Advertisement

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ಶೇ.74.65 ಫಲಿತಾಂಶ

10:04 AM May 01, 2019 | Team Udayavani |

ಕಲಬುರಗಿ: ಶೈಕ್ಷಣಿಕ ಕ್ಷೇತ್ರದ ಪ್ರಮುಖ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಜಿಲ್ಲೆಯು ಶೇ.74.65ರಷ್ಟು ಫಲಿಂತಾಶದೊಂದಿಗೆ 30ನೇ ಸ್ಥಾನ ಪಡೆದಿದೆ. ಕಳೆದ ಬಾರಿ ಶೇ.68.65ರಷ್ಟು ಫಲಿತಾಂಶದೊಂದಿಗೆ ಇದೇ 30ನೇ ಸ್ಥಾನವನ್ನು ಜಿಲ್ಲೆ ಪಡೆದಿತ್ತು. ವಿಶೇಷವೆಂದರೆ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆ ಸ್ಥಾನ ಬದಲಾಗದಿದ್ದರೂ ಪ್ರಸಕ್ತ ವರ್ಷ ಶೇ.6ರಷ್ಟು ಫಲಿತಾಂಶ ಹೆಚ್ಚಳವಾಗಿದೆ.

Advertisement

ಜಿಲ್ಲೆಯ 133 ಪರೀಕ್ಷಾ ಕೇಂದ್ರಗಳಲ್ಲಿ ಮಾ.21ರಿಂದ ಏ.4ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿದ್ದವು. 36,083 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಇದರಲ್ಲಿ 27,140 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ. ಕಳೆದ ವರ್ಷ 34,841 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರೆ, 23,917 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿತ್ತು. ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ ವಿಷಯಗಳ ಬಗ್ಗೆ ವಿಶೇಷ ಒತ್ತು ನೀಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯೊಂದಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್ಕೆಆರ್‌ಡಿಬಿ)ಯೂ ಕೈಜೋಡಿಸಿತ್ತು. ಜಿಲ್ಲೆಯಲ್ಲಿ ಶೇ.75ಕ್ಕಿಂತ ಕಡಿಮೆ ಫಲಿತಾಂಶ ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ಎಚ್ಕೆಆರ್‌ಡಿಬಿ ವತಿಯಿಂದ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಒಂದು ಗಂಟೆ ಅವಧಿಯ ತೀವ್ರ ಕಲಿಕಾ ತರಗತಿಗಳನ್ನು ನಡೆಸಲಾಗಿತ್ತು. ಇದೆಲ್ಲದರ ಪರಿಣಾಮ ಪ್ರಸಕ್ತ ವರ್ಷ ಫಲಿತಾಂಶದಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸರ್ಕಾರಿ ಶಾಲೆಗಳ ಸಾಧನೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ತೋರಿವೆ. 321 ಸರ್ಕಾರಿ ಶಾಲೆಗಳಿಂದ 17,084 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 13,004 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದು, ಶೇ.76.12ರಷ್ಟು ಫಲಿತಾಂಶವನ್ನು ಸರ್ಕಾರಿ ಶಾಲೆಗಳು ಕಂಡಿವೆ. ಅನುದಾನಿತ ಶಾಲೆಗಳ ಶೇ.68.75ರಷ್ಟು ಫಲಿತಾಂಶ ಪಡೆದಿದ್ದರೆ, ಅನುದಾನರಹಿತ ಶಾಲೆಗಳಲ್ಲಿ ಶೇ.75.72ರಷ್ಟು ಫಲಿತಾಂಶ ಬಂದಿದೆ.

14 ಸರ್ಕಾರಿ ಶಾಲೆಗಳು ಶೇ.100ರಷ್ಟು ಫಲಿತಾಂಶವನ್ನು ಪಡೆದಿದ್ದು, ಶೂನ್ಯ ಫಲಿತಾಂಶದ ಶಾಲೆಗಳು ಯಾವುದೂ ಇಲ್ಲ. ಇತ್ತ, 58 ಅನುದಾನಿತ ಶಾಲೆಗಳ ಪೈಕಿ ಒಂದು ಶಾಲೆ ಮಾತ್ರ ಶೇ.100ರಷ್ಟು ಫಲಿತಾಂಶ ಪಡೆದಿದೆ. ಎರಡು ಶಾಲೆಗಳು ಶೂನ್ಯ ಸಾಧನೆ ಮಾಡಿವೆ. 358 ಅನುದಾನರಹಿತ ಶಾಲೆಗಳ ಪೈಕಿ 22 ಶಾಲೆಗಳಿಗೆ ಶೇ.100ರಷ್ಟು ಫಲಿತಾಂಶ ಬಂದಿದ್ದು. ಮೂರು ಶಾಲೆಗಳು ಶೂನ್ಯ ಸಾಧನೆ ಮಾಡಿವೆ.

Advertisement

ಎರಡು ವಿಧದ ಫಲಿತಾಂಶ: ಪ್ರಸಕ್ತ ವರ್ಷ ಎರಡು ವಿಧದಲ್ಲಿ ಜಿಲ್ಲಾವಾರು ಫಲಿತಾಂಶವನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಪಾಸಿಂಗ್‌ ಪರ್ಸಂಟೇಸ್‌ ಮತ್ತು ಕ್ವಾಲಿಟಿ ರಿಸಲ್r ಎಂದು ಎರಡು ರೀತಿಯಲ್ಲಿ ಎಲ್ಲ ಜಿಲ್ಲೆಗಳಿಗೆ ರ್‍ಯಾಂಕಿಂಗ್‌ ನೀಡಲಾಗಿದೆ. ಪಾಸಿಂಗ್‌ ಪರ್ಸಂಟೇಸ್‌ನಲ್ಲಿ ಕಲಬುರಗಿ ಜಿಲ್ಲೆ ಶೇ.74.65ರಷ್ಟು ಫಲಿತಾಂಶದೊಂದಿಗೆ 30ನೇ ಸ್ಥಾನದಲ್ಲಿ ಮುಂದುವರಿದಿದೆ. ಇತ್ತ, ಎ+, ಎ, ಬಿ+, ಬಿ… ಹೀಗೆ ಗ್ರೇಡ್‌ ಆಧಾರದ ಮೇಲೆ ಕ್ವಾಲಿಟಿ ರಿಸಲ್r ಪ್ರಕಟಿಸಲಾಗಿದೆ. ಇದರಲ್ಲಿ ಕಲಬುರಗಿ ಜಿಲ್ಲೆ ಶೇ.65.82ರಷ್ಟು ಫಲಿತಾಂಶದೊಂದಿಗೆ 29ನೇ ಸ್ಥಾನ ಪಡೆದಿದೆ.

ಫಲಿತಾಂಶ ಸಂದೇಶ ರವಾನೆ: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯಶಸ್ವಿಯಾಗಿದ್ದು, ಮೌಲ್ಯಮಾಪನ ಕಾರ್ಯವನ್ನು ಡಿಜಿಟಲೀಕರಣಗೊಳಿಸಿದೆ. ಜತೆಗೆ ಪ್ರಸಕ್ತ ವರ್ಷ ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ರವಾನಿಸಿದೆ.

ಎಸ್ ಬಿಆರ್ ವಿದ್ಯಾರ್ಥಿನಿ ಸಾಕ್ಷಿ ರಾಜ್ಯಕ್ಕೆ ೬ ನೇ ರ್ಯಾಂಕ್
ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶರಣಬಸವೇಶ್ವರ ವಸತಿ ಶಾಲೆಯ ಸಾಕ್ಷಿ ಬಿರಾದಾರ 625ಕ್ಕೆ 620 ಅಂಕ ಪಡೆದು (ಶೇ.99.20) ರಾಜ್ಯಕ್ಕೆ ಆರನೇ ರ್‍ಯಾಂಕ್‌ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ಡಾಕ್ಟರ್‌ ಆಗುವ ಕನಸನ್ನು ಸಾಕ್ಷಿ ಬಿರಾದಾರ ಕಂಡಿದ್ದಾರೆ. ಶಾಲೆಯಲ್ಲಿ ಗುರುಗಳು ಹೇಳಿದ ಪಾಠವನ್ನು ಶ್ರದ್ಧೆಯಿಂದ ಆಲಿಸಿ, ಮನೆಯಲ್ಲೂ ಪುನರಾವರ್ತನೆ ಮಾಡುತ್ತಿದ್ದರಂತೆ. ಜತೆಗೆ ಹಳೆ ಪ್ರಶ್ನೆ ಪತ್ರಿಕೆಗಳನ್ನು ಸಾಕ್ಷಿ ಗಮನಿಸುತ್ತಿದ್ದರು. ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹವೇ ಸಾಧನೆಗೆ ಕಾರಣ ಎನ್ನುತ್ತಾರೆ ಸಾಕ್ಷಿ ಬಿರಾದಾರ. ವಿದ್ಯಾರ್ಥಿನಿ ಸಾಧನೆಗೆ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ| ಶರಣಬವಸಪ್ಪ ಅಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ವರ್ಷ ಕೈಗೊಂಡ ಸುಧಾರಿತ ಕ್ರಮಗಳಿಗೆ ಪೂರಕವಾಗಿ ಫಲಿತಾಂಶ ಬಂದಿದೆ. ಖಾಸಗಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ಎಚ್ಕೆಆರ್‌ಡಿಬಿ ವತಿಯಿಂದ ಶೇ.75ಕ್ಕಿಂತ ಕಡಿಮೆ ಫಲಿತಾಂಶ ಹೊಂದಿರುವ 125 ಸರ್ಕಾರಿ ಶಾಲೆಗಳಲ್ಲಿ ಕಲಿಕಾ ತರಗತಿ ನಡೆಸಲಾಗಿತ್ತು.
ಶಾಂತಗೌಡ,
ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next