Advertisement

4ರಿಂದ ಕಲಘಟಗಿ ಜಾತ್ರೆ ಸಡಗರ

01:35 PM Feb 28, 2020 | Naveen |

ಕಲಘಟಗಿ: ಸಹ್ಯಾದ್ರಿ ಬೆಟ್ಟಗಳ ಅಂಚಿನಲ್ಲಿರುವ ಕಲಘಟಗಿ ಪಟ್ಟಣ ತನ್ನದೆಯಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿನ ದಪ್ಪ ಅಕ್ಕಿ, ಇಟ್ಟಿಗೆ, ಕಟ್ಟಿಗೆ ತೊಟ್ಟಿಲು, ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಗ್ರಾಮದೇವಿ ಜಾತ್ರೆ ದೇಶ-ವಿದೇಶಗಳಲ್ಲೂ ಪ್ರಸಿದ್ಧಿ ಹೊಂದಿವೆ.

Advertisement

ಮಾ. 4ರಿಂದ 12ರ ವರೆಗೆ ಒಂಭತ್ತು ದಿನಗಳ ಕಾಲ ಬಹು ವಿಜೃಂಭಣೆಯಿಂದ ಜರುಗಲಿರುವ ಪಟ್ಟಣದ ಗ್ರಾಮದೇವಿಯರ ಜಾತ್ರೆ ಹಲವಾರು ವಿಧಿ-ವಿಧಾನಗಳನ್ನು ಒಳಗೊಂಡಿದೆ. ಜಾತ್ರೆಯ ನಿಬಂಧನೆಯಂತೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಾದ ಮಾಚಾಪುರ, ದಾಸ್ತಿಕೊಪ್ಪ, ಬೆಂಡಿಗೇರಿ, ಕಲಕುಂಡಿ ಗ್ರಾಮಗಳಲ್ಲಿ ಹೊರಬಿಡಿಕೆ ಎಂಬ ವಿಶಿಷ್ಟ ಸಂಪ್ರದಾಯ ಆಚರಿಸಲಾಗುತ್ತಿದೆ.

ಪ್ರತಿ ಜಾತ್ರೆಯ ಪೂರ್ವದ ಐದು ವಾರವನ್ನು ಜಾತ್ರಾ ಸಂಪ್ರದಾಯದಂತೆ ಮನೆ ಹಾಗೂ ಗ್ರಾಮದಿಂದ ಹೊರಬಿಡಿಕೆ ವಾರವನ್ನಾಗಿ ಆಚರಿಸಲಾಗುತ್ತದೆ. ಕಳೆದ ಫೆ. 11ರ ಮಂಗಳವಾರ, 14ರ ಶುಕ್ರವಾರ, 18ರ ಮಂಗಳವಾರ, 21ರ ಶುಕ್ರವಾರ ಮತ್ತು 25ರ ಮಂಗಳವಾರವನ್ನು ಈಗಾಗಲೇ ಆಚರಿಸಲಾಗಿದೆ.

ಹೊರಬಿಡಿಕೆಯ ದಿನ ನಸುಕಿನಲ್ಲಿ ಎದ್ದು ಮನೆ ಅಂಗಳವನ್ನು ಸ್ವಚ್ಛಗೊಳಿಸಿ, ರಂಗವಲ್ಲಿ ಹಾಕಿ, ಮನೆ ಬಾಗಿಲಿಗೆ ತಳಿರು ತೋರಣ ಕಟ್ಟಿ, ಸ್ನಾನ, ಪೂಜೆ ಸಲ್ಲಿಸಿ, ನಂತರ ಅಡುಗೆ ಮಾಡಿಕೊಂಡು, ಕುಡಿಯುವ ನೀರು, ಕುಳಿತುಕೊಳ್ಳಲು ಬೇಕಾದ ಚಾಪೆ, ಹಾಸಿಗೆ, ಮುಂತಾದ ಸಾಮಗ್ರಿಗಳೊಂದಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರೆಲ್ಲ ಪಟ್ಟಣ ಹಾಗೂ ಗ್ರಾಮಗಳ ಹೊರ ವಲಯದಲ್ಲಿರುವ ತೋಟ, ಹೊಲ, ಮಠ ಹಾಗೂ ಮಂದಿರಗಳಿಗೆ ತೆರಳಿ ಇಡಿ ದಿನವನ್ನು ಅಲ್ಲಿಯೇ ಕಳೆಯುತ್ತಾರೆ.

ಮನೆಯಿಂದ ಹೋಗುವಾಗ ಬಾಗಿಲಿಗೆ ಹಾಗೂ ನೀರಿನ ತಂಬಿಗೆಯಲ್ಲಿ ಬೇವಿನ ತಪ್ಪಲನ್ನು ಇಟ್ಟು ಮನೆಗೆ ಬೀಗವನ್ನು ಹಾಕಿ ಹೋಗಿರುತ್ತಾರೆ. ಮಧ್ಯಾಹ್ನ ಗ್ರಾಮ ದೇವತೆಯರು ಮನೆ ಮತ್ತು ಊರಲ್ಲಿ ಸುತ್ತುವರು ಎಂಬ ನಂಬಿಕೆ ಅಚಲವಾಗಿದೆ. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳವರೂ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಂಜೆ ಆಗುತ್ತಿದ್ದಂತೆ ತಮ್ಮ ಮನೆ ಕಡೆ ತಿರುಗಿ ಬಂದು ಮನೆ ಬಾಗಿಲಿನ ಮುಂದೆ ಇಟ್ಟ ತಂಬಿಗೆಯಲ್ಲಿನ ನೀರನ್ನು ಬೇವಿನ ತಪ್ಪಲಿನಿಂದ ಮನೆ ತುಂಬ ಸಿಂಪಡಿಸಿ ಕೈ ಮುಗಿದು ಒಳಗೆ ಹೋಗುವ ವಾಡಿಕೆ ಇದೆ. ಈ ಆಚರಣೆಯನ್ನು ಹಿಂದುಗಳು ಸೇರಿದಂತೆ ಎಲ್ಲ ಧರ್ಮೀಯರು ಅನುಸರಿಸುತ್ತಿರುವುದು ಸೌಹಾರ್ದತೆ ಹಾಗೂ ಭಾವೈಕ್ಯತೆಯ ಕೊಡುಗೆಯಾಗಿದೆ.

Advertisement

ಶ್ರೀ ದ್ಯಾಮವ್ವ, ಶ್ರೀ ದುರ್ಗವ್ವ ಜಾತ್ರಾ ಮಹೋತ್ಸವದ ಯಶಸ್ಸಿಗೆ ದೇವಸ್ಥಾನದ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಎಂ.ಐ. ಕಟ್ಟಿ, ಪಿ.ಜಿ. ಬಾಳಿಕಾಯಿ, ಶ್ರೀಕಾಂತ ಕಟಾವಕರ, ರಾಕೇಶ ಅಳಗವಾಡಿ, ಶಿವಕುಮಾರ ಖಂಡೇಕರ, ನಿತಿನ ಶೆವಡೆ, ಅಮೃತ ಅಂಗಡಿ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಸುಧೀರ ಬೋಳಾರ, ಪ್ರಮೋದ ಪಾಲ್ಕರ, ಗಂಗಪ್ಪ ಗೌಳಿ, ಬಾಳು ಖಾನಾಪುರ, ಶಶಿಧರ ನಿಂಬಣ್ಣವರ, ಮಂಜುನಾಥ ಸಾಬಣ್ಣವರ, ಅನಿಲ ರಂಗೊಳ್ಳಿ ಪಟ್ಟಣದ ಸಮಸ್ತ ನಾಗರಿಕರ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ ಎಲ್ಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಹಿಂದಿಗಿಂತಲೂ ವಿಶಿಷ್ಟ ಹಾಗೂ ವೈಭವಪೂರಿತವಾಗಿ ಆಚರಿಸಲು ಕಂಕಣಬದ್ಧರಾಗಿ ಕಾರ್ಯೋನ್ಮುಖರಾಗಿದ್ದಾರೆ.

ಪ್ರಭಾಕರ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next