ಕಲಬುರಗಿ: ದ್ವಿಚಕ್ರವಾಹನ ಸವಾರುದಾರರಿಗೆ ಹೆಲ್ಮೆಟ್ ಇರದ್ದರೆ ಇನ್ಮುಂದೆ ಪೆಟ್ರೋಲ್ ಸಿಗೋದಿಲ್ಲ. ಹೆಲ್ಮೆಟ್ ಇದ್ದರೆ ಮಾತ್ರ ಪೆಟ್ರೋಲ್ ಹಾಕುವ ವ್ಯವಸ್ಥೆ ವಾರದ ನಂತರ ಜಾರಿಗೆ ಬರಲಿದೆ. ಸಂಚಾರಿ ಜಾಗೃತಿ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಪರಿಣಾಮಕಾರಿಯಾಗಿ ಸಂಚಾರಿ ನಿಯಮ ಪಾಲನೆ ಆಗದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತಾಲಯ ಹೊಸ ನಿಯಮಾವಳಿಗೆ ಮುಂದಾಗಿದೆ.
ದಿನೇ-ದಿನೇ ಹೆಚ್ಚಳವಾಗುತ್ತಿರುವ ನಗರ ಸಂಚಾರದ ವ್ಯವಸ್ಥೆ ಸುಧಾರಣೆ ತರುವ ನಿಟ್ಟಿನಲ್ಲಿ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಶನಿವಾರ ತಮ್ಮ ಕಚೇರಿಯಲ್ಲಿ ಪೆಟ್ರೋಲ್ ಪಂಪ್ ಮಾಲೀಕರ ಸಭೆ ಕರೆದು ಸಂಚಾರ ಸುಧಾರಣೆ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದರು.
ವಾರದ ನಂತರ ಹೆಲ್ಮೆಟ್ ಧರಿಸಿದವರಿಗೆ ಮಾತ್ರ ಪೆಟ್ರೋಲ್ ಹಾಕುವ ನಿಯಮ ಕಾರ್ಯರೂಪಕ್ಕೆ ತನ್ನಿ. ಪಂಪ್‌ಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸುವಂತೆ ಹಾಗೂ ಕ್ಯಾನ್ ತೆಗೆದುಕೊಂಡು ಬಂದವರಿಗೆ ಪೆಟ್ರೋಲ್ ನೀಡದಿರುವ ಕುರಿತಾಗಿ ಆಯುಕ್ತರು ಸ್ಪಷ್ಟ ನಿರ್ದೇಶನ ನೀಡಿದರು.
ಆಯುಕ್ತರ ನಿರ್ದೇಶನಕ್ಕೆ ಒಪ್ಪಿಗೆ ನೀಡಿದ ಪೆಟ್ರೋಲ್ ಮಾಲೀಕರು, ಸಂಚಾರ ಸುಧಾರಣೆ ನಿಟ್ಟಿನಲ್ಲಿ ಕೈ ಜೋಡಿಸಲಾಗುವುದು. ಸಾರ್ವಜನಿಕರಿಂದ ಕೆಲವೊಮ್ಮೆ ಆಕ್ಷೇಪಣೆ ಬಂದಲ್ಲಿ ತಮ್ಮ ನೆರವಿಗೆ ಬರಬೇಕೆಂದು ಮಾಲೀಕರು ಕೋರಿದರು.
ಕಾಲಾವಕಾಶ: ಪೆಟ್ರೋಲ್ ಮಾಲೀಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರು, ಹೆಲ್ಮೆಟ್ ಧರಿಸಿದಿವರಿಗೆ ಮಾತ್ರ ಪೆಟ್ರೋಲ್ ಎನ್ನುವ ನಿಯಮ ಕಾರ್ಯಾನುಷ್ಠಾನಕ್ಕೆ ತರಲು ಮುಂದಾಗಲಾಗಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್ ಪಂಪ್ ಮಾಲೀಕರ ಸಭೆ ಕರೆದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಪೆಟ್ರೋಲ್ ಬಂಕ್‌ಗಳಲ್ಲಿ ಹೆಲ್ಮೇಟ್ ಧರಿಸಿದವರಿಗೆ ಮಾತ್ರ ಪೆಟ್ರೋಲ್ ಎಂಬ ನಾಮಫಲಕ ಅಳವಡಿಸಿಕೊಳ್ಳಲಾಗುತ್ತಿದೆ. ಸಂಚಾರಿ ನಿಯಮಗಳ ಕುರಿತಾಗಿ ಜಾಗೃತಿ ಮೂಡಿಸಲಾಗುವುದು. ಒಟ್ಟಾರೆ ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾದರೆ ಎಲ್ಲ ನಿಯಮಗಳು ಸರಳವಾಗಿ ಕಾರ್ಯರೂಪಕ್ಕೆ ಬರುತ್ತವೆ ಎಂದರು. ಟ್ರಾಫಿಕ್ ಎಸಿಪಿ ಗಿರೀಶ ಕರಡಿಗುಡ್ಡ ಹಾಜರಿದ್ದರು.