ಭೀಮರಾಯ ಕುಡ್ಡಳ್ಳಿ
ಕಾಳಗಿ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬೆಲ್ಲ ಹೊಂಡಗಳು, ಸ್ವಾಗತಿಸುವ ಬಯಲು ಶೌಚಾಲಯ, ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಕುಡಿಯಲು ಶುದ್ಧ ನೀರಿನ ಕೊರತೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಭರತನೂರ ಗ್ರಾಮವನ್ನು ಕೇಳುವರೇ ಇಲ್ಲದಂತಾಗಿದೆ.
ಕಾಳಗಿ ಜಿಲ್ಲಾ ಪಂಚಾಯತಿ, ರಾಜಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಭರತನೂರ ಗ್ರಾಮದಲ್ಲಿ ಸುಮಾರು 550 ಮನೆಗಳಿದ್ದು, 2000ಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಇಬ್ಬರು ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಕಾಳಗಿ ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3ಕಿ.ಮೀ ರಸ್ತೆಯಲ್ಲಿ 2ಕಿ.ಮೀ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದು, ಮಳೆ ನೀರು ತುಂಬಿಕೊಂಡಿದೆ. ಬೈಕ್ ಸವಾರರು ಪ್ರತಿದಿನ ರಸ್ತೆ ಮೇಲೆ ಹರಸಾಹಸ ಪಡುವಂತಾಗಿದೆ. ಗ್ರಾಮದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯವಿಲ್ಲ. ಹೀಗಾಗಿ ರಸ್ತೆ ಬದಿಯಲ್ಲೇ ಪ್ರಕೃತಿ ಕರೆಗೆ ಓಗುಡುವಂತ ದಯನೀಯ ಸ್ಥಿತಿ ಇಲ್ಲಿದೆ.
ಗ್ರಾಮದಲ್ಲಿ ಚರಂಡಿ ಇಲ್ಲದೇ ಇರುವುದರಿಂದ ಮನೆಯ ಚರಂಡಿ ನೀರು ನೇರವಾಗಿ ರಸ್ತೆಗೆ ಹರಿದು, ರಸ್ತೆಯೆಲ್ಲ ಕೆಸರು ಗದ್ದೆಯಂತಾಗಿದೆ. ಸೊಳ್ಳೆಗಳು ಈ ಜಾಗವನ್ನೇ ತಮ್ಮ ಆವಾಸಸ್ಥಾನ ಮಾಡಿಕೊಂಡಿವೆ. ಇದರಿಂದಾಗಿ ಜನರು ರೋಗ ಹರಡುವ ಭೀತಿಯಲ್ಲಿದ್ದಾರೆ. ದಿನನಿತ್ಯ ಶಾಲೆಗೆ ಹೊಗುವ ಮಕ್ಕಳು, ವೃದ್ಧರು, ಮಹಿಳೆಯರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹಲವಾರು ಜನರು ಚರಂಡಿ ನೀರಿನಲ್ಲಿ ಬಿದ್ದು ಕೈ, ಕಾಲುಗಳಿಗೆ ಗಾಯ ಮಾಡಿಕೊಂಡಿದ್ದಾರೆ.
ನೀರುಪಯುಕ್ತ ನೀರಿನ ಟ್ಯಾಂಕ್: ಭರತನೂರ ಗ್ರಾಮದಲ್ಲಿ 2012-13ನೇ ಸಾಲಿನಲ್ಲಿ ಜಿ.ಪಂನ ನೀರು ಸರಬರಾಜು ಯೋಜನೆ ಅಡಿಯಲ್ಲಿ 16 ಲಕ್ಷ ರೂ. ವೆಚ್ಚದ 50 ಸಾವಿರ ಲೀಟರ್ ಸಾಮರ್ಥ್ಯವಿರುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಇದು ಕಳಪೆ ಮಟ್ಟದಿಂದ ಕೂಡಿದ್ದು ತುಕ್ಕು ಹಿಡಿಯುತ್ತಿದೆ. ಆದರೂ ಇಲ್ಲಿಯ ವರೆಗೆ ಗ್ರಾಮದಲ್ಲಿ ಪೈಪ್ ಲೈನ್ ವ್ಯವಸ್ಥೆ ಮಾಡಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ವರ್ಷಗಳೇ ಕಳೆದಿವೆ. ಆದರೂ ಪ್ರಾರಂಭವಾಗಿಲ್ಲ. ಪ್ರತ್ಯೇಕ ಬೋರವೆಲ್ ವ್ಯವಸ್ಥೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಹಾಳು ಬಿದ್ದು, ಗಾಜುಗಳೆಲ್ಲ ಪುಡಿಪುಡಿಯಾಗಿವೆ. ಸುತ್ತಮುತ್ತ ಚರಂಡಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ಗ್ರಾ.ಪಂಗೆ ಕೇಳಿದರೆ ಇದು ನಮಗೆ ಸಂಬಂಧ ಪಡುವುದಿಲ್ಲ ಎನ್ನುತ್ತಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದಿನನಿತ್ಯ ಅಶುದ್ಧ ನೀರನ್ನೇ ಕುಡಿಯುವಂತಾಗಿದೆ ಎಂದು ಶಿವಾನಂದರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಹೊರವಲಯದ ನದಿ ದಂಡೆಯ ಕೊಳವೆ ಬಾವಿಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ನೀರಿನ ಪೈಪುಗಳು ಎಲ್ಲೆಂದರಲ್ಲಿ ಒಡೆದಿರುವುದರಿಂದ, ಚರಂಡಿ ನೀರು ಮಿಶ್ರಣವಾಗಿ ಸರಬರಾಜಾಗುತ್ತಿದೆ.