ಕಲಬುರಗಿ: ಮನೆಯೊಂದರ ಗೋಡೆ ಮೇಲೆ “ಪಾಕಿಸ್ತಾನ ಜಿಂದಾಬಾದ್’ ಎಂದು ಬರೆದು ವಿಕೃತಿ ಮೆರೆದ ಘಟನೆ ನಗರದ ಸಾತ್ ಗುಂಬಜ್ ಬಳಿ ಶನಿವಾರ ರಾತ್ರಿ ನಡೆದಿದ್ದು, ಪೊಲೀಸರು ಕಿಡಿಗೇಡಿಗಳ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಿದ್ದಾರೆ.
ಸಾತ್ ಗುಂಬಜ್ ಸಮೀಪವಿರುವ ಕಿಶನ್‌ರಾವ್ ಹಾಗರಗುಂಡಗಿ ಎನ್ನುವರ ಮನೆ ಗೋಡೆ ಮೇಲೆ ಈ ಬರಹವನ್ನು ಬರೆದಿರುವ ಕಿಡಿಗೇಡಿಗಳು, ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ. ರವಿವಾರ ಬೆಳಗ್ಗೆ ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬರಹ ಅಳಿಸಿ ಹಾಕಿದ್ದಾರೆ.
ಪಾಕ್ ಪರ ಪ್ರೇಮ ಮೆರೆದು ವಿಕೃತಿ ಎಸಗಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕಾರಿಗೂ ಬೆಂಕಿ ಹಚ್ಚಲು ದುಷ್ಕರ್ಮಿಗಳು ಯತ್ನಿಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ. ಕಿಶನ್‌ರಾವ್ ಮನೆ ಎದುರು ಅಬ್ದುಲ್ಲಾ ಎನ್ನುವವರ ಕಾರು ನಿಲ್ಲಿಸಲಾಗಿತ್ತು.
ಈ ಕಾರಿಗೆ ಬೆಂಕಿ ಹಚ್ಚಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎಂದು ಗೊತ್ತಾಗಿದೆ. ಮನೆಯ ಸುತ್ತ-ಮುತ್ತ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲ. ಹೀಗಾಗಿ ವಿಕೃತಿ ಮೆರೆದವರ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ರಾಜದ್ರೋಹ, ಕೋಮು ಗಲಭೆಗೆ ಯತ್ನ, ಪ್ರಚೋದನೆ ಸಂಬಂಧ ಐಪಿಸಿ ಸೆಕ್ಷನ್ 153(ಎ), 153(ಬಿ), 124(ಎ) ಹಾಗೂ 505 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಖಂಡನೆ: ಪಾಕಿಸ್ತಾನ ಪರ ಹಾಗೂ ಪ್ರಧಾನಿ ಮೋದಿ ವಿರುದ್ಧ ಬರಹ ಬರೆದ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನಗರದಲ್ಲಿ ಜನರ ನೆಮ್ಮದಿ ಹಾಳು ಮಾಡುವ ಯತ್ನ ನಡೆಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಜಾತ್ಯತೀತವಾಗಿ ಕೆಲ ಹೊತ್ತು ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನಗರಾಧ್ಯಕ್ಷ ಸಿದ್ಧಾಜಿ ಪಾಟೀಲ, ವಿದ್ಯಾ ಹಾಗರಗಿ ಹಾಗೂ ಬಿಜೆಪಿಯ ಹಲವು ಮುಖಂಡರು, ಮುಸ್ಲಿಂ ಮುಖಂಡರು, ಮಹಿಳೆಯರು ದೇಶದ್ರೋಹಿ ಬರಹ ಬರೆದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಪಾಕಿಸ್ತಾನ ಮುರ್ದಾಬಾದ್’ ಎಂದು ಘೋಷಣೆ ಕೂಗಿ, ಪಾಕ್ ಪ್ರೇಮಿಗಳಿಗೆ ಗುಂಡಿಟ್ಟು ಕೊಲೆ ಮಾಡಿ ಎಂದು ಒತ್ತಾಯಿಸಿದರು.
ಪೊಲೀಸರ ನಿರ್ಲಕ್ಷದಿಂದಲೇ ಇಂತಹ ಕೃತ್ಯ ನಡೆಯುತ್ತಿವೆ. ಕೂಡಲೇ ಆರೋಪಿಗಳನ್ನು ಪತ್ತೆ ಮಾಡಬೇಕೆಂದು ಆಗ್ರಹಿಸಿದರು. ಉಪ ಪೊಲೀಸ್ ಆಯುಕ್ತ ಡಿ. ಕಿಶೋರ್ ಬಾಬು ಹಾಗೂ ಹಿರಿಯ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.