Advertisement

ಕಲಬುರಗಿಯಿಂದ ಹಾಸನ ರೈಲು ಓಡಿಸಿ

12:14 PM Feb 13, 2020 | Naveen |

ಕಲಬುರಗಿ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ರೈಲ್ವೆ ಹಳಿ ಡಬ್ಲಿಂಗ್‌ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ.17ರಿಂದ ಕಲಬುರಗಿ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತಿದೆ. ಗಡಿ ಭಾಗದ ಅಕ್ಕಲಕೋಟ ಸಮೀಪದ ಬೋರೋಟಿ-ದುದನಿ-ಕುಲಾಲಿ ರೈಲ್ವೆ ನಿಲ್ದಾಣಗಳ ಮಧ್ಯೆ ಹಳಿ ಕಾಮಗಾರಿ ಶುರುವಾಗಲಿದೆ. ಹೀಗಾಗಿ ಪ್ಯಾಸೆಂಜರ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಓಡಾಟವನ್ನು ಹತ್ತಕ್ಕೂ ಹೆಚ್ಚು ದಿನ ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದ್ದು, ದಿನನಿತ್ಯ ರೈಲು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ.

Advertisement

ಫೆ.17ರಿಂದ 10 ರೈಲುಗಳ ಸಂಚಾರ ಸಂಪೂರ್ಣವಾಗಿ ರದ್ದಾಗಲಿದೆ. 20 ರೈಲುಗಳ ಮಾರ್ಗ ಬದಲಾವಣೆ ಹಾಗೂ ನಾಲ್ಕು ರೈಲುಗಳ ಸಂಚಾರ ಅರ್ಧಕ್ಕೆ ಮೊಟುಕುಗೊಳಿಸಿ ಆದೇಶ ಹೊರಡಿಸಲಾಗಿದೆ. ಗುಂತಕಲ್‌, ರಾಯಚೂರು, ವಾಡಿಯಿಂದ ಸೊಲ್ಲಾಪುರ, ವಿಜಯಪುರಕ್ಕೆ ತೆರಳಲು ಎಲ್ಲ ಪ್ಯಾಸೆಂಜರ್‌ ರೈಲುಗಳ ಸೇವೆ ಸ್ಥಗಿತ ಮಾಡಲಾಗಿದೆ. ಅಲ್ಲದೇ, ಸೊಲ್ಲಾಪುರ-ಹಾಸನ-ಸೊಲ್ಲಾಪುರ ನಡುವಿನ ಎಕ್ಸ್‌ಪ್ರೆಸ್‌ ರೈಲನ್ನು ರದ್ದುಗೊಳಿಸಿದ್ದು, ಇದು ರೈಲ್ವೆ ಇಲಾಖೆ ಅವೈಜ್ಞಾನಿಕ ನಿರ್ಧಾರ ಎಂಬ ಆಕ್ರೋಶ ವ್ಯಕ್ತವಾಗಿದೆ.

ರಾಯಚೂರು, ಸೈದಾಪುರ, ಯಾದಗಿರಿ, ನಾಲವಾರ, ವಾಡಿ ಮತ್ತು ಶಹಾಬಾದ ಸೇರಿದಂತೆ ಹಲವು ಕಡೆಗಳಿಂದ ಕಲಬುರಗಿಗೆ ನಿತ್ಯ ಸಾವಿರಾರು ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ಸಾರ್ವಜನಿಕರು ತಮ್ಮ ಓಡಾಟಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ, ರೈಲು ಹಳಿ ಡಬ್ಲಿಂಗ್‌ ಹೆಸರಲ್ಲಿ ಕಲಬುರಗಿಗೆ ಬರುವ ಗುಂತಕಲ್‌-ಕಲಬುರಗಿ ಹಾಗೂ ಕಲಬುರಗಿ-ವಾಡಿ ಪ್ಯಾಸೆಂಜರ್‌ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ನಿತ್ಯ ಕೆಲಸ ಕಾರ್ಯಗಳಿಗೆ ಸಂಚರಿಸುವ ಪ್ರಯಾಣಿಕರು ಸಮಸ್ಯೆ ಎದುರಿಸುವುದು ಖಂಡಿತ.

ಕಲಬುರಗಿ ಭಾಗದಿಂದ ಬೆಂಗಳೂರಿಗೆ ನಿತ್ಯ ಓಡಾಡುವವರ ಸಂಖ್ಯೆ ಕೂಡ ಅಧಿಕ. ಅದರಲ್ಲೂ ಸೊಲ್ಲಾಪುರ-ಹಾಸನ-ಸೊಲ್ಲಾಪುರ ಎಕ್ಸ್‌ಪ್ರೆಸ್‌ (ರೈ.ನಂ.11312/11) ರೈಲು ಸೊಲ್ಲಾಪುರದಿಂದ ಪ್ರಾರಂಭವಾದರೂ ಭರ್ತಿಯಾಗುವುದು ಮಾತ್ರ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಪ್ರಯಾಣಿಕರಿಂದಲೆ. ಹೀಗಾಗಿ ಸೊಲ್ಲಾಪುರ-ಹಾಸನ ರೈಲನ್ನು ಹತ್ತು ದಿನಗಳ ಕಾಲ ರದ್ದುಗೊಳಿಸುವ ಬದಲಿಗೆ ಕಲಬುರಗಿಯಿಂದ ವಾಡಿ, ಯಾದಗಿರಿ, ರಾಯಚೂರು ಮೂಲಕ ಓಡಿಸಬೇಕು ಎಂದು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ ಮತ್ತು ಗೌರವ ಕಾರ್ಯದರ್ಶಿ ಶಶಿಕಾಂತ ಒತ್ತಾಯಿಸಿದ್ದಾರೆ.

ರೈಲುಗಳ ಸಂಚಾರ ವ್ಯತ್ಯಯದಿಂದ ದೂರದ ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಲು ಕಲಬುರಗಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದ 20 ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಿತ್ಯ ಓಡಾಡುವ 10 ರೈಲುಗಳು ಹಾಗೂ ವಾರದಲ್ಲಿ ಒಮ್ಮೆ, ಎರಡು ಬಾರಿ ಸಂಚರಿಸುವ 10 ರೈಲುಗಳ ಮಾರ್ಗ ಬದಲಾವಣೆಯಿಂದಲೂ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತಿದೆ. ಹೀಗಾಗಿ ಕಲಬುರಗಿಯಿಂದ ಓಡಾಡುವ
ರೈಲುಗಳನ್ನು ಸ್ಥಗಿತಗೊಳಿಸದೇ ಯಥಾ ಸ್ಥಿತಿಯಲ್ಲಿ ಆರಂಭಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ ಕೂಡ ಆಗಿದೆ.

Advertisement

ರೈಲು ರದ್ದು ಸಂದೇಶ
ಹಳಿ ಕಾಮಗಾರಿಯಿಂದಾಗಿ ರೈಲು ಸಂಚಾರ ರದ್ದುಗೊಳಿಸುವ ಬಗ್ಗೆ ರೈಲ್ವೆ ಇಲಾಖೆ ಆದೇಶದ ಪ್ರಕಟಣೆ ಹೊರಡಿಸಿರುವ ಬೆನ್ನಲ್ಲೇ ಫೆ.17ರ ನಂತರ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ರೈಲು ರದ್ದತಿ ಸಂದೇಶ ರವಾನಿಸಲಾಗುತ್ತಿದೆ. ಫೆ.18ರಂದು ಬೆಂಗಳೂರಿಗೆ ತೆರಳಲು ವಾರದ ಹಿಂದೆಯೇ ಸೊಲ್ಲಾಪುರ-ಹಾಸನ ಎಕ್ಸ್‌ಪ್ರೆಸ್‌ ರೈಲಿಗೆ ಟಿಕೆಟ್‌ ಬುಕ್‌ ಮಾಡಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ರೈಲು ರದ್ದುಗೊಂಡಿರುವ ಸಂದೇಶ ಬಂದಿದ್ದು, ಏನು ಮಾಡಬೇಕು ಎಂಬುದು ತೋಚದಂತಾಗಿದೆ ಎಂದು ರಾಯಚೂರಿನ ರಮೇಶ ಎನ್ನುವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೊಲ್ಲಾಪುರ ಜಿಲ್ಲೆಯ ಬೋರೋಟಿ-ದುದನಿ- ಕುಲಾಲಿ ರೈಲ್ವೆ ನಿಲ್ದಾಣಗಳ ನಡುವೆ ಡಬ್ಲಿಂಗ್‌ ಕಾರ್ಯ ಶುರುವಾಗಲಿದೆ. ಆದ್ದರಿಂದ ಕಲಬುರಗಿ ಮಾರ್ಗವಾಗಿ ಸಂಚರಿಸುವ ರೈಲುಗಳ ಸಂಚಾರ ಸ್ಥಗಿತ ಮತ್ತು ಮಾರ್ಗ ಬದಲಾವಣೆ ಆಗಲಿವೆ. ಕಾಮಗಾರಿ ಮುಗಿದ ನಂತರ ಯಥಾವತ್ತಾಗಿ ರೈಲು ಸಂಚಾರ ಇರುತ್ತದೆ. ಎ.ಎಸ್‌.ಪ್ರಸಾದರಾವ್‌,
ಸ್ವೇಷನ್‌ ಮ್ಯಾನೇಜರ್‌, ಕಲಬುರಗಿ

ರದ್ದಾಗುವ 10 ರೈಲುಗಳು
ಫೆ.17ರಿಂದ ಮಾ.4ರ ವರೆಗೆ ಪ್ಯಾಸೆಂಜರ್‌ ರೈಲುಗಳಾದ ಹೈದ್ರಾಬಾದ-ವಿಜಯಪುರ (ರೈ.ನಂ. 57130), ವಿಜಯಪುರ-ಬೋಲಾರಂ (ಸಿಕಂದ್ರಾಬಾದ್‌-ರೈ.ನಂ. 57129), ಕಲಬುರಗಿ-ಸೊಲ್ಲಾಪುರ (ರೈ.ನಂ.57628) ರದ್ದುಗೊಳಿಸಲಾಗಿದೆ. ಅದೇ ರೀತಿ ಫೆ.17ರಿಂದ ಫೆ.26ರ ವರೆಗೆ ರಾಯಚೂರು-ಸೊಲ್ಲಾಪುರ (ರೈ.ನಂ. 57134), ವಿಜಯಪುರ-ರಾಯಚೂರು (ರೈ.ನಂ.57133), ಸೊಲ್ಲಾಪುರ-ಗುಂತಕಲ್‌ (ರೈ.ನಂ.71301), ಗುಂತಕಲ್‌ -ಕಲಬುರಗಿ (ರೈ.ನಂ.71302), ಕಲಬುರಗಿ-ವಾಡಿ (ರೈ.ನಂ.71305), ವಾಡಿ-ಸೊಲ್ಲಾಪುರ (ರೈ.ಸಂ.71306) ಹಾಗೂ ಸೊಲ್ಲಾಪುರ-ಹಾಸನ-ಸೊಲ್ಲಾಪರ ಎಕ್ಸ್‌ಪ್ರೆಸ್‌ ರೈಲು (ರೈ.ನಂ.11312/11) ಸಂಚಾರ ಸ್ಥಗಿತಗೊಳ್ಳಲಿದೆ. ಮುಂಬೈ-ಕರಕೈಲ್‌-ಮುಂಬೈ ವಾರದ ರೈಲನ್ನು (ರೈ.ಸಂ. 11017/18) ಫೆ.22 ಮತ್ತು 24ರಂದು ಸ್ಥಗಿತಗೊಳಿಸಲಾಗಿದೆ.

ಇಲ್ಲಿಂದ ಆರಂಭಿಸಿ ಆದಾಯ ಗಳಿಸಿ
ಹಳಿ ಡಬ್ಲಿಂಗ್‌ ಕಾಮಗಾರಿ ಕಾರಣ ಸೊಲ್ಲಾಪುರ-ಹಾಸನ ಎಕ್ಸ್‌ಪ್ರೆಸ್‌ ರೈಲನ್ನು ಹತ್ತು ದಿನಗಳ ಕಾಲ ರದ್ದುಗೊಳಿಸಬಾರದು. ಸೊಲ್ಲಾಪುರದಿಂದ  ಗಮಿಸಬೇಕಾದ ರೈಲನ್ನು ಕಾಮಗಾರಿ ದಿನಗಳಲ್ಲಿ ಕಲಬುರಗಿಯಿಂದ ಆರಂಭಿಸಬೇಕು. ಇದರಿಂದ ಹತ್ತು ದಿನಗಳಲ್ಲಿ ಈ ಒಂದು ರೈಲಿನಿಂದ ಸುಮಾರು 40 ಸಾವಿರ ಜನರಿಗೆ ಆಗುವ ತೊಂದರೆ ತಪ್ಪಿಸಬಹುದು. ಅಂದಾಜು 1.5 ಕೋಟಿ ರೂ. ಆದಾಯ ಕೂಡ ರೈಲ್ವೆ ಇಲಾಖೆಗೆ ಬರುತ್ತದೆ. ಈ ಬಗ್ಗೆ ರೈಲ್ವೆ ಸಚಿವರು ಮತ್ತು ಅಧಿಕಾರಿಗಳು ಗಮನಹರಿಸಿ ಕ್ರಮ ವಹಿಸಬೇಕು.
ಸುನೀಲ ಕುಲಕರ್ಣಿ,
ರೈಲ್ವೆ ಹೋರಾಟಗಾರ

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next