಹ ಪಡಿಸಿದರು.
ಮನವಿ ಸ್ವೀಕರಿಸಿದ ಮಾತನಾಡಿದ ಕೋರವಾರ ಶಾಖಾಧಿಕಾರಿ ನಾಗರಾಜ ಅತಾಲಟಿ ಅವರು ಒಂದೇ ಫೀಡರ್ ಮೂಲಕ ಕೊಂಡಗೂಳಿ ಮತ್ತು ತಿಳಗೂಳ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿದ್ದುದರಿಂದ ಲೈನಮನ್‌ಗಳ ಕಾರ್ಯ ನಿರ್ವಹಿಸುವಲ್ಲಿ ವ್ಯತ್ಯಯವಾಗಿದ್ದು, ಕೂಡಲೇ ಲೈನ್‌ಮನ್‌ಗಳಿಗೆ ಕಾರ್ಯಭಾರವನ್ನು ಹಂಚಿಕೆ ಮಾಡಿ ರೈತರಿಗೆ ಸಮಸ್ಯೆಯಾಗದಂತೆ ಒಟ್ಟು 7 ತಾಸುಗಳ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಈರಣ್ಣ ಕಡಕೋಳ, ರಮೇಶ ಅಡಕಿ, ಶರಣಗೌಡ ಬಿರಾದಾರ, ಪ್ರಭು ನೆಲ್ಲಗಿ, ರಾಮನಗೌಡ ಚಟ್ಟರಕಿ, ಮಡಿವಾಳಪ್ಪ ಮಾಳನೂರ, ಬಸವರಾಜ ಕರದಾಳಿ, ಈರಣ್ಣ ಗದ್ದಗಿ, ಮುತ್ತುಗೌಡ ಪೋಲಿಸ್‌ಪಾಟೀಲ, ಅಕ್ಬರ್ ನದಾಫ್, ಪ್ರತಾಪರಡ್ಡಿ ಯಡಹಳ್ಳಿ, ಮಲ್ಲಿಕಾರ್ಜುನ ಅಲ್ಲಾಪುರ, ಪ್ರಭಾಕರ ಡಿಗ್ಗಾವಿ, ಎಮ್.ಕೆ.ಮನಿಯಾರ, ರಾಜು ಸೀತಿಮನಿ, ಪ್ರಕಾಶ ಮಾದರ, ಬಾಬರ ಕುಳಗೇರಿ, ಚಂದು ಅಲ್ಲಾಪುರ ಕುಮಾರ ಹೆಬ್ಟಾಳ, ಮಡಿವಾಳಪ್ಪ ಕರದಾಳಿ, ಭೀಮನಗೌಡ ಮುದ್ನೂರ ಸೇರಿದಂತೆ ಕೊಂಡಗೂಳಿ, ತಿಳಗೂಳ, ಕೆರುಟಗಿ, ಬಿಂಜಲಭಾವಿ, ಕಲಕೇರಿ ರೈತರು ಹಾಗೂ ಸಾರ್ವಜನಿಕರು ಇದ್ದರು.