ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಧಂಗಾಪುರ ಗ್ರಾಮದ ಸೋಮನಾಥ ಮಲ್ಲಿನಾಥ ಆಳಂದ ಎನ್ನುವ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.90 ರಷ್ಟು ಅಂಕ ಪಡೆದಿದ್ದ. ಮನೆ ಪರಿಸ್ಥಿತಿ ಕಠಿಣ. ತಂದೆ ಇಲ್ಲ. ಹೊಲವೂ ಇಲ್ಲ. ತಾಯಿ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡೋದೆ ಕಷ್ಟ. ಮುಂದಿನ (ಪಿಯುಸಿ) ಶಿಕ್ಷಣವಂತೂ ಮುಂದುವರಿಸಲಾಗದ ಸ್ಥಿತಿ.
ಅದೇ ರೀತಿ ಜೇವರ್ಗಿ ತಾಲೂಕಿನ ಚೆನ್ನೂರ ಗ್ರಾಮದ ಜ್ಯೋತಿ ದೇವಪ್ಪ ಎಸ್ಸೆಸ್ಸೆಲ್ಸಿಯಲ್ಲಿ ಶೇ. 96 ಅಂಕ ಪಡೆದಿದ್ದಳು. ಮನೆಯಲ್ಲಿ ಓದಿಸಲಾರದ ಪರಿಸ್ಥಿತಿ. ಮುಂದಿನ ಓದು ಮುಂದುವರಿಸುವುದು ಕಷ್ಟವಾಗಿತ್ತು. ಇರುವ ಒಂದು ಎಕರೆ ಭೂಮಿ. ಮುಂದಿನ ಶಿಕ್ಷಣ ಪಡೆಯಲು ಸಾಧ್ಯವಾಗದ ಸ್ಥಿತಿ. ಹೀಗಾಗಿ ಪಿಯುಸಿ ವಿಜ್ಞಾನ ಓದೋದು ಅಸಾಧ್ಯ ಮಾತು ಎನ್ನುವಂತಾಗಿತ್ತು.
ಇಂತಹ ಅಸಾಧ್ಯ ಸ್ಥಿತಿಗಳಿಗೆ ನೆರವಿಗೆ ಬಂದಿದ್ದಲ್ಲದೇ, ಆ ವಿದ್ಯಾರ್ಥಿಗಳಿಂದು ಪಿಯುಸಿ ವಿಜ್ಞಾನದಲ್ಲಿ ಶೇ. 90ಕ್ಕಿಂತ ಅತ್ಯಧಿಕ ಅಂಕ ಪಡೆದು ವೈದ್ಯಕೀಯ ಪ್ರವೇಶಾತಿ ಪಡೆಯುವ ಮಟ್ಟಿಗೆ ಉಚಿತ ಶಿಕ್ಷಣ ನೀಡಿ, ನಿಜಾರ್ಥದಲ್ಲಿ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಶಾಕಿರಣವಾಗಿ ಹೊರಹೊಮ್ಮಿದೆ ಖಣದಾಳ ಬಳಿ ಇರುವ ಶರಣಮ್ಮ ಎಸ್. ಡಿಗ್ಗಾವಿ ಸ್ಮರಣಾರ್ಥದ ಶ್ರೀ ಗುರು ವಿದ್ಯಾಪೀಠ. ಸೋಮನಾಥ ಮಲ್ಲಿನಾಥ ಪ್ರಸಕ್ತ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇ. 94 ಅಂಕ, ಜ್ಯೋತಿ ದೇವಪ್ಪ ಶೇ. 91 ಅಂಕ ಪಡೆದು ಉಚಿತ ಸೌಲಭ್ಯದ ಸಾರ್ಥಕತೆ ಪಡೆದಿದ್ದಾರೆ. ಇವರಿಬ್ಬರಲ್ಲದೇ ಇಂತಹ ನೂರಾರು ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಸತಿಯೊಂದಿಗೆ ಅತ್ಯುತ್ತಮ ಶೈಕ್ಷಣಿಕ ಸೇವೆಯನ್ನು ತೆರೆಮರೆಯಲ್ಲಿ ಕಳೆದ 10 ವರ್ಷಗಳಿಂದ ಉಚಿತವಾಗಿ ನೀಡುತ್ತಾ ಬರಲಾಗುತ್ತಿದೆ. ಹೀಗಾಗಿ ಸಂಸ್ಥೆ ಕಲ್ಯಾಣ ಕರ್ನಾಟಕವಲ್ಲದೇ ನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಸೇವೆ ಹಿಂದಿರುವ ಶಕ್ತಿಯೇ ಸಂಸ್ಥೆ ಅಧ್ಯಕ್ಷ ಬಸವರಾಜ ಡಿಗ್ಗಾವಿ, ಕಾರ್ಯದರ್ಶಿ ಬಸವರಾಜ ಡಿಗ್ಗಾವಿ.
ಕಲಬುರ್ಗಿಯಿಂದ ಜೇವರ್ಗಿಗೆ ಹೋಗುವ ದಾರಿ ಮಧ್ಯೆ ಕೇಂದ್ರ ಕಾರಾಗೃಹ ಎದುರಿನ ಖಣದಾಳ ಸೀಮಾಂತರದಲ್ಲಿ ವಿಶಾಲವಾದ 50 ಎಕರೆ ಭೂಮಿಯಲ್ಲಿ ಸ್ಥಾಪಿಸಲಾದ ಶ್ರೀ ಗುರು ವಿದ್ಯಾಪೀಠದಲ್ಲಿ ಪಿಯು ವಿಜ್ಞಾನ ವಸತಿ ಸ್ವತಂತ್ರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಇದರಲ್ಲಿ ಆರ್ಥಿಕವಾಗಿ ಕಡು ಬಡತನದಲ್ಲಿರುವರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಕನಿಷ್ಠ 10 ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದೆ.
ಶ್ರೀಗುರು ವಿದ್ಯಾಪೀಠದಲ್ಲಿ ಉಚಿತ ಪಿಯು ವಿಜ್ಞಾನ ಶಿಕ್ಷಣ ಪಡೆದು, ಶೇ. 90ರಕ್ಕಿಂತ ಹೆಚ್ಚಿನ ಅಂಕ ಗಳಿಸಿ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಾತಿ ಪಡೆಯುವ ಹಂಬಲದೊಂದಿಗೆ ವಿದ್ಯಾಪೀಠದಿಂದ ಹೊರ ಹೋಗುತ್ತಿರುವ ವಿದ್ಯಾರ್ಥಿಗಳಾದ ಶಾಂತಮಲ್ಲಪ್ಪ ನಾಗಪ್ಪ (ಶೇ. 90), ವಿಶಾಲ ಮಹಾದೇವ (ಶೇ. 89.66), ರಾಹುಲ್ ದೇಸು ರಾಠೊಡ (ಶೇ. 87), ನಾಗರಾಜ ಶಾಂತಪ್ಪ (ಶೇ. 86) ಅಂಕ ಪಡೆದಿದ್ದು, ಶ್ರೀಗುರು ವಿದ್ಯಾಪೀಠದಲ್ಲಿ ಉಚಿತ ಶಿಕ್ಷಣ ಪಡೆದ ಬಗ್ಗೆ ವಿದ್ಯಾಪೀಠದಲ್ಲಿ ಅನುಭವ ಹಂಚಿಕೊಂಡರು. ಒಂದು ವೇಳೆ ಶ್ರೀಗುರು ವಿದ್ಯಾಪೀಠದಲ್ಲಿ ಉಚಿತ ಪಿಯು ವಿಜ್ಞಾನ ಶಿಕ್ಷಣ ಸಿಗದಿದ್ದರೆ ತಮ್ಮ ಭವಿಷ್ಯವೇ ಮಂಕಾಗುತ್ತಿತ್ತು. ನಮಗೀಗ ಸಂಸ್ಥೆಯಿಂದ ಹೊರ ಹೋಗಲು ಮನಸ್ಸೇ ಆಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕತೆಯಿಂದ ಆಯ್ಕೆ: ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವಸತಿ ಸಹಿತ ಉಚಿತ ಶಿಕ್ಷಣ ಯೋಜನೆ ಅಡಿ ಆಯ್ಕೆಯನ್ನು ಸಿಇಟಿ ನಡೆಸಿ ನಂತರ ಕೌನ್ಸೆಲಿಂಗ್ ನಡೆಸಿ ಪಾರದರ್ಶಕತೆಯಿಂದ ಆಯ್ಕೆ ಮಾಡಲಾಗುತ್ತದೆ. ವಿದ್ಯಾರ್ಥಿ ಬಡತನ ಹೊಂದಿರುವ ಬಗ್ಗೆ ಕೂಲಕುಂಶ ಪರಾಮರ್ಶೆ, ಕನ್ನಡ ಮಾಧ್ಯಮದಲ್ಲಿ ಓದಿರುವುದು ಹಾಗೂ ಪ್ರತಿಭಾನ್ನತೆ ಹೊಂದಿರುವ ಬಗ್ಗೆ ಪರೀಕ್ಷೆ. ಹೀಗೆ ಎಲ್ಲವುಗಳನ್ನು ಅವಲೋಕಿಸಿಯೇ ಉಚಿತ ಪ್ರವೇಶಾತಿ ನೀಡಲಾಗುತ್ತದೆ. ಎಲ್ಲರೂ ಈ ಹಿಂದೆ ಪ್ರಥಮ ದರ್ಜೆಯಲ್ಲಿ ಪಾಸಾದವರಿಗೆ ತರಬೇತಿ ನೀಡಿದ್ದರೆ, ಸಂಸ್ಥೆಯಲ್ಲಿ ಅನುತ್ತೀರ್ಣರಾದವರಿಗೆ ತರಬೇತಿ ನೀಡಿ ಉತ್ತೀಣರಾಗುವಂತೆ ಮಾಡಲಾಗಿತ್ತು. ಬಡತನದಿಂದ ಬಂದ ತನಗೆ ಬಡ ವಿದ್ಯಾರ್ಥಿಗಳ ಕಷ್ಟ ಏನೆಂಬುದು ಗೊತ್ತು. ಹೀಗಾಗಿ ದೊಡ್ಡದಾಗಿ ಸಂಸ್ಥೆ ಕಟ್ಟಿದ್ದರೂ ಬಡವರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಲಾಗಿದೆ ಎಂದು ಶ್ರೀ ವಿದ್ಯಾಪೀಠದ ಅಧ್ಯಕ್ಷ ಬಸವರಾಜ ಡಿಗ್ಗಾವಿ ತಿಳಿಸುತ್ತಾರೆ. ದಿನಪತ್ರಿಕೆಗಳಲ್ಲಿ ಬಡ ವಿದ್ಯಾರ್ಥಿಗೆ ಸಹಾಯ ಮಾಡಿ ಎನ್ನುವ ವಿಷಯ ಬಂದಾಗಲೂ ಸ್ಪಂದಿಸಿದ್ದೇವೆ. ವಿದ್ಯಾಪೀಠದಲ್ಲಿ ಪಿಯು ವಿಜ್ಞಾನ ವಸತಿ ಸಹಿತ ಉಚಿತ ಶಿಕ್ಷಣ ಪಡೆಯುವ ಬಡವರು, ಅನಾಥರು ತಮ್ಮ ಮೊಬೈಲ್ ಸಂಖ್ಯೆ 9243216969ಕ್ಕೆ ಕರೆ ಮಾಡಬಹುದು ಎಂದು ತಿಳಿಸುತ್ತಾರೆ. ಇವರ ಶೈಕ್ಷಣಿಕ ಸೇವೆಗೆ ಸಹೋದರ ಶಿವರಾಜ ಡಿಗ್ಗಾವಿ ಕೈ ಜೋಡಿಸಿದ್ದಾರೆ.
ಎಸ್‌ಎಸ್‌ಎಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದರೂ ಮನೆಯಲ್ಲಿ ವಿದ್ಯಾರ್ಥಿ ಶಿಕ್ಷಣ ಮುಂದುವರಿಸಲಾಗದ ಪರಿಸ್ಥಿತಿ ಅರಿತು ಜತೆಗೆ ತಂದೆ- ತಾಯಿ ಇಲ್ಲದ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿದೆ. ಪಿಯುಸಿಯಲ್ಲೂ ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದು ವೈದ್ಯಕೀಯ ಪ್ರವೇಶಾತಿಗೆ ಉತ್ತಮ ರ್‍ಯಾಂಕ್ ಪಡೆದ ಕೆಲ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸಲಾಗಿದೆ. ಈಗ ಅವರು ವೈದ್ಯರಾಗಿ ಸಮಾಜದ ಒಳಿತಿಗೆ ಶ್ರಮಿಸುತ್ತಿರುವುದು ಹಾಗೂ ಶ್ರೀಗುರು ವಿದ್ಯಾಪೀಠದ ಶೈಕ್ಷಣಿಕ ಕಾಳಜಿಯನ್ನು ಸಮಾಜಕ್ಕೆ ಗುರುತಿಸುತ್ತಿರುವುದು ತಮಗೆ ಸಾರ್ಥಕತೆ ತಂದಿದೆ.
•ಬಸವರಾಜ ಡಿಗ್ಗಾವಿ,
ಸಂಸ್ಥಾಪಕ ಅಧ್ಯಕ್ಷರು, ಶ್ರೀಗುರು ವಿದ್ಯಾಪೀಠ, ಖಣದಾಳ