Advertisement

ಅಪಮೌಲ್ಯಗಳೇ ಮೌಲ್ಯಗಳಾಗಿ ಮಾರ್ಪಾಡು

11:47 AM Dec 07, 2019 | Naveen |

ಕಲಬುರಗಿ: ಅಪಮೌಲ್ಯಗಳೇ ಮೌಲ್ಯಗಳಾಗಿ ಮಾರ್ಪಾಡಾಗಿ ಸಮಾಜದ ಎಲ್ಲ ವ್ಯವಸ್ಥೆಗಳಲ್ಲಿ ವಿಜೃಂಭಿಸುತ್ತಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಕಳವಳ ವ್ಯಕ್ತಪಡಿಸಿದರು. ನಗರ ಹೊರ ವಲಯ ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್‌ ಶಾಲೆಯಲ್ಲಿ ಮೂರು ಕೋಣೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

Advertisement

ಶೀಲ ಇಲ್ಲದ ಶಿಕ್ಷಣ, ನೀತಿ ಇಲ್ಲದ ರಾಜಕಾರಣವನ್ನು ನಾವಿಂದು ನೋಡುತ್ತಿದ್ದೇವೆ. ಆಡಳಿತ ವರ್ಗವಲ್ಲದೇ ಇತರ ಎಲ್ಲ ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರ ಧೋರಣೆಗಳೇ ವಿಜೃಂಭಿಸುತ್ತಿವೆ ಎಂದು ವಿಷಾದಿಸಿದರು.

ಪಾಠ ಮಾಡದೇ ಸಂಬಳ ಪಡೆಯುವ, ಮೋಸ ಮಾಡಿ ಹಣ ಗಳಿಸುವ ವ್ಯಾಪಾರಿಗಳು, ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ರಾಜಕಾರಣಿಗಳಿಂದ ಅಪಮೌಲ್ಯಗಳೇ ರಾರಾಜಿಸುತ್ತಿವೆ. ಇವುಗಳನ್ನು ನಿರ್ನಾಮಗೊಳಿಸುವ ಶಕ್ತಿ ವಿದ್ಯಾರ್ಥಿಗಳು ಹಾಗೂ ಯುವಕರ ಕೈಯಲ್ಲಿದೆ ಎಂದರು.

ತಮ್ಮ ಆಸ್ತಿ ಶಾಲೆಗೆ ಮೀಸಲಿಟ್ಟು ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಶ್ರೀರಾಮ ಕನ್ನಡ ಕಾನ್ವೆಂಟ್‌ ಶಾಲೆ ಸಂಸ್ಥಾಪಕ ಅಧ್ಯಕ್ಷ ಗೌಡೇಶ ಎಚ್‌. ಬಿರಾದಾರ ಅವರ ಶೈಕ್ಷಣಿಕ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಇದೇ ಕಾರಣಕ್ಕೆ ತಾವು ತಮ್ಮ ತಂದೆ-ತಾಯಿ ಹಾಗೂ ತಾತನ ಹೆಸರಲ್ಲಿ ಕೋಣೆಯೊಂದರ ನಿರ್ಮಾಣಕ್ಕೆ ಸಹಾಯ ಮಾಡಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್‌ ಠಾಕೂರ, ಹಿರಿಯ ಪತ್ರಕರ್ತ ಹಣಮಂತರಾವ ಭೈರಾಮಡಗಿ ಮಾತನಾಡಿ, ದಶಕದ ಹಿಂದೆ ದಾಲ್‌ಮಿಲ್‌ನಲ್ಲಿ ಕೆಲಸ ಮಾಡುವ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗೌಡೇಶ ಅವರು ಶ್ರೀರಾಮ ಕನ್ನಡ ಕಾನ್ವೆಂಟ್‌ ಶಾಲೆಯೊಂದು ತೆರೆದಿದ್ದರು.

Advertisement

ಈಗ ಈ ಶಾಲೆಯ ವಿದ್ಯಾರ್ಥಿಗಳ ಬುದ್ಧಿವಂತಿಕೆ ದೇಶವೇ ಗುರುತಿಸುವಂತೆ ಆಗಿರುವುದು ಹೆಮ್ಮೆಯ ವಿಷಯ ಎಂದರು. ಮಕ್ತಂಪುರ ಗುರುಬಸವ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಮೌಲ್ಯಯುತ ಶಿಕ್ಷಣ ಕಲಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಯುವ ಮುಖಂಡ ಗೋರಖನಾಥ ಶಾಖಾಪುರ, ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್‌, ಉದ್ಯಮಿ ಬಸವರಾಜ ಮಾಲಿಪಾಟೀಲ, ದಂತ ವೈದ್ಯರಾದ ಸುಧಾ ಹಾಲಕಾಯಿ, ತಾ.ಪಂ ಮಾಜಿ ಅಧ್ಯಕ್ಷ ವಿಜಯಕುಮಾರ ಬಿರಾದಾರ, ಶಾಲೆ ಅಧ್ಯಕ್ಷ ಗೌಡೇಶ ಬಿರಾದಾರ, ರಾಜು ಹೆಬ್ಟಾಳ, ನೀಲಾಂಬಿಕಾ, ಪಾಲಕರು, ಶಿಕ್ಷಕ ವರ್ಗದವರು ಹಾಜರಿದ್ದರು. ಲಿಂಗಪ್ಪ ಹೋತಪೆಟೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಉದ್ದಿಮೆದಾರ ಗೋಪಾಲ ಪಾಲಾದಿ ಪ್ರಾಸ್ತಾವಿಕ ಮಾತನಾಡಿದರು. ಶಾಲೆ ಮುಖ್ಯ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿದರು, ಶಿಕ್ಷಕಿ ಮಧುರಾಣಿ ನಿರೂಪಿಸಿದರು, ನ್ಯಾಯವಾದಿ ಹಣಮಂತರಾಯ ಅಟ್ಟೂರ ತತ್ವಪದ ಹಾಡಿ, ವಂದಿಸಿದರು. ಇದಕ್ಕೂ ಮುನ್ನ ಶಾಲಾ ಕೋಣೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next