ಕಲಬುರಗಿ/ಶಹಾಬಾದ: ಮದ್ಯ ಸಾಗಿಸುತ್ತಿದ್ದ ಲಾರಿ ಮತ್ತು ಸಕ್ಕರೆ ಸಾಗಿಸುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿ ಎರಡೂ ಲಾರಿ ಹೊತ್ತಿ ಉರಿದು ಇಬ್ಬರು ಚಾಲಕರು ಸಜೀವ ದಹನವಾದ ಘಟನೆ ಜಿಲ್ಲೆಯ ಶಹಾಬಾದ ತಾಲೂಕಿನ ತೊನಸನಹಳ್ಳಿ ಸಮೀಪ ರವಿವಾರ ರಾತ್ರಿ ನಡೆದಿದೆ.
ಲಾರಿ ಚಾಲಕರಾದ ಶಹಾಬಾದ ನಿವಾಸಿ ಖಾಜಾ ಮೋಹಿದ್ದೀನ್ (40), ಅಫಜಲಪುರ ತಾಲೂಕಿನ ಚಿನಮಗೇರಿ ನಿವಾಸಿ ಸಿದ್ಧು ಕಂಠೀಕರ (20) ಮೃತ ದುರ್ದೈವಿಗಳು.
ಒಂದು ಲಾರಿ ಶಹಾಬಾದ ಕಡೆಯಿಂದ ಜೇವರ್ಗಿ ಕಡೆಗೆ ಮತ್ತು ಮತ್ತೊಂದು ಲಾರಿ ಜೇವರ್ಗಿ ಕಡೆಯಿಂದ ಶಹಾಬಾದ್ ಕಡೆಗೆ ಸಂಚರಿಸುತ್ತಿದ್ದ ವೇಳೆ ಮುಖಾಮುಖೀ ಡಿಕ್ಕಿ ಸಂಭವಿಸಿ ಬೆಂಕಿ ಕಾಣಿಕೊಂಡಿದೆ. ಲಾರಿಗಳಲ್ಲಿ ಸಕ್ಕರೆ ಚೀಲಗಳು ಮತ್ತು ಲಿಕ್ಕರ್ ಪ್ಯಾಕೆಟ್‌ಗಳು ತುಂಬಿದ್ದರಿಂದ ಬೆಂಕಿಯ ಕೆನ್ನಾಲಿಗೆ ಹಬ್ಬಿಕೊಂಡಿತ್ತು. ಎರಡು ಲಾರಿಗಳು ಹೊತ್ತಿ ಉರಿಯಲು ಆರಂಭಿಸಿದ್ದು, ಎಲ್ಲೆಡೆ ದಟ್ಟ ಹೊಗೆ ಆವರಿಸಿತ್ತು. ಪರಿಣಾಮ ತೊನಸನಹಳ್ಳಿ ಸೇರಿ ಸುತ್ತ-ಮುತ್ತಲಿನ ಗ್ರಾಮಸ್ಥರಲ್ಲಿ ಕೆಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಮೂರು ಅಗ್ನಿಶಾಮಕ ವಾಹನಗಳ ನೆರವಿನಿಂದ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸ ಪಟ್ಟರು. ನಿರಂತರವಾಗಿ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ನಂತರ ಬೆಂಕಿ ಹತೋಟಿ ಬಂತು. ಇಬ್ಬರು ಚಾಲಕರ ಮೃತದೇಹಗಳು ಸುಟ್ಟು ಕರಕಲಾಗಿದ್ದು, ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಸುಟ್ಟು ಕರಕಲಾದ ಎರಡು ವಾಹನಗಳನ್ನು ಪೊಲೀಸರು ಜೆಸಿಬಿ ಮೂಲಕ ರಸ್ತೆ ಪಕ್ಕಕ್ಕೆ ಸರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಲಾರಿಗಳ ತುಂಬಾ ಸಕ್ಕರೆ ಹಾಗೂ ಲಿಕ್ಕರ್ ಪ್ಯಾಕೇಟ್‌ಗಳು ತುಂಬಿದ್ದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪರಶುರಾಮ ಹಾಗೂ ಕಲಬುರಗಿ, ಜೇವರ್ಗಿ ಹಾಗೂ ಚಿತ್ತಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರು. ಈ ಬಗ್ಗೆ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಂಗಮ್ಮ, ಎಎಸ್ ಐಗಳಾದ ಸಾತಲಿಂಗಪ್ಪ, ವೆಂಕಟೇಶ ಸೇರಿದಂತೆ ಇನ್ನಿತರ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು.