Advertisement

ಇಂದು ಜಿಪಂ ಸಭೆ: ಕೆಡಿಪಿ ಸಭೆ ಯಾವಾಗ?

09:49 AM Jun 15, 2019 | Naveen |

ಹಣಮಂತರಾವ ಭೈರಾಮಡಗಿ
ಕಲಬುರಗಿ:
ಬರೊಬ್ಬರಿ ಆರು ತಿಂಗಳ ನಂತರ ಶನಿವಾರ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆ ನಡೆಯುತ್ತಿದ್ದು, ಈಗಲಾದರೂ ಆಡಳಿತದ ಕಾರ್ಯವೈಖರಿ ಚುರುಕುಗೊಳ್ಳುವುದೇ ಎಂದು ಸಭೆ ನಿರೀಕ್ಷೆ ಹುಟ್ಟಿಸಿದೆ.

Advertisement

ಈ ವರ್ಷದ ಆರಂಭದ ಜನೆವರಿ 19ರಂದು ಸಾಮಾನ್ಯ ಸಭೆ ನಡೆದ ನಂತರ ಈಗ ಜೂನ್‌ 15ರಂದು ಸಭೆ ನಡೆಯುತ್ತಿದೆ. ಸಭೆ ಆರಂಭವಾಗುತ್ತಿದ್ದಂತೆ ಯಾವುದೋ ಒಂದು ವಿಷಯ ಮುಂದಿಟ್ಟುಕೊಂಡು ಅದನ್ನೇ ಜಾಸ್ತಿ ಎಳೆದು ಅರ್ಧ ದಿನ ತೆಗೆದುಕೊಂಡು ಹೋಗುವ ಚಾಳಿಗೆ ಶನಿವಾರ ಸಭೆ ಇತಿಶ್ರೀ ಹಾಡುವುದೇ ಎನ್ನುವುದು ಎಲ್ಲರನ್ನು ಕಾಡುತ್ತಿದೆ. ಸಭೆಯು ಅಜೆಂಡಾ ಪ್ರಕಾರ ನಡೆದರೆ ಚರ್ಚೆಗೆ ಹಾಗೂ ಎಲ್ಲ ಇಲಾಖೆಗಳ ಕುರಿತಾಗಿ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.

ಜಿಲ್ಲಾ ಪಂಚಾಯಿತಿಯ ಪ್ರಸಕ್ತ ಚುನಾಯಿತ ಆಡಳಿತದ ಅವಧಿಯ 15ನೇ ಸಾಮಾನ್ಯ ಸಭೆ ಇದಾಗಿದೆ. ಹಿಂದಿನ ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಣಯಗಳು ಸರ್ಕಾರದ ಮಟ್ಟದಲ್ಲಿ ಹೋಗದೇ ಇಲ್ಲೇ ಉಳಿದಿರುವ ಘಟನೆಗಳು ಕಣ್ಣೆದುರಿಗೆ ಇವೆ. ಇನ್ಮುಂದೆಯಾದರೂ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಕಾರ್ಯರೂಪಕ್ಕೆ ಬರಲಿ ಎನ್ನುವುದೇ ಸರ್ವ ಸದಸ್ಯರ ಅಭಿಪ್ರಾಯವಾಗಿದೆ.

ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಗೆ ಕಾರ್ಮೋಡ: ಜಿಲ್ಲಾ ಉಸ್ತುವಾರಿ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಕೆಡಿಪಿ ಸಭೆ ನಡೆಯಬೇಕು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸಚಿವರಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಒಂದೇ ಕೆಡಿಪಿ ಸಭೆ ನಡೆಸಿದ್ದಾರೆ.

ಎರಡೂವರೆ ತಿಂಗಳು ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಸಭೆ ನಡೆಸಲಿಕ್ಕೆ ಆಗಿರಲಿಲ್ಲ. ಈಗ ನೀತಿ ಸಂಹಿತೆ ಮುಗಿದು ಒಂದು ತಿಂಗಳಾಗುತ್ತಾ ಬರುತ್ತಿದೆ. ಈಗಲಾದರೂ ಸಚಿವರು ಕೆಡಿಪಿ ಸಭೆಗೆ ಮುಂದಾಗಬೇಕೆಂಬುದು ಸಾರ್ವಜನಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ನಂತರವೇ ಹೈ.ಕ ಭಾಗದ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಪರಾಮರ್ಶಿಸಿದ್ದಾರೆ. ಕಳೆದ ವರ್ಷ 2018ರ ಸೆಪ್ಟೆಂಬರ್‌ 12ರಂದು ತ್ತೈಮಾಸಿಕ ಕೆಡಿಪಿ ಸಭೆ ನಡೆಸಿದ ನಂತರ ಮಗದೊಂದು ಅಂದರೆ ಎರಡನೇ ಸಭೆ ನಡೆದಿಲ್ಲ. ಪ್ರಥಮ ಸಭೆಯಲ್ಲೇ ಸಚಿವರು ಅಧಿಕಾರಿಗಳ ಬೆವರು ಇಳಿಸಿದ್ದರಲ್ಲದೇ ಆವಾಜ್‌ ಸಹ ಹಾಕಿದ್ದರು. ಸಚಿವರು ಕೆಡಿಪಿ ಸಭೆ ನಡೆಸದಿದ್ದರೂ ಅಭಿವೃದ್ಧಿ ಕಾರ್ಯಗಳ ಪರಿಶೀಲನಾ ಸಭೆ ಹಾಗೂ ಬೃಹತ್‌ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ್ದರು. ಆದರೆ ಹಲವಾರು ಪ್ರಮುಖ ಸಮಸ್ಯೆಗಳಿಗೆ ಅದರಲ್ಲೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜತೆಗೆ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಶ್ರಮಿಸಲಿಲ್ಲ ಎನ್ನುವ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Advertisement

ಅಲ್ಲದೇ ಜಿಲ್ಲಾಧಿಕಾರಿ ಕಚೇರಿಯಲ್ಲೂ ಸಣ್ಣ-ಸಣ್ಣ ಕೆಲಸದ ಅರ್ಜಿಗಳಿಗೆ ಬಹಳ ದಿನವಾದರೂ ಮುಕ್ತಿ ಸಿಕ್ತಾ ಇಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. ಉದ್ಯೋಗ ಖಾತ್ರಿ ಅನುಷ್ಠಾನ, ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ, ಈಗ ಮಳೆಗಾಲ ಆರಂಭವಾಗುತ್ತಿರುವುರಿಂದ ಬಿತ್ತನೆ ಸಿದ್ಧತೆ ಸೇರಿದಂತೆ ಇತರ ವಿಷಯಗಳ ಕುರಿತಾಗಿ ಚರ್ಚಿಸಿ ಆಡಳಿತಕ್ಕೆ ಚುರುಕು ಮುಟ್ಟಿಸುವುದು ಸಚಿವರ ಕಾರ್ಯವಾಗಿದೆ. ಇದೆಲ್ಲ ಕೆಡಿಪಿ ಸಭೆ ನಡೆದರೆ ಸೂಕ್ತ ವೇದಿಕೆಯಾಗುತ್ತದೆ.

ಈ ವಿಷಯ ಚರ್ಚೆಗೆ ಬರಲಿ
ಕಳೆದ ಜನೆವರಿ 19ರಂದು ನಡೆದ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಾಗಿ ಚರ್ಚೆ ಯಾಗಿ ಲೆಕ್ಕಾಧಿಕಾರಿಯಿಂದ ತನಿಖೆಗೆ ಒಳಪಡಿಸಲಾಗುವುದು ಎಂದು ಸಿಇಒ ಸಭೆಯಲ್ಲಿ ಪ್ರಕಟಿಸಿದ್ದರು. ಈಗ ತನಿಖೆ ಏನಾಗಿದೆ, ಭ್ರಷ್ಟಾಚಾರದಲ್ಲಿ ಯಾರ್ಯಾರು ಬಾಗಿ ಆಗಿದ್ದಾರೆ ಎನ್ನುವುದು ಬಹಿರಂಗಗೊಳ್ಳಬೇಕಾಗಿದೆ. ಈ ಕುರಿತು ಶನಿವಾರದ ಸಭೆಯಲ್ಲಿ ಚರ್ಚೆಗೆ ಬರುವುದು ಅಗತ್ಯವಾಗಿದೆ. ಹೀಗಾದಲ್ಲಿ ಮಾತ್ರ ಸಭೆಗೆ ಒಂದು ಅರ್ಥ ಹಾಗೂ ಮಹತ್ವ ಬಂದಂತಾಗುತ್ತದೆ.

ಸಚಿವರ ಕೆಡಿಪಿ ಸಭೆ ಮುಂದಿರುವ ಸಮಸ್ಯೆಗಳು
ಬಿತ್ತನೆ ಶುರುವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾಗಿ ಬೀಜ, ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಸಚಿವರ ಅಧ್ಯಕ್ಷ ತೆಯ ಕೆಡಿಪಿ ಸಭೆ ಅಗತ್ಯವಾಗಿದೆ. ವಾರದ ಹಿಂದೆ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಮಾರಾಟ ಪ್ರಕರಣ ಕೇಳಿ ಬಂತು. ಈ ಸಂಬಂಧ ಮಾದನಹಿಪ್ಪರಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತೇ ಎಂಬುದಾಗಿ ಕೃಷಿ ಅಧಿಕಾರಿಗಳು ತಿಳಿಸಿದ್ದರು. ಆದರೆ ನಂತರ ಪ್ರಕರಣವೇ ದಾಖಲಾಗಲಿಲ್ಲ. ಇನ್ನುಳಿದಂತೆ ಆಡಳಿತ ವೈಫ‌ಲ್ಯದಿಂದ ಸೂಪರ್‌ಸೀಡ್‌ಗೆ ಬಂದು ನಿಂತಿರುವ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ ಪುನಶ್ಚೇತನಗೊಳಿಸುವ ಹೊಣೆಗಾರಿಕೆಯೂ ಸಚಿವರ ಮೇಲಿದೆ. ಈ ಕುರಿತು ಸಭೆ ನಡೆದು ಪರಿಹಾರ ಕ್ರಮ ಕೈಗೊಳ್ಳುವುದು ಜರೂರಾಗಿದೆ. ಕಲಬುರಗಿ ಮಹಾನಗರದಲ್ಲಿ 10-15 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೆಲವು ಪ್ರದೇಶಗಳಿಗೆ ಎರಡ್ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇದರ ತಾರತಮ್ಯ ನಿವಾರಿಸುವ ಕಾರ್ಯ ಸಚಿವರ ಮುಂದಿದೆ. ಇನ್ನುಳಿದಂತೆ ಹಲವು ಇಲಾಖೆಗಳಲ್ಲಿ ಅಧಿಕಾರಿಗಳ ಹಲವು ಹುದ್ದೆಗಳು ಖಾಲಿ ಬಿದ್ದಿವೆ. ಈಗಂತು ಅಪರ ಜಿಲ್ಲಾಧಿಕಾರಿ ಹುದ್ದೆಯೇ ಖಾಲಿ ಇದೆ. ಎನ್‌ಇಕೆಎಸ್‌ಆರ್‌ಟಿಸಿ ಎಂಡಿ, ಪಶು ಸಂಗೋಪನಾ ಇಲಾಖೆ ನಾಲ್ಕು ಉಪನಿರ್ದೇಶಕರು, ಜಿಲ್ಲಾ ಪಂಚಾಯತ್‌ದಲ್ಲಿ ಉಪಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ರೇಷ್ಮೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಡಿಡಿ, ಯುವಜನ ಸೇವಾ ಇಲಾಖೆಯ ಎಡಿ ಸೇರಿದಂತೆ ಹಲವಾರು ಹುದ್ದೆಗಳು ಖಾಲಿ ಇವೆ. ಇವೆಲ್ಲ ಭರ್ತಿ ಮಾಡುವ ಜವಾಬ್ದಾರಿ ಉಸ್ತುವಾರಿ ಸಚಿವರ ಮೇಲಿದೆ. ಈ ಎಲ್ಲ ಖಾಲಿ ಹುದ್ದೆಗಳು ಅರಿವಿಗೆ ಬರಬೇಕಾದರೆ ಕೆಡಿಪಿ ಸಭೆ ನಡೆದಲ್ಲಿ ಮಾತ್ರ ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next