ಕಲಬುರಗಿ: ಜಿಲ್ಲೆಯಲ್ಲಿ ಮೂರನೇ ದಿನವೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ಜರುಗಿದವು. ಶನಿವಾರ ನಡೆದ ಗಣಿತ ವಿಷಯ ಪರೀಕ್ಷೆಗೆ 42,103 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 39,369 ವಿದ್ಯಾರ್ಥಿಗಳು ಹಾಜರಾದರೆ, 2,734 ಮಕ್ಕಳು ಗೈರಾಗಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನವಾದ ಗುರುವಾರ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಇತ್ತು. ಶುಕ್ರವಾರ ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಆ್ಯಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಗ್ರಾಫಿಕ್ಸ್-2 ವಿಷಯ ಪರೀಕ್ಷೆಗೆ ಕಡಿಮೆ ವಿದ್ಯಾರ್ಥಿಗಳು ಇದ್ದರು. ಶನಿವಾರ ಅತ್ಯಧಿಕ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದರು.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ನೆಮ್ಮದಿಯಿಂದಲೇ ಬಂದರು. ನಿಯಮಾನುಸಾರ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡರು. ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು ಪರೀಕ್ಷೆ ಕೊಠಡಿ ಒಳಗೆ ಹೋದರು. ಪೋಷಕರಲ್ಲೂ ಮೊದಲ ದಿನದಷ್ಟು ಆತಂಕ ಕಂಡು ಬರಲಿಲ್ಲ. ಪರೀಕ್ಷಾ ಕೇಂದ್ರದ ಎದುರು ಪಾಲಕರು ಗುಂಪಾಗಿ ಸೇರಿದ್ದು ಕಂಡುಬರಲಿಲ್ಲ. ನೂತನ ವಿದ್ಯಾಲಯದ ಕೇಂದ್ರ ಬಳಿ ಪೋಷಕರು ಅಲ್ಲಲ್ಲಿ ಗುಂಪುಗೂಡಿದ್ದರು.
ಮೊದಲ ದಿನ ಕೆಲ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳಿಗೆ ಗೋಡೆ ಹಾರಿ ನಕಲು ಚೀಟಿಗಳನ್ನು ನೀಡುತ್ತಿದ್ದ ಘಟನೆಗಳು ನಡೆದಿದ್ದವು. ಶನಿವಾರ ಪರೀಕ್ಷಾ ಕೇಂದ್ರಗಳ ಸುತ್ತ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎಲ್ಲೂ ಪರೀಕ್ಷಾ ಅವ್ಯವಹಾರದ ಪ್ರಕರಣಗಳು ನಡೆದ ಕುರಿತು ವರದಿಯಾಗಿಲ್ಲ.