ಕಲಬುರಗಿ: ಮಹಾಮಾರಿ ಕೋವಿಡ್ ಸೋಂಕು ಕಳೆದ ಎರಡು ದಿನಗಳಿಂದ ಪತ್ತೆಯಾದೆ ನಿರಾಳತೆ ಮೂಡಿಸಿದೆ. ಅಲ್ಲದೇ, ಮತ್ತೊಬ್ಬ ಸೋಂಕಿತರು ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಏಳು ಜನ ರೋಗಿಗಳು ಕೋವಿಡ್ ಮುಕ್ತರಾದಂತೆ ಆಗಿದೆ.
ಜಿಲ್ಲೆಯಲ್ಲಿ ಮಾ.10ರಿಂದ ಕೋವಿಡ್ ಆತಂಕ ಸೃಷ್ಟಿಸಿದೆ. ಏ.22ರಂದು ಒಂದೇ ದಿನ ಐವರಿಗೆ ಸೋಂಕು ಕಾಣಿಸಿಕೊಂಡು ಭೀತಿ ಹೆಚ್ಚಿಸಿತ್ತು. 23ರಂದು ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಏ.24 ಮತ್ತು 25ರಂದು ಯಾವುದೇ ಹೊಸ ಪ್ರಕರಣಗಳು ದೃಢಪಟ್ಟಿಲ್ಲ. ಮೇಲಾಗಿ ಎರಡು ದಿನಗಳಲ್ಲಿ ಸೋಂಕಿನಿಂದ ಬಳಲುತ್ತಿದ್ದ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದ್ದರಿಂದ ಜನರು ಕೊಂಚ ಭಯದ ವಾತಾವರಣದಿಂದ ಹೊರ ಬರುವಂತೆ ಆಗಿದೆ.
809 ವರದಿ ಬಾಕಿ: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಇದುವರೆಗೆ ಒಟ್ಟು 3,113 ಮಂದಿಯ ಗಂಟಲು ದ್ರಾವಣ ಮಾದರಿಯನ್ನು ಸಂಗ್ರಹಿಸಲಾಗಿದೆ. 2268 ಜನರಿಗೆ ಕೋವಿಡ್ ಸೋಂಕಿಲ್ಲ ಎಂದು ಪ್ರಯೋಗಾಲಯದ ವರದಿ ಬಂದಿದೆ. 36 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೂ 806 ಜನರ ವರದಿ ಬರಬೇಕಿದೆ.
36 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಏಳು ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. 26 ಮಂದಿ ಸೋಂಕಿತರು ಸೇರಿ 264 ಶಂಕಿತರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಐಸೋಲೇಷನ್ ವಾರ್ಡ್‌ಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕೋವಿಡ್ ಸೋಂಕಿತರ ನೇರ ಸಂಕರ್ಪಕ್ಕೆ ಬಂದಿರುವ 662 ಮಂದಿಯನ್ನು ಗುರುತಿಸಲಾಗಿದೆ. ದ್ವಿತೀಯ ಸಂಪರ್ಕಕ್ಕೆ ಬಂದ 2,373 ಜನರನ್ನು ಪತ್ತೆ ಹಚ್ಚಲಾಗಿದೆ. ವಿದೇಶದಿಂದ 488 ಜನ ಮರಳಿ ಜಿಲ್ಲೆಗೆ ಬಂದಿದ್ದಾರೆ. 1985 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲಾದ್ಯಂತ 19 ಪ್ರದೇಶಗಳನ್ನು ನಿರ್ಬಂಧಿತ ವಲಯಗಳನ್ನು ಘೋಷಿಸಲಾಗಿದೆ. 41,024 ಮನೆಗಳನ್ನು ಸರ್ವೇ ಮಾಡಲಾಗಿದೆ ಎಂದು ವಿವರಿಸಿದ್ದಾರೆ.