Advertisement

ಪಥ ಪರಿಕಲ್ಪನೆ ರೂಪಿಸಿದ ಕುವೆಂಪು: ಶಾಸ್ತ್ರೀ

03:29 PM Dec 30, 2019 | Naveen |

ಕಲಬುರಗಿ: ಮನುಜಮತ, ವಿಶ್ವಪಥ ಎಂಬ ಪರಿಕಲ್ಪನೆ ರೂಪಿಸಿದ ಕೀರ್ತಿ ಮಹಾನ್‌ ರಾಷ್ಟ್ರಕವಿ ಕುವೆಂಪು ಅವರಿಗೆ ಸಲ್ಲುತ್ತದೆ, ಇದರಿಂದ ಅವರಿಗೆ ಸರಕಾರ ವಿಶ್ವಮಾನವ ಎಂದು ನಾಮಕರಣ ಮಾಡಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ ಹೇಳಿದರು.

Advertisement

ನಗರದ ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಹುಟ್ಟಿದ ಪ್ರತಿ ಮಗುವು ವಿಶ್ವಮಾನವನೇ ಆದರೆ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಕುವೆಂಪು ಅವರ ನಿಲವು ಅದ್ಭುತವಾಗಿದೆ ಎಂದು ಬಣ್ಣಿಸಿದರು. ಸಮಾಜದಲ್ಲಿನ ಮೌಡ್ಯ, ಕಂದಾಚಾರವನ್ನು ತಮ್ಮ ಸಾಹಿತ್ಯದ ಮೂಲಕ ವಿರೋಧಿಸಿದರು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ವಾಕ್ಯ ಇಂದಿಗೂ ಪ್ರಸ್ತುತವಾಗಿದೆ.

ಆದ್ದರಿಂದ ನಾಡಿಗೆ, ದೇಶಕ್ಕೆ, ವಿಶ್ವಕ್ಕೆ ಕುವೆಂಪುರವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಕುವೆಂಪು ಬರೆದ ಸಾಹಿತ್ಯವನ್ನು ಮೆಲುಕು ಹಾಕಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲಕುಮಾರ ಬಿಡವೆ ಮಾತನಾಡಿ, ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರಗಳಿವೆ. ಆದರೂ ಅವು ಶಾಂತಿ ಕಾಪಾಡುತ್ತಿವೆ. ಪರಿಣಾಮ ಕುವೆಂಪುರವರ ಸಾಮಾಜಿಕ ಚಿಂತನೆಯ ಸಾಹಿತ್ಯವೇ ಇದಕ್ಕೆ ಮೂಲ ಕಾರಣವಾಗಿದೆ. ಕುವೆಂಪುರವರ ಬರಹದಂತೆ ಅವರು ಬದುಕು ರೂಪಿಸಿಕೊಂಡಿದ್ದಾರೆ. ಇಂತಹ ಮಹಾನ್‌ ವ್ಯಕ್ತಿಯ ಸಾಹಿತ್ಯದ ಪುಸ್ತಕಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಮ್‌.ಎಸ್‌. ಪಾಟೀಲ ಮಾತನಾಡಿ, ಕುವೆಂಪುರವರು ಪ್ರಶಸ್ತಿಗಳಿಗೆ ಲಾಬಿ ಮಾಡಲಿಲ್ಲ. ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ಸರಳ ಜೀವನ ಹಾಗೂ ಸುಂದರ ವ್ಯಕ್ತಿತ್ವ ಹೊಂದಿದ್ದರು. ಅವರು ನುಡಿದಂತೆ ನಡೆಯುತ್ತಿದ್ದರು. ಬರೆದಂತೆ ಹೇಳುತ್ತಿದ್ದರು. ಇದರಿಂದ ಅವರಿಗೆ ವಿಶ್ವಮಾನವ ಎಂದು ಕರೆಯಲಾಗುತ್ತದೆ ಎಂದು ಕುವೆಂಪುರವರ ಬದುಕು ಬರಹ
ಬಗ್ಗೆ ತಿಳಿಸಿದರು. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಸಚಿವ ಲಿಂಗರಾಜ ಶಾಸ್ತ್ರಿ ಮತ್ತು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಟಿ.ವಿ. ಶಿವಾನಂದನ್‌, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಎಮ್‌.ಎಸ್‌. ಪಾಟೀಲ, ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾದ ಡಾ| ಎಲೆನೊರ್‌ ಗೀತಮಾಲಾ ಇದ್ದರು. ಡಾ| ಸಾರಿಕಾ ದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ನಾನಾಸಾಹೇಬ ಹಚ್ಚಡದ ನಿರೂಪಿಸಿದರು. ಪ್ರೊ| ಪವನಕುಮಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next