ಕಲಬುರಗಿ: ಕೊರೊನಾ ರೋಗಿಗಳಿಗೆ ತಕ್ಷಣವೇ ಸ್ಪಂದಿಸುವ ಮತ್ತು ಸೋಂಕಿನಿಂದ ಮೃತಪಟ್ಟವರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಸಹಾಯವಾಗುವಂತೆ ಜಿಲ್ಲಾ ಕಾಂಗ್ರೆಸ್ ವತಿಯಿಂದ “ಆರೋಗ್ಯ ಹಸ್ತ’ ಅಭಿಯಾನದಡಿ ಎರಡು ಆಂಬ್ಯುಲೆನ್ಸ್ ಸೇವೆಗೆ ಶನಿವಾರ ಚಾಲನೆ ನೀಡಲಾಯಿತು. ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಆವರಣದಲ್ಲಿ ಮಾಜಿ ಸಚಿವರಾದ ಡಾ| ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಹಾಗೂ ಮುಖಂಡರು ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರ ನಡುವೆ ಸೋಂಕಿತರಿಗೆ ಆಂಬ್ಯುಲೆನ್ಸ್ ಕೊರತೆ ಉಂಟಾಗುತ್ತಿದೆ. ಮೃತಪಟ್ಟವರನ್ನು ಆಸ್ಪತ್ರೆಯಿಂದ ಅಂತ್ಯ ಸಂಸ್ಕಾರ ಸ್ಥಳಕ್ಕೆ ಸಾಗಿಸಲೂ ಆಂಬ್ಯುಲೆನ್ಸ್ ಸಿಗುತ್ತಿಲ್ಲ. ಸಿಕ್ಕರೂ ಹೆಚ್ಚು ಹಣ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡ ಜನರ ಸಹಾಯಕ್ಕಾಗಿ ಈ ಆಂಬ್ಯುಲೆನ್ ಗಳನ್ನು ಉಚಿತವಾಗಿ ಸಾರ್ವಜನಿಕ ಸೇವೆಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.
ಸೋಂಕಿತರ ಕುಟುಂಬದವರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ ಒಟ್ಟು ಐದು ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಪ್ರಸ್ತುತವಾಗಿ ಎರಡು ಆಂಬ್ಯುಲೆನ್ಸ್ ಕಲ್ಪಿಸಲಾಗುತ್ತಿದೆ. ಶೀಘ್ರವೇ ಉಳಿದ ಮೂರು ಆಂಬ್ಯುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ನೀಡಲಾಗುವುದು. ಈ ಉಚಿತ ಸೇವೆಗಾಗಿ ಮೊಬೈಲ್ ಸಂಖ್ಯೆ 63629 43441ಕ್ಕೆ ಸಂಪರ್ಕಿಸಬಹುದು ಎಂದರು. ಆಡಿಟ್ ಮಾಡಿಸಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ, ಆಕ್ಸಿಜನ್ ಮತ್ತು ರೆಮ್ ಡೆಸಿವಿಯರ್ ಇಂಜೆಕ್ಷನ್ ಸಮಸ್ಯೆ ಇದೆ. ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಆಕ್ಸಿಜನ್ ಪೂರೈಕೆ ಬಗ್ಗೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಸೂಕ್ತ ಭರವಸೆಯನ್ನು ನೀಡುತ್ತಿಲ್ಲ. ಹೀಗಾಗಿ ರೋಗಿಗಳಿಗೆ ಡಿಸಾcರ್ಜ್ ಆಗುವಂತೆ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎಷ್ಟು ಆಕ್ಸಿಜನ್ ಅಗತ್ಯವಿದೆ? ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ಸಿಲಿಂಡರ್‌ಗಳು ಲಭ್ಯವಿವೆ? ಇನ್ನು, ಎಷ್ಟು ಆಕ್ಸಿಜನ್ ಬೇಡಿಕೆ ಇದೆ ಎನ್ನುವ ಕುರಿತು ಜಿಲ್ಲಾಡಳಿತ ಆಡಿಟ್ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ರಾತ್ರೋರಾತ್ರಿ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಈಗಲೂ ಅಕ್ರಮವಾಗಿ ಆಕ್ಸಿಜನ್ ಸಾಗಿಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಅದೇ ರೀತಿ ರೆಮ್ ಡೆಸಿವಿಯರ್ ಇಂಜೆಕ್ಷನ್ ಕೂಡ ಕಾಳಸಂತೆಯಲ್ಲಿ ಮಾರಾಟವಾಗುತ್ತಲೇ ಇದೆ. ಜಿಲ್ಲೆಯಲ್ಲೂ ಆಕ್ಸಿಜನ್ ಮತ್ತು ಐಸಿಯು ಬೆಡ್‌ಗಳು ಬಿಜೆಪಿಯವರು ಹೇಳಿದರೆ ಮಾತ್ರ ಸಿಗುವಂತೆ ಆಗಿದೆ. ಬೆಡ್‌ಗಳ ಸಮಸ್ಯೆ ಪರಿಹರಿಸಲು ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಿ, ಮೇಲುಸ್ತುವಾರಿ ವಹಿಸಬೇಕೆಂದು ಹೇಳಿದರು.
ಲಸಿಕೆ ಇಲ್ಲದೇ ಅಭಿಯಾನ: ಕೊರೊನಾ ರಕ್ಷಣೆಗೆ ಲಸಿಕೆಯೊಂದೇ ಸದ್ಯದ ಆಸ್ತ್ರ. ಆದರೆ, ಅಗತ್ಯದಷ್ಟು ಲಸಿಕೆ ಇಲ್ಲದೇ ಅಭಿಯಾನ ನಡೆಸಲಾಗುತ್ತಿದೆ. ಮೊದಲ ಡೋಸ್ ಪಡೆದ ಎಷ್ಟೋ ಜನರಿಗೆ ಎರಡನೇ ಡೋಸ್ ಲಸಿಕೆ ಸಿಗುತ್ತಿಲ್ಲ ಎಂದು ಆಪಾದಿಸಿದರು. ಜಿಲ್ಲೆಯಲ್ಲಿ 6,43,232 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಆದರೆ, ಇದುವರೆಗೆ 2,10,280 ಜನರಿಗೆ ಮಾತ್ರ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಕೇವಲ 45,947 ಮಂದಿಗೆ ಎರಡನೇ ಡೋಸ್ ಲಸಿಕೆ ಸಿಕ್ಕಿದೆ. ಹೀಗಾದರೆ, ಅಭಿಯಾನ ಯಾವಾಗ ಮುಗಿಸುತ್ತಾರೆ? ಅದೇ ಗುಜರಾತಿನಲ್ಲಿ ಅಧಿಕ ಪ್ರಮಾಣದಲ್ಲಿ ಲಸಿಕೆ ಒದಗಿಸಲಾಗಿದೆ. ಕರ್ನಾಟಕಕ್ಕೆ ಲಸಿಕೆ ನೀಡಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ. ವೈಜ್ಞಾನಿಕವಾಗಿ ಬೇಡಿಕೆ ಅನುಸಾರ ಲಸಿಕೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು. ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಶಿವಾನಂದ ಪಾಟೀಲ, ಶರಣು ಮೋದಿ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ ಮತ್ತಿತರರು ಇದ್ದರು.