ಕಲಬುರಗಿ: ಕಾರ್ಮಿಕ ಇಲಾಖೆಯಿಂದ ಸಿಗುವ ಸುಮಾರು 15ಕ್ಕಿಂತ ಹೆಚ್ಚು ಸೇವೆಗಳನ್ನು ಕಾರ್ಮಿಕರಿಗೆ ಸಕಾಲದಲ್ಲಿ ಒದಗಿಸುವ ಮುಂದುವರಿದ ಭಾಗವೇ ಸೇವಾ ಸಿಂಧು ಕಾರ್ಯಕ್ರಮವಾಗಿದ್ದು, ಕಾರ್ಮಿಕರು ಇದರ ಲಾಭ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೇವಾ ಸಿಂಧು ಯೋಜನೆ ಅಡಿಯಲ್ಲಿ ಒಳಪಡುವ ಕಾರ್ಮಿಕ ಇಲಾಖೆಯ ಆನ್‌ಲೈನ್ ಸೇವೆಗಳ ಕುರಿತು ಕಂಪ್ಯೂಟರ್ ಆಪರೇಟರ್‌ಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರು ಸೂಕ್ತ ಅರಿವಿಲ್ಲದೆ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.
ದುರ್ಬಲತೆ ಪಿಂಚಣಿ, ಟ್ರೈನಿಂಗ್ ಕಮ್-ಟೂಲ್ ಕಿಟ್, ವಸತಿ (ಕಾರ್ಮಿಕ ಗೃಹ ಭಾಗ್ಯ), ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್), ಕಾರ್ಮಿಕರ ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಸೌಲಭ್ಯದಿಂದ ಕೆಲವರು ವಂಚಿತರಾಗಿದ್ದಾರೆ. ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರವು ಜಾರಿಗೊಳಿಸಿರುವ ಹತ್ತು-ಹಲವು ಯೋಜನೆಗಳ ಬಗ್ಗೆ ಹಾಗೂ ಸೇವಾ ಸಿಂಧು ಯೋಜನೆಡಿಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ಕಾರ್ಮಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಕಾರ್ಮಿಕ ಇಲಾಖೆಯಿಂದ ನಡೆಯಬೇಕು ಎಂದು ಹೇಳಿದರು.
ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಯೋಜನೆಗಳನ್ನು ಸರಳವಾಗಿ ಫಲಾನುಭವಿಗಳನ್ನು ತಲುಪುವ ಉದ್ದೇಶದೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸೇವಾ ಸಿಂಧು ಯೋಜನೆ ಅಡಿಗೆ ಒಳಪಡುವ ಅಧಿಕಾರಿಗಳು ಹಾಜರಿದ್ದರು.