ಕಲಬುರಗಿ: ಜಿಲ್ಲಾದ್ಯಂತ 2011-12ನೇ ಸಾಲಿನಿಂದ ಇದುವರೆಗೆ 7,740 ಎಚ್ ಐವಿ ಸೋಂಕಿತರು ಇದ್ದು, 1,221 ಜನರು ಮರಣ ಹೊಂದಿದ್ದಾರೆ ಎಂದು ರಾಜ್ಯ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಜಂಟಿ ನಿರ್ದೇಶಕ ಡಾ| ಸಂಜಯ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ಕೊಪ್ಪಳ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಏಡ್ಸ್ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಅನಕ್ಷರತೆ, ಮಾಹಿತಿ ಕೊರತೆ ಕಾರಣವಾಗಿದ್ದು, ಅಸುರಕ್ಷಿತ ಲೈಂಗಿಕ ಮತ್ತು ರಕ್ತದಾನದಿಂದ ಸೋಂಕು ಹರಡುತ್ತದೆ ಎಂದರು.
ಹೆಚ್‌ಐವಿಗೆ ಯಾವುದೇ ಲಸಿಕೆ ಇಲ್ಲ. ಆ ಕುರಿತ ಮಾಹಿತಿ, ಶಿಕ್ಷಣ ಮತ್ತು ಸಂವಹನಗಳೇ ಸಾಮಾಜಿಕ ಲಸಿಕೆಗಳು. ಆ ಮೂಲಕ ಜಾಗೃತಿ ಮೂಡಿಸುವ ಮೂಲಕ ಸೋಂಕಿನ ತಡೆಗೆ ಯತ್ನಿಸಬೇಕಿದೆ. ಏಡ್ಸ್ ನಿಯಂತ್ರಣ ಕುರಿತು ಕಲಬುರಗಿ ಸೇರಿದಂತೆ ಎಲ್ಲ ಏಳು ಜಿಲ್ಲೆಗಳಲ್ಲಿ ಅ.19 ಮತ್ತು 20ರಂದು ಎರಡು ದಿನಗಳ ಕಾಲ ಮನೆ-ಮನೆ ಜನ ಜಾಗೃತಿ ಅಭಿಯಾನ ನಡೆಯಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಎಂ.ಕೆ. ಪಾಟೀಲ ಮಾತನಾಡಿ, ಏಡ್ಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಈಗಾಗಲೇ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಏಳು ತಾಲೂಕುಗಳ ಒಟ್ಟು 3,90,132 ಮನೆಗಳಿಗೆ ಏಡ್ಸ್ ನಿಯಂತ್ರಣ ಕುರಿತು ಮಾಹಿತಿ ರವಾನಿಸಲಾಗುವುದು ಎಂದರು.
ಎರಡೂ ದಿನಗಳ ಕಾಲ 1,802 ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸುವರು. ತಲಾ ಇಬ್ಬರು ಆಶಾ ಕಾರ್ಯಕರ್ತೆಯರಂತೆ ಒಟ್ಟು 901 ತಂಡಗಳನ್ನು ರಚಿಸಲಾಗಿದೆ. ಅಲ್ಲದೇ, ಎನ್‌ಜಿಒಗಳ ಮೂಲಕ ಏಡ್ಸ್ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಅಭಿಯಾನದ ಮೂಲಕ ಸೋಂಕಿತರ ಕುರಿತು ಇರುವ ಕಳಂಕ ಮತ್ತು ತಾರತಮ್ಯತೆ ಹೋಗಲಾಡಿಸುವುದು. ಗರ್ಭಿಣಿಯರು ತಮ್ಮ ಮೊದಲನೇ ತ್ರೈ ಮಾಸಿಕದಲ್ಲಿ ಹೆಚ್ ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಕಂಡುಬಂದಲ್ಲಿ ಏಆರ್‌ಟಿ ಚಿಕಿತ್ಸೆಯೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೇರಪಿಸಲಾಗುವುದು ಎಂದು ಹೇಳಿದರು. ಡಾ| ನಂಜೇಗೌಡ, ಡಾ| ಸೋಮಶೆಖರ, ಡಾ| ವಿವೇಕಾನಂದ ಮತ್ತಿತರರು ಇದ್ದರು.