ಕಲಬುರಗಿ: ಪ್ರಪಂಚಕ್ಕೆ ತತ್ವಜ್ಞಾನ ನೀಡಿದ ಭಾರತಕ್ಕೆ ಬ್ರಿಟಿಷರು ಬಿಟ್ಟು ಹೋದ ಶಿಕ್ಷಣ ಪದ್ಧತಿ ನಮಗೆ ಬೇಕಿಲ್ಲ, ಭಾರತೀಯ ಭವ್ಯ ಸಂಸ್ಕೃತಿ, ಪರಂಪರೆ, ಋಷಿಗಳು, ರಾಜ ಮಹಾರಾಜರ ಇತಿಹಾಸ ತಿಳಿಸಿಕೊಡುವ ಶಿಕ್ಷಣ ಜಾರಿಗೆ ಬರಬೇಕಾಗಿದೆ ಎಂದು ಆರ್‌ಎಸ್‌ಎಸ್‌ದಕ್ಷಿಣ ಪ್ರಾಂತ ರಾಷೀóಯ ಕಾರ್ಯಕಾರಿಣಿ ಸದಸ್ಯ, ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ವೀರಶೈವ ಕಲ್ಯಾಣ ಮಂಟಪದಲ್ಲಿ ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಸಹಮಿಲನ-2019 ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿ ಮಾತೃಭಾಷೆ ಹಾಗೂ ದೇಶ ಭಾಷೆ ಕಡೆಗಣಿಸುವ ಮನೋಭಾವ ಹೆಚ್ಚಾಗಿದೆ. ಇಂತಹ ಗುಲಾಮ ಮನಸ್ಥಿತಿಯಿಂದ ಹೊರ ಬರಬೇಕಿದೆ. ಬ್ರಿಟಿಷರ ಭಾಷೆ ಬಳಕೆಯಿಂದ ಕನ್ನಡ ಭಾಷೆ ಮರೆಯುವಂತಾಗಿರುವುದು ಸರಿಯಲ್ಲ ಎಂದರು.
ನಮ್ಮ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಕುರಿತು ತಿಳಿ ಹೇಳುವ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ತಾಯಂದಿರು, ಶಿಕ್ಷಕರು ಮಾಡಬೇಕಿದೆ ಎಂದು ಕರೆ ನೀಡಿದರು.
ಅಮೆರಿಕಾ ಅತೀ ಹೊಟ್ಟೆಕಿಚ್ಚಿನ ದೇಶ. ಆ ದೇಶ ನೆಲದಲ್ಲೇ ನಿಂತು ಪ್ರಧಾನಿ ಮೋದಿ ಹಿಂದಿಭಾಷೆಯಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಎದುರು ಭಾರತೀಯರ ಸ್ವಾಭಿಮಾನ ಎತ್ತಿ ಹಿಡಿದಿದ್ದನ್ನು ಮಾದರಿಯಾಗಿ ಸ್ವೀಕರಿಸಬೇಕು. ಅಲ್ಲದೇ, ಅಮೆರಿಕಾದಲ್ಲಿ ನಡೆಯುವ ಅತಿ ಕಷ್ಟದ ‘ಸ್ಪೆಲ್ ಬಿ’ ಸ್ಪರ್ಧೆಯಲ್ಲಿ ದಶಕಗಳಿಂದಲೂ ಭಾರತೀಯ ನೆಲದ, ಅದರಲ್ಲೂ ಕರ್ನಾಟಕ ಮತ್ತು ಆಂಧ್ರದ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯುತ್ತಿದ್ದಾರೆ. ಇದರರ್ಥ, ಈ ನಮ್ಮ ದೇಶದ ಮಣ್ಣಿನಲ್ಲೇ ಪ್ರತಿಭೆ ಅಡಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮದರಾಸಾಗಳಿಗೆ ಸರ್ಕಾರಗಳು ಪ್ರೋತ್ಸಾಹ ನೀಡುವ ಬದಲು, ಭಾರತೀಯ ಶಿಕ್ಷಣ ನೀಡುವ ಮೂಲಕ ಸತ್‌ಪ್ರಜೆಗಳನ್ನು ಸಿದ್ಧಪಡಿಸುವ ವಿದ್ಯಾಭಾರತಿಯಂತಹ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹಿಸಬೇಕು ಎಂದರು.
ಸಂಸದ ಡಾ| ಉಮೇಶ ಜಾಧವ ಮಾತನಾಡಿ, ಕೇಂದ್ರ ಸರ್ಕಾರದಿಂದ ಹೊಸ ಶಿಕ್ಷಣ ನೀತಿ ಮಂಡನೆಯಾಗುತ್ತಿದೆ. ಇದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿದೆ ಎಂದರು. ಭಾರತ ಈಗ ಬದಲಾಗುತ್ತಿದೆ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ, ಶಿವಯ್ಯ ಮಠಪತಿ, ಶಂಭುಲಿಂಗ ಮದ್ನಿ ಹಾಗೂ ವಿದ್ಯಾಭಾರತೀಯ ಸಂಸ್ಥೆ ಶಿಕ್ಷಕರು ಪಾಲ್ಗೊಂಡಿದ್ದರು.