ಕಲಬುರಗಿ: ಒತ್ತಡದ ಜೀವನ ನಡೆಸುತ್ತಿರುವ ಈಗಿನ ಜನರು ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಿಗೆ ಒಳಗಾಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದೆ ಎಂದು ಹಿಂಗುಲಾಂಬಿಕಾ ಆಯುರ್ವೇದಿಕ ಕಾಲೇಜಿನ ಡಾ| ಸ್ಮೀತಾ ಕಣಮುಸೆ ತಿಳಿಸಿದರು.
ಗುರುವಾರ ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಯೋಗ ಕುರಿತ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೋಗವು ದೇಹ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಕೊಂಡಿಯಾಗಿದೆ. ಹೀಗಾಗಿ ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ನಾವು ರೋಗ ರುಜಿನಗಳಿಂದ ದೂರವಿರಬಹುದು. ಪ್ರಾಣಾಯಾಮ ಅಭ್ಯಾಸ ಮಾಡಿಕೊಳ್ಳುವುದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ ಜೊತೆಗೆ ದೇಹದ ಅನುಪಯುಕ್ತ ವಸ್ತುಗಳು ಹೊರ ಹೋಗುತ್ತವೆ ಎಂದು ನುಡಿದರು.
ವಿದ್ಯಾರ್ಥಿಗಳು ಧ್ಯಾನ ಮಾಡುವುದರಿಂದ ಮನಸ್ಸು ಹಗುರವಾಗಿ, ನಕಾರಾತ್ಮಕ ಚಿಂತನೆಗಳು ದೂರವಾಗುತ್ತವೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಉಂಟಾಗುತ್ತದೆ. ದೇಹ ಬಯಸಿದಾಗ ಆ ಬಯಕೆಗಳನ್ನು ಈಡೇರಿಸಿದರೆ ಆರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಪರಮ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರ ಉತ್ತಮ ಆರೋಗ್ಯದ ಗುಟ್ಟೇ ಯೋಗವಾಗಿದೆ. ಡಾ| ಅಪ್ಪಾಜಿ ಈಗಲೂ ಸೂರ್ಯ ನಮಸ್ಕಾರ ಮಾಡುತ್ತಾರೆ. ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಯೋಗವೂ ಅಷ್ಟೇ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ ನಿಷ್ಟಿ ಮಾತನಾಡಿ, ಮನಸ್ಸಿಗೆ ಒತ್ತಡ ಜಾಸ್ತಿ ಆದಾಗ ರಕ್ತದ ಹರಿವು ಹೆಚ್ಚು ಕಡಿಮೆ ಆಗುತ್ತದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನಾವು ಬಯಸಿದ್ದನ್ನು ಪಡೆಯುವುದೇ ಯೋಗ. ಯೋಗಕ್ಕಿರುವ ಅಗಾಧ ಶಕ್ತಿಯನ್ನು ಈಗ ಜಗತ್ತು ಒಪ್ಪಿಕೊಂಡಿದೆ ಎಂದರು.
ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ಡಾ| ಶಶಿಕಲಾ, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಜನಿ ಪ್ರಾರ್ಥಿಸಿದರು, ಅಶ್ವಿನಿ ಸ್ವಾಗತಿಸಿದರು, ಸಯೀದಾ ನುಸ್ರತ್ ಫಾತೀಮಾ ನಿರೂಪಿಸಿದರು, ಸುವರ್ಣ ವಂದಿಸಿದರು