Advertisement

ಆಕ್ಷೇಪಾರ್ಹ ದೃಶ್ಯ ಪ್ರಸಾರವಾದ್ರೆ ದೂರು ನೀಡಿ

12:43 PM Dec 06, 2019 | Naveen |

ಕಲಬುರಗಿ: ಕೇಬಲ್‌, ಸೆಟಲೈಟ್‌ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್‌ ನ್ಯೂಸ್‌ ಮತ್ತು ಮನರಂಜನೆ ಟಿವಿ ಚಾನೆಲ್‌ಗ‌ಳಲ್ಲಿ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ ಹಾಗೂ ಕೇಬಲ್‌ ಆಪರೇಟರ್‌ ಗಳು ಗ್ರಾಹಕರಿಂದ ಹೆಚ್ಚು ಶುಲ್ಕ ಪಡೆದಲ್ಲಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಶರತ್‌. ಬಿ ತಿಳಿಸಿದರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕರೆದಿದ್ದ ಟೆಲಿವಿಷನ್‌ ನೆಟ್‌ವರ್ಕ್‌ (ರೆಗ್ಯುಲೇಷನ್‌) ಅಧಿನಿಯಮ-1995 ಮತ್ತು ನಿಯಮಗಳ ಜಾರಿಯ ಮೇಲ್ವಿಚಾರಣೆಗೆ ರಚಿಸಲಾಗಿರುವ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಮಟ್ಟದ ನಿರ್ವಹಣಾ ಸಮಿತಿಗಳು ಇನ್ನು ಮುಂದೆ ಜಿಲ್ಲಾಮಟ್ಟದಲ್ಲಿ ದೂರುಗಳನ್ನು ದಾಖಲಿಸಲು ಅನುವಾಗುವಂತೆ ದೂರು ಕೋಶಗಳಾಗಿ ಕಾರ್ಯನಿರ್ವಹಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ಗ್ರಾಹಕರಿಂದ ದೂರು ಪಡೆಯಲು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್‌ ಆಯುಕ್ತಾಲಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ್‌ ಕಚೇರಿಗಳಲ್ಲಿ ಸಂಬಂ ಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ದೂರು ಪೆಟ್ಟಿಗೆ ಸ್ಥಾಪಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯ ಇಮೇಲ್‌ ವಿಳಾಸ: dcoglb@gmail.com ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಇಮೇಲ್‌ ವಿಳಾಸ: : varthabhavangulbarga2008@gmail.com, ಜೊತೆಗೆ ದೂರು ಪೆಟ್ಟಿಗೆ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಖುದ್ದಾಗಿ ಬಂದು ದೂರು ದಾಖಲಿಸಬಹುದಾಗಿದೆ ಎಂದು ಹೇಳಿದರು.

ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ (ರೆಗ್ಯುಲೇಷನ್‌) ಅಧಿನಿಯಮ-1995ರ ವ್ಯಾಪ್ತಿಗೊಳಪಡುವ ಕಾರ್ಯಕ್ರಮ ಸಂಕೇತ ಹಾಗೂ ಜಾಹೀರಾತು ಸಂಕೇತದ ಉಲ್ಲಂಘನಾ ಪ್ರಕರಣಗಳು, ಆಕ್ಷೇಪಾರ್ಹ ಅಂಶಗಳು, ಕೇಬಲ್‌ ಟಿ.ವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವೀಕ್ಷಿಸಲು ಮತ್ತು ಕೇಳಲು ಸಂಕೇತಾಕ್ಷರಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ದೂರು ಸಲ್ಲಿಸಬೇಕು ಎಂದು ಮನವಿ ಮಾಡಿದರು.

Advertisement

ಹೆಚ್ಚು ಶುಲ್ಕ ಕೇಳಿದರೆ ದೂರು ನೀಡಿ: ಜಿಲ್ಲೆಯ ಕೇಬಲ್‌ ಆಪರೇಟರ್‌ಗಳು ಟ್ರಾಯ್‌ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಕೇಬಲ್‌ ಶುಲ್ಕ ವಿ ಧಿಸಿದಲ್ಲಿ ಗ್ರಾಹಕರು ದೂರು ಪೆಟ್ಟಿಗೆಯಲ್ಲಿ ದೂರು ದಾಖಲಿಸಬಹುದು. ಇಲ್ಲವೇ ಖುದ್ದಾಗಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸಬಹುದು ಎಂದು ಹೇಳಿದರು.

ಅಂಚೆ ಇಲಾಖೆಯಿಂದ ಜಿಲ್ಲೆಯ ಕೇಬಲ್‌ ಆಪರೇಟರ್‌ಗಳ ಪಟ್ಟಿ ಪಡೆಯಬೇಕು. ನಂತರ ಗ್ರಾಹಕರಿಗೆ ಯೋಜನೆಗೆ ಅನುಗುಣವಾಗಿ ಆಪರೇಟರ್‌ ಗಳು ವಿಧಿಸುತ್ತಿರುವ ಶುಲ್ಕದ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಸಿ, ಆ ಅವಧಿಯಲ್ಲಿ ಸ್ವೀಕರಿಸಿದ ದೂರುಗಳನ್ನು ಸಮಿತಿ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಹಿಂದಿನ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕ್ರಮ ಕೈಗೊಂಡು, ಅನುಪಾಲನಾ ವರದಿಯನ್ನು ಸಂಬಂಧಪಟ್ಟ ಇಲಾಖೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು, ಸಮಿತಿ ಸದಸ್ಯ ಕಾರ್ಯದರ್ಶಿಯಾದ ಜಿ.ಬಿ. ಸಿದ್ದೇಶ್ವರಪ್ಪ ಅವರು ಸಭೆಗೆ ಆಗಮಿಸಿದ ಸರ್ವರನ್ನು ಸ್ವಾಗತಿಸಿ, ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಮಂಡಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಪ್ರಸನ್ನ ದೇಸಾಯಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ| ಚಂದ್ರಕಾಂತ ಯಾತನೂರ, ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ| ಖಂಡೇರಾವ್‌, ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ| ಶಾಂತಾ ಅಸ್ಟಿಗೆ, ಅವ್ವಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಾನಂದ ಅಣಜಗಿ, ಜಿಮ್ಸ್‌, ಮನಃಶಾಸ್ತ್ರಜ್ಞೆ ಡಾ| ರೇಣುಕಾ ಬಗಾಲೆ, ವಿಶ್ವ ಭಾರತಿ ಸೇವಾ ಸಂಸ್ಥೆ ಅಧ್ಯಕ್ಷೆ ಡಾ| ಶಾರದಾ ಯಾಕಾಪುರ ಹಾಜರಿದ್ದು, ತಮ್ಮ ಸಲಹೆ-ಅಭಿಪ್ರಾಯ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next