Advertisement

ಭಯದಲ್ಲಿ ಹೋಗಿ ನಗುತ್ತ ಬಂದರು!

11:52 AM Jun 26, 2020 | Naveen |

ಕಲಬುರಗಿ: ರಾಜ್ಯಾದ್ಯಂತ ಗುರುವಾರದಿಂದ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜಿಲ್ಲೆಯಲ್ಲಿ ಬಹುತೇಕ ಸುಸೂತ್ರವಾಗಿ ನಡೆದವು. ಕೋವಿಡ್ ಹಾವಳಿಯಿಂದ ಪರೀಕ್ಷಾ ಕೇಂದ್ರದತ್ತ ಭಯದಲ್ಲೇ ಹಜ್ಜೆ ಹಾಕಿದ್ದ ಸಾವಿರಾರು ಮಕ್ಕಳು, ಹೊರಗಡೆ ನಗುಮೊಗದಲ್ಲಿ ಬಂದರು. ಮಕ್ಕಳ ಆಗಮನ ಕಂಡ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Advertisement

ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಬಿಡುವ ಮುನ್ನ ಸಾಕಷ್ಟು ಭಯವಾಗಿತ್ತು. ಅವನ ಒಳಗೆ ಹೋದ ಮೇಲೂ ಆತಂಕ ದೂರವಾಗಲಿಲ್ಲ. ಮನೆಗೆ ಹೋಗಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ಪರೀಕ್ಷೆ ಆರಂಭದಿಂದಲೂ ಕುಳಿತಿದ್ದೇನೆ. ಅವನೇ ನೋಡಿ ನನ್ನ ಮಗ. ಈಗ ಭಯ ಹೋಗಿ, ಧೈರ್ಯ ಬಂತು ಎಂದು ಸಮಾಧಾನಪಟ್ಟರು. ನಗರದ ನೂತನ ವಿದ್ಯಾಲಯದ ಪರೀಕ್ಷಾ ಕೇಂದ್ರದ ಎದುರು ನಿಂತಿದ್ದ ಓರ್ವ ವಿದ್ಯಾರ್ಥಿಯ ತಾಯಿ ಜ್ಯೋತಿ ಬಿರಾದಾರ.

ಕೋವಿಡ್ ಆತಂಕದಿಂದ ಪರೀಕ್ಷೆ ಬರುವ ಮೊದಲೆ ಮಗಳಿಗೆ ಮನೆಯಲ್ಲಿ ಧೈರ್ಯ ತುಂಬಿದ್ದೆ. ಮನೆಯಿಂದ ಬರಬೇಕಾದರೆ ಮಾಸ್ಕ್, ಸ್ಯಾನಿಟೈಸರ್‌ ಕೊಟ್ಟು ಪರೀಕ್ಷೆ ಕೇಂದ್ರದೊಳಗೆ ಕಳುಹಿಸಿದ್ದೆ. ಪರೀಕ್ಷಾ ಕೇಂದ್ರದಲ್ಲಿ ಹೇಗಿರುತ್ತದೋ ಹೇಗೆ ಎನ್ನುವ ಚಿಂತೆ ಮಾತ್ರ ಇಲ್ಲ. ಪರೀಕ್ಷೆ ಬರೆದು ಮಗಳು ಸುರಕ್ಷಿತವಾಗಿ ಬಂದಿದ್ದಾಳೆ ಎಂದು ಬಸ್‌ ನಿಲ್ದಾಣದ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರದ ಎದುರು ಮಗಳೊಂದಿಗೆ ನಿಂತಿದ್ದ ಚಂದ್ರಕಲಾ ಹೇಳಿದರು.

ಪರೀಕ್ಷೆಗೆ ಬರುವ ಮುನ್ನ ಸಾಕಷ್ಟು ಆತಂಕ, ಚಿಂತೆ ಇತ್ತು ನಿಜ. ಆದರೆ, ಕೇಂದ್ರದೊಳಗೆ ಹೋದ ಮೇಲೆ ಧೈರ್ಯ ಬಂತು. ಸ್ಯಾನಿಟೈಸರ್‌, ಮಾಸ್ಕ್, ಸಾಮಾಜಿಕ ಅಂತರ ಹೀಗೆ ಹಲವು ಸವಲತ್ತುಗಳನ್ನು ಮಾಡಿದ್ದರು. ನಿರಾಂತಕವಾಗಿ ಬರೆದು ಬಂದೆವು. ಉಳಿದ ವಿಷಯಗಳ ಪರೀಕ್ಷೆಯನ್ನು ಆರಾಮವಾಗಿ ಬರೆಯಬಹುದು ಎಂದು ನಗುಮೊಗದಿಂದ ಹೇಳಿದರು ವಿದ್ಯಾರ್ಥಿಗಳಾದ ಶ್ವೇತಾ, ಮೇಘಾ, ಪವಿತ್ರಾ.

ದೇವರ ಮೊರೆ: ಪರೀಕ್ಷೆ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಹಾಗೂ ಪಾಲಕರು ದೇವಸ್ಥಾನಗಳಿಗೆ ತೆರಳಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಪ್ರಾರ್ಥಿಸುವುದು ಸಾಮಾನ್ಯವಾಗಿತ್ತು. ಶರಣಬಸವೇಶ್ವರ ಮಂದಿರ, ರಾಯರ ಮಠಗಳು, ಹನುಮಾನ ಮಂದಿರ ಸೇರಿ ವಿವಿಧ ದೇವಸ್ಥಾನಗಳಿಗೆ ಬೆಳಗ್ಗೆಯಿಂದಲೇ ತೆರಳಿ ದೇವರ ದರ್ಶನ ಪಡೆದರು.

Advertisement

ನಕಲು ಹಾವಳಿ: ಸಾಕಷ್ಟು ಶ್ರಮ ವಹಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುತ್ತಿದ್ದರೂ ನಕಲು ಚೀಟಿಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಪರೀಕ್ಷಾ ಆರಂಭದ ದಿನವೇ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಲೋಕೋಪಯೋಗಿ ವಸತಿ ಗೃಹದ ಸಮೀಪವಿರುವ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ನಕಲು ಚೀಟಿ ಪೂರೈಕೆ ಕಸರತ್ತು ಜೋರಾಗಿಯೇ ನಡೆಯಿತು.

ಪೋಷಕರ ವಾಗ್ವಾದ: ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಕರೆದಂತ ಪೋಷಕರು ಸಹ ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಅನೇಕ ಕೇಂದ್ರಗಳ ಬಳಿ ಕಂಡು ಬಂತು. ಪರೀಕ್ಷಾ ಕೇಂದ್ರದಿಂದ ದೂರ ಹೋಗಿ ಎಂದು ಪರೀಕ್ಷಾ ಸಿಬ್ಬಂದಿ ಮತ್ತು ಪೊಲೀಸರು ಹೇಳಿದರೂ, ಪಾಲಕರು ಕೇಳಲಿಲ್ಲ. ಅಲ್ಲದೇ, ನೂತನ ವಿದ್ಯಾಲಯದ ಪರೀಕ್ಷಾ ಕೇಂದ್ರ ಬಳಿ ಕೆಲ ಪೋಷಕರು ಪೊಲೀಸ್‌ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದರು.

ಖಾಸಗಿಯಾಗಿ 126 ವಿದ್ಯಾರ್ಥಿಗಳು
ಐದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಎಡವಟ್ಟಿನಿಂದಾಗಿ ಹಾಲ್‌ ಟಿಕೆಟ್‌ ಸಿಗದೆ ಆತಂಕದಲ್ಲಿದ್ದ 126 ವಿದ್ಯಾರ್ಥಿಗಳು ಖಾಸಗಿ ಅಭ್ಯರ್ಥಿಗಳಾಗಿ ಬರೆಯಬೇಕಾಯಿತು. ಶಾಲೆಗಳ ಮಾನ್ಯತೆ ನವೀಕರಣ ಮಾಡದ ಮತ್ತು ಶಾಲಾ ತರಗತಿಗಳನ್ನು ನಡೆಸದ ಹಿನ್ನೆಲೆಯಲ್ಲಿ ಕಲಬುರಗಿ ದಕ್ಷಿಣ ವಲಯದ ಶಾಂತಿನಿಕೇತನ ಪ್ರೌಢಶಾಲೆಯ 24 ವಿದ್ಯಾರ್ಥಿಗಳು, ಅರ್ಚನಾ ಪ್ರೌಢ ಶಾಲೆಯ ಆರು ವಿದ್ಯಾರ್ಥಿಗಳು, ಕಲಬುರಗಿ ಉತ್ತರ ವಲಯದ ಮಹೆಬೂಬ್‌ ಸುಬಾನಿ ಪ್ರೌಢ ಶಾಲೆಯ 27 ವಿದ್ಯಾರ್ಥಿಗಳು ಮತ್ತು ಸಂಜೀವಿನಿ ಕನ್ನಡ ಪ್ರೌಢ ಶಾಲೆಯ 20 ವಿದ್ಯಾರ್ಥಿಗಳು, ಜೇವರ್ಗಿ ತಾಲೂಕಿನ ಕಡಕೋಳ ಮಡಿವಾಳೇಶವರ ಪ್ರೌಢಶಾಲೆಯ 49 ವಿದ್ಯಾರ್ಥಿಗಳಿಗೆ ಕೊನೆಗೆ ಗಳಿಗೆಯಲ್ಲಿ ಹಾಲ್‌ ಟಿಕೆಟ್‌ ಲಭಿಸಿತು.

ಕಂಟೈನ್ಮೆಂಟ್‌ ಝೋನ್‌-263 ಮಕ್ಕಳು
ಗುರುವಾರ ನಡೆದ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ (ಕನ್ನಡ ಮತ್ತು ಇಂಗ್ಲಿಷ್‌) ಪರೀಕ್ಷೆಯನ್ನು ಒಟ್ಟು 41,604 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಈ ಪೈಕಿ 39,189 ವಿದ್ಯಾರ್ಥಿಗಳು ಹಾಜರಾದರು. 2,415 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು. ಹೊರ ಜಿಲ್ಲೆಗಳ 626 ವಿದ್ಯಾರ್ಥಿಗಳ ಪೈಕಿ 24 ಮಕ್ಕಳು ಗೈರಾದರೆ 602 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕಂಟೈನ್ಮೆಂಟ್‌ ಝೋನ್‌ ವ್ಯಾಪ್ತಿಯ 263 ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಕುಳಿತಿದ್ದರು. ಅನಾರೋಗ್ಯ ಹಿನ್ನೆಲೆಯ 19 ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷಾ ವ್ಯವಸ್ಥೆ ಮಾಡಲಾಗಿತ್ತು ಎಂದು ಡಿಡಿಪಿಐ ಎಸ್‌.ಪಿ. ಬಾಡಗಂಡಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next