ಕಲಬುರಗಿ: ಮಹಾಮಾರಿ ಕೋವಿಡ್ ವಿರುದ್ಧ ಹೋರಾಟದಲ್ಲಿರುವ ಶುಶ್ರೂಷಾಧಿಕಾರಿಗಳು ಸೇರಿದಂತೆ ವೈದ್ಯ ಮತ್ತು ಆರೋಗ್ಯ ಸಿಬ್ಬಂದಿ ನಿಸ್ವಾರ್ಥ ಸೇವೆ ಕಂಡು ದೇಶ ಹೆಮ್ಮೆಪಡುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಶ್ಲಾಘಿ ಸಿದರು.
ನಗರದ ಇಎಸ್‌ಐಸಿ ಆಸ್ಪತ್ರೆಯಲ್ಲಿ ಮಹಾಮಾತೆ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನದ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಶುಶ್ರೂಷಕರ ದಿನಾಚರಣೆಯಲ್ಲಿ ಮಹಾಮಾತೆ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಆರೋಗ್ಯ ಸಿಬ್ಬಂದಿಯಿಂದಲೇ ಮಹಾಮಾರಿ ಕೋವಿಡ್-19 ವಿರುದ್ಧದ ನಮ್ಮ ಹೋರಾಟ ನಿರಂತರ ಸಾಗಿದೆ. ಶುಶ್ರೂಷಾಧಿಕಾರಿಗಳು ನಮ್ಮನ್ನು ಬದುಕಿಸುವವರಾಗಿದ್ದಾರೆ ಎಂಬುದನ್ನು ಯಾರು ಮರೆಯುವಂತಿಲ್ಲ. ಇಂದಿನ ಪರಿಸ್ಥಿತಿ ಅವಲೋಕಿಸಿ ಹೇಳುವುದಾದರೆ ಕೋವಿಡ್ ಸೊಂಕಿನಿಂದ ಗುಣಮುಖರಾಗಿ ರೋಗಿ ಆಸ್ಪತ್ರೆಯಿಂದ ಹೊರಗಡೆ ಹೆಜ್ಜೆ ಇಡುವ ಕ್ಷಣವಿದೆಯಲ್ಲ ಅದುವೇ ಶುಶ್ರೂಷಕರಿಗೆ ಹೆಚ್ಚಿನ ಸಂತಸದ ಕ್ಷಣವಾಗಿದೆ ಎಂದು ನರ್ಸಿಂಗ್ ಸಿಬ್ಬಂದಿ ಸೇವೆ ಕೊಂಡಾಡಿದರು.
ಇಎಸ್‌ಐಸಿ ಮೆಡಿಕಲ್ ಕಾಲೇಜಿನ ಡೀನ್ ಡಾ| ಎ.ಎಲ್. ನಾಗರಾಜು ಮಾತನಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವ ಕಳೆದಕೊಂಡ ವೈದ್ಯ ಸಿಬ್ಬಂದಿ ಸೇವೆ ನೆನೆದರು. ಸಾಂಕ್ರಾಮಿಕ ಸೊಂಕಿನ ನಿಯಂತ್ರಣದಲ್ಲಿ ಜಿಲ್ಲಾಡಳಿತದ ನಿರ್ದೆಶನ ಪಾಲಿಸುತ್ತ ಇಎಸ್‌ಐಸಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ವೈದ್ಯರಿಗೆ ಹೂವಿನ ಸುರಿಮಳೆ: ಇದೇ ಸಂದರ್ಭದಲ್ಲಿ ಕೋವಿಡ್-19 ವಿರುದ್ಧ ಹೋರಾಟದಲ್ಲಿರುವ ಇಎಸ್‌ಐಸಿ ಮೆಡಿಕಲ್ ಕಾಲೇಜಿನ ಡೀನ್ ಡಾ| ಎ.ಎಲ್. ನಾಗರಾಜು, ವೈದ್ಯಕೀಯ ಅಧೀಕ್ಷಕ ಡಾ| ಎಸ್.ಕೆ. ಚೌಧರಿ, ಕೋವಿಡ್-19 ವಾರ್ಡ್‌ನ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಾ| ಲೋಬೊ, ಸಮುದಾಯ ಮೆಡಿಸಿನ್ ವಿಭಾಗದ ಡಾ| ಸ್ವಾತಿ, ಡಿವೈನ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಕಿರಣ, ಡಾ| ಎಲಿಜಾಬೆತ್ ಸೇರಿದಂತೆ ಇಎಸ್‌ಐಸಿ ಆಸ್ಪತ್ರೆ ವಿವಿಧ ವಿಭಾಗದ ವೈದ್ಯರನ್ನು ಡಿಸಿ ಶರತ್ ಬಿ. ಸನ್ಮಾನಿಸಿದರು. ಮೇಲಿಂದ ವಿದ್ಯಾರ್ಥಿಗಳು ವೈದ್ಯರಿಗೆ ಹೂವಿನ ಸುರಿಮಳೆಗೈದರು.
ಕೈಯಲ್ಲಿ ದೀಪ ಹಿಡಿದು ಮಾತೆಗೆ ಗೌರವ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರ್ಸಿಂಗ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಗಳು ಕೈಯಲ್ಲಿ ದೀಪ ಹಿಡಿದುಕೊಂಡು ಮಾತೆಗೆ ಗೌರವ ಸಲ್ಲಿಸಿದರು. ಗಮನ ಸೆಳೆದ ರಂಗೋಲಿ: ವಿಶ್ವ ಶುಶ್ರೂಷಕರ ದಿನದ ಅಂಗವಾಗಿ ಕಾರ್ಯಕ್ರಮ ಸ್ಥಳದಲ್ಲಿ ವಿವಿಧ ಬಣ್ಣಗಳಿಂದ ಬಿಡಿಸಲಾದ ಬೃಹತ್ ಆಕಾರದ ರಂಗೋಲಿ ಸಭಿಕರ ಗಮನ ಸೆಳೆಯಲ್ಲಿ ಯಶಸ್ವಿಯಾಯಿತು.
ಜಿಪಂ ಸಿಇಒ ಡಾ| ಪಿ. ರಾಜಾ, ಪ್ರೊಬೇಷನರ್ ಐಎಎಸ್ ಅಧಿಕಾರಿ ಡಾ| ಗೋಪಾಲಕೃಷ್ಣ ಬಿ., ಇಎಸ್‌ಐಸಿಯ ಡಾ| ಥಾಮಸನ್, ಡಾ| ಸುಧಾಕರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಇದ್ದರು.