ಕಲಬುರಗಿ: ಕಾರ್ಮಿಕ ವರ್ಗದ ಹಕ್ಕುಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮಾನುಷವಾಗಿ ದಾಳಿ ನಡೆಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಕಾರ್ಮಿಕರ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹೋರಾಟಗಳನ್ನು ಬೆಳೆಸಬೇಕಾಗಿದೆ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ (ಎಐಯುಟಿಯುಸಿ) ಸಂಘಟನೆ ರಾಜ್ಯ ಸಮಿತಿ ಸದಸ್ಯ ಎಂ. ಶಶಿಧರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಉದ್ದಗಲಕ್ಕೂ ಕಾರ್ಮಿಕರ ಮೇಲೆ ಶೋಷಣೆ ಮುಂದುವರಿದಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಂಟು ಗಂಟೆ ದುಡಿತದ ಅವಧಿ, ಮುಷ್ಕರದ ಹಕ್ಕು, ಖಾಯಮಾತಿ ಹಕ್ಕು ಸೇರಿದಂತೆ ಮುಂತಾದವುಗಳ ಮೇಲೆ ದಾಳಿ ನಡೆಯುತ್ತಿದೆ. ನ್ಯಾಯಕ್ಕಾಗಿ ಮುಷ್ಕರ ಘೋಷಿಸುವುದೇ ಕಾನೂನುಬಾಹಿರ ಎನ್ನುವ ಮೂಲಕ ಕಾರ್ಮಿಕರ ಧ್ವನಿ ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನಕ್ಕೆ 8 ಗಂಟೆಗೆ ಸೀಮಿತವಾಗಿದ್ದ ಕಾರ್ಮಿಕರ ದುಡಿತದ ಅವಧಿಯನ್ನು 12-14 ಗಂಟೆಗಳಿಗೆ ಏರಿಸಲಾಗಿದೆ. ಗುತ್ತಿಗೆ ಪದ್ಧತಿ ನಿಯಂತ್ರಿಸಿ ಕ್ರಮೇಣ ನಿಷೇಧಿಸುವ ಬದಲಾಗಿ ಅದನ್ನೇ ನಿಯತಗೊಳಿಸಲಾಗಿದೆ. ಸರ್ಕಾರಿ ಇಲಾಖೆಗಳಲ್ಲೂ ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ಯಾವುದೇ ಅಡೆತಡೆ ಇಲ್ಲದೇ ಸಾಗುತ್ತಿದೆ. ಆಶಾ, ಅಂಗನವಾಡಿ, ಬಿಸಿಯೂಟ ಯೋಜನೆಗಳಲ್ಲಿ ದುಡಿಯುವ ಲಕ್ಷಾಂತರ ಸ್ಕೀಂ ವರ್ಕರ್ಗಳಿಗೆ ಕಾರ್ಮಿಕರ ಸ್ಥಾನಮಾನ, ಕನಿಷ್ಠ ವೇತನ, ಇತರ ಸೌಲಭ್ಯಗಳನ್ನು ನೀಡದೆ ಬಿಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕ ದಿನದಂದು ನಾವು ದುಡಿಮೆ ಹಕ್ಕಿಗಾಗಿ, ಕಾರ್ಮಿಕರ ವಿಮೋಚನೆಗಾಗಿ ಪಣ ತೊಡಬೇಕಿದೆ ಎಂದು ಕರೆ ನೀಡಿದರು.
ಎಐಎಂಎಸ್‌ಎಸ್ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಸೀಮಾ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಸಮಿತಿ ಸದಸ್ಯೆ ಶಿವಲಿಂಗಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಯುಟಿಯುಸಿ ತಾಲೂಕು ಅಧ್ಯಕ್ಷ ವಿ.ಜಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ, ಬೋರಮ್ಮ, ರಾಘವೇಂದ್ರ ಎಂ.ಜಿ. ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಾರ್ಮಿಕರು ಭಾಗವಹಿಸಿದ್ದರು.
ಕಾಂಗ್ರೆಸ್ ಮತ್ತು ಬಿಜೆಪಿ ಆರ್ಥಿಕ ನೀತಿಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಕಳೆದ 10 ವರ್ಷದಲ್ಲಿ ದೇಶದ ಕಾರ್ಪೋರೇಟ್ ಮನೆತನಗಳಿಗೆ ಕೇಂದ್ರ ಬ್ಯಾಂಕ್‌ಗಳಲ್ಲಿ ಎನ್‌ಪಿಎ, ಬ್ಯಾಡ್ ಲೋನ್ಸ್ ಹೆಸರಲ್ಲಿ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆದರೆ, 50 ಸಾವಿರ ರೂ. ಸಾಲ ಮಾಡಿದ ರೈತರು, ಅದನ್ನು ತೀರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದರೂ, ಯಾರೂ ತಡೆಯಲು ಮುಂದಾಗುತ್ತಿಲ್ಲ.
•
ಎಂ.ಶಶಿಧರ,
ರಾಜ್ಯ ಸಮಿತಿ ಸದಸ್ಯ, ಎಐಯುಟಿಯುಸಿ