ಮುಂಬಯಿ: ಸದ್ಗುರು ಸಾಯಿ ಬಾಬಾರ ಆಶೀರ್ವಾದ, ಸಮಿತಿಯ ಸದಸ್ಯರ ಸಹಕಾರ ಹಾಗೂ ಭಕ್ತಾದಿಗಳ ಬೆಂಬಲದೊಂದಿಗೆ ಸಮಿತಿ ಕಳೆದ 47 ವರ್ಷಗಳಿಂದ ಸಾಯಿ ಮಹಾ ಪೂಜೆ ಹಾಗೂ ಇನ್ನಿತರ ಸಮಾಜಪರ ಸೇವೆಯನ್ನು ಮಾಡುತ್ತಿದೆ. ಪೂಜಾ ಸ್ಥಳದ ಅಭಾವ ಇದ್ದರೂ ಭಕ್ತರು ಪ್ರತಿ ಗುರುವಾರ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಬಂದು ಸಹಕರಿಸುತ್ತಿದ್ದಾರೆ. ಭಕ್ತರ ಈ ಗುಣವು ಸಮಿತಿಯ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಸಾಯಿಬಾಬಾ ಪೂಜಾ ಸಮಿತಿಯ ಅಧ್ಯಕ್ಷ ಮಾಧವ ಎಸ್. ಶೆಟ್ಟಿ ಹೇಳಿದರು.
ಅ. 19ರಂದು ಕಾಲಘೋಡಾ ಸಿಟಿ ಸಿವಿಲ್ ಕೋರ್ಟ್‌ನ ಸಮೀಪದ ಹೋಮ್‌ಸ್ಟ್ರೀಟ್‌ನಲ್ಲಿರುವ ಸಾಯಿ ಮಂದಿರದಲ್ಲಿ ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡಾದ 47ನೇ ವಾರ್ಷಿಕ ಮಹಾಪೂಜೆಯ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಶುಭ ಹಾರೈಸಿ ಮಾತನಾಡಿದ ಅವರು, ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಆದರ್ಶ ಪ್ರಜೆಗಳಾಗಿ ಬಾಳಬೇಕು. ಸಾಯಿಬಾಬಾ ಸಮಿತಿಗೆ ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳೇ ಮುಂದೆ ಪೋಷಿಸಿ ಬೆಳೆಸಬೇಕು ಎಂದರು.
ಸಮಿತಿಯ ಗೌರವ ಕಾರ್ಯದರ್ಶಿ ಪ್ರೊ| ಕೇಶವ ಎಚ್. ಕರ್ಕೇರ ಅವರು ಮಾತನಾಡಿ, ಸಮಿತಿಯು ಧಾರ್ಮಿಕ ಸೇವೆಯೊಂದಿಗೆ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ವೈದ್ಯಕೀಯ ನೆರವು, ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರ ಇನ್ನಿತರ ಸಮಾಜಪರ ಸೇವೆಗಳಲ್ಲೂ ನಿರತವಾಗಿದೆ. ತುಳು-ಕನ್ನಡಿಗರು ಸಮಿತಿಯ ಇಂತಹ ಸಮಾಜಪರ ಕಾರ್ಯಕ್ರಮಗಳಿಗೆ ಸ್ಪಂದಿಸಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ 47ನೇ ವಾರ್ಷಿಕ ಮಹಾಪೂಜೆಗೆ ಅಧಿಕ ಮೊತ್ತದ ಧನ ಸಂಗ್ರಹಗೈದ ಮಾಧವ ಎಸ್. ಶೆಟ್ಟಿ, ಮುರಳಿ ಅಗ್ನಿàಶ್ವರ್ ಹಾಗೂ ಜಯ ಎಸ್. ಶೆಟ್ಟಿ ಅವರನ್ನು ಸಮಿತಿಯ ವತಿಯಿಂದ ಸ್ಮರಣಿಕೆ ಮತ್ತು ಪ್ರಸಾದವನ್ನಿತ್ತು ಗೌರವಿಸಲಾಯಿತು. ವರ್ಷದ ಉತ್ತಮ ಸಾಯಿ ಸೇವಕ ಪ್ರಶಸ್ತಿಯನ್ನು ಉದ್ಯಮಿ ಮುರಳಿ ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಸಾವರ್‌ಪಾಡಾದ ಶ್ರೀ ಶನೀಶ್ವರ ಮಂದಿರದ ಅರ್ಚಕ ವಿಷ್ಣು ಭಟ್ ಅವರಿಂದ ಕೃಷ್ಣ ದೇವಾಡಿಗ ದಂಪತಿಯ ಉಪಸ್ಥಿತಿಯಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು. ಅನಂತರ ಕಲಶ ಪ್ರತಿಷ್ಠೆ, ವಿದ್ಯಾದಾಯಿನಿ ಸಭಾದ ಭಜನಾ ಸಮಿತಿಯವರಿಂದ ಭಜನೆ, ಪ್ರದೀಪ್ ಸುವರ್ಣ ಮತ್ತು ರಮೇಶ್ ಪೂಜಾರಿ ಅವರ ದಿವ್ಯ ಹಸ್ತದಿಂದ ಶ್ರೀ ಸಾಯಿ ಮಹಾಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು.
ಪರಿಸರದ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು. ಟ್ರಸ್ಟಿಗಳಾದ ಅಡ್ವೆ ಜಯ ಎಸ್. ಶೆಟ್ಟಿ, ಸೀತಾರಾಮ ಎಸ್. ಶೆಟ್ಟಿ, ಜಯ ಎಂ. ಶೆಟ್ಟಿ, ಕೋಶಾಧಿಕಾರಿ ರವಿ ಡಿ. ಶೇಣವ, ಜತೆ ಕಾರ್ಯದರ್ಶಿ ರಮೇಶ್ ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ಬಿ. ಎಂ. ಶೆಟ್ಟಿ, ಸಮಿತಿಯ ಸದಸ್ಯರಾದ ರವಿ ಎಸ್. ಶೆಟ್ಟಿ, ವೈ. ಎಸ್. ಪುತ್ರನ್, ಸುಧಾಕರ ಶೆಟ್ಟಿ, ರವಿ ಎನ್. ಶೆಟ್ಟಿ, ಮುರಳಿ ಅಗ್ನಿàಶ್ವರ್, ಅಬುಬಕ್ಕRರ್ ಹಾಗೂ ಕಮಲಾ ಎನ್. ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕನ್ನಡ ಭವನ ಸೊಸೈಟಿಯ ಅಧ್ಯಕ್ಷ ಎ. ಬಿ. ಶೆಟ್ಟಿ, ತ್ರಿಭುವನೇಶ್ವರಿ ಸಮಿತಿ ಬೋರಾಬಜಾರ್‌ನ ಉಪಾಧ್ಯಕ್ಷ ಪ್ರಕಾಶ್ ಮೂಡಬಿದ್ರೆ, ಪರಿಸರದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಮುಖ್ಯಸ್ಥರು. ಸಾಯಿ ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.