ಕಲಬುರಗಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಿಸಿಲೂರಿನ ಪ್ರತಿಭಾವಂತ 10 ವಿದ್ಯಾರ್ಥಿಗಳು ರಾಜ್ಯದ 10ನೇ ರ್‍ಯಾಂಕ್‌ನೊಳಗೆ ಸ್ಥಾನ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಒಬ್ಬ ವಿದ್ಯಾರ್ಥಿನಿ ರಾಜ್ಯಕ್ಕೆ ಆರನೇ ರ್‍ಯಾಂಕ್ ಪಡೆದು ಮಿಂಚಿದರೆ, ಸರ್ಕಾರಿ ಶಾಲೆ ವಿದ್ಯಾರ್ಥಿಯೊಬ್ಬ ಕನ್ನಡ ಮಾಧ್ಯಮದಲ್ಲಿ 617 ಅಂಕಗಳನ್ನು ಪಡೆದು 9ನೇ ರ್‍ಯಾಂಕ್‌ನೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾನೆ. ಒಟ್ಟಾರೆ ಒಬ್ಬ ವಿದ್ಯಾರ್ಥಿನಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದರೆ, ಇಬ್ಬರು ಟಾಪ್ ಎರಡನೇ ಸ್ಥಾನ ಹಾಗೂ ನಾಲ್ವರು ಟಾಪ್ ಮೂರನೇ ಸ್ಥಾನ ಹಾಗೂ ಮೂವರು ಟಾಪ್ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.
ನಗರದ ಪ್ರತಿಷ್ಠಿತ ಶರಣಬಸವೇಶ್ವರ ವಸತಿ ಶಾಲೆಯ ಸಾಕ್ಷಿ ಬಿರಾದಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 625ಕ್ಕೆ 620 ಅಂಕಗಳೊಂದಿಗೆ ಶೇ.99.20ರಷ್ಟು ಫಲಿತಾಂಶ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಆರನೇ ರ್‍ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಇದೇ ಶಾಲೆಯ ಶಾಲೆಯ ಸ್ನೇಹಾ ಪಾಟೀಲ ಹಾಗೂ ಅಫಜಲಪುರ ತಾಲೂಕಿನ ಚೌಡಾಪುರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಭಾಗ್ಯಶ್ರೀ ಇಬ್ಬರೂ ತಲಾ 618 ಸಮಾನ ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಭಾಗ್ಯಶ್ರೀ ಕನ್ನಡದಲ್ಲಿ 125ಕ್ಕೆ 125ಕ್ಕೆ ಮತ್ತು ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದಿದ್ದರೆ, ಇಂಗ್ಲಿಷ್‌ನಲ್ಲಿ 99, ಸಮಾಜ ವಿಜ್ಞಾನದಲ್ಲಿ 99, ಗಣಿತದಲ್ಲಿ 97, ವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾರೆ. ಇತ್ತ, ಅಫಜಲಪುರ ತಾಲೂಕಿನ ಮಣ್ಣೂರು ಸರ್ಕಾರಿ ಶಾಲೆಯ ವಿದ್ಯಾರ್ಥಿ ಮತೀನ್ ಕನ್ನಡ ಮಾಧ್ಯಮದಲ್ಲಿ 617 ಅಂಕಗಳೊಂದಿಗೆ ಶೇ. 98.72ರಷ್ಟು ಫಳಿತಾಂಶ ಪಡೆದು ಗಮನ ಸೆಳೆದಿದ್ದಾರೆ.
ಕನ್ನಡದಲ್ಲಿ 125ಕ್ಕೆ 125ಕ್ಕೆ ಅಂಕ, ಗಣಿತ ಮತ್ತು ಹಿಂದಿಯಲ್ಲಿ 100ಕ್ಕೆ 100 ಅಂಕವನ್ನು ಮತೀನ್ ಪಡೆದಿದ್ದಾರೆ. ವಿಶೇಷವೆಂದರೆ ಕನ್ನಡ ಮಾಧ್ಯಮವಾಗಿದ್ದರೂ ಇಂಗ್ಲಿಷ್‌ನಲ್ಲಿ 100ಕ್ಕೆ 99 ಪಡೆದು ಮತೀನ್ ಅಮೋಘ ಸಾಧನೆ ಮಾಡಿದ್ದಾರೆ. ಸಮಾಜ ವಿಜ್ಞಾನದಲ್ಲಿ 100ಕ್ಕೆ 98 ಅಂಕ ಈತ ಮುಂದೆ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾನೆ.
ಎಸ್‌ಆರ್‌ಎನ್ ಮೆಹ್ತಾ ಶಾಲೆಯ ಭರತ್ ಪಾಟೀಲ ಮತ್ತು ಚೇತನ್ ಜಾಧವ್ ಸಹ ತಲಾ 617 ಅಂಕ ಪಡೆದಿದ್ದಾರೆ. ಶರಣಬಸವೇಶ್ವರ ವಸತಿ ಶಾಲೆಯ ಸುಮಿತ್, ವಿದ್ಯಾಚೇತನ ಶಾಲೆಯ ಲಕ್ಷ್ಮೀ ಹಾಗೂ ಸರ್ದಾರ ವಲ್ಲಭಭಾಯಿ ಪಟೇಲ್ ಸ್ಮಾರಕ ಶಾಲೆಯ ಶೇಕ್ ಅಬ್ದುಲ್ ರಹಮಾನ್ ತಲಾ 616 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.