ಕಲಬುರಗಿ: ಕಳೆದ ವರ್ಷ ನಾಡಹಬ್ಬದಂತೆ ಐತಿಹಾಸಿಕವಾಗಿ ನಡೆದಿರುವ ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್)ಯ ಸುವರ್ಣ ಮಹೋತ್ಸವ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವ ಪ್ರಸಕ್ತವಾಗಿ ವಾರ್ಷಿಕೋತ್ಸವದೊಂದಿಗೆ ಶರಣಬಸವೇಶ್ವರ ಸಂಯುಕ್ತ ವಸತಿ ಪಿಯು ಕಾಲೇಜ್ ನ ಬೆಳ್ಳಿ ಮಹೋತ್ಸವ ಹಾಗೂ ಅಪ್ಪಾ ಸಿಬಿಎಸ್‌ಸಿ ಶಾಲೆಯ ದಶಮಾನೋತ್ಸವ ನ.10 ಮತ್ತು 11ರಂದು ಡಾ| ಶರಣಬಸವಪ್ಪ ಅಪ್ಪಾಜಿ ಅವರ ಉಪಸ್ಥಿತಿಯಲ್ಲಿ ಜರುಗಲಿದೆ.
ನ.9ರಿಂದ ಮೂರು ದಿನಗಳ ಕಾಲ ಮಹೋತ್ಸವ ನಡೆಯಬೇಕಿತ್ತು. ಆದರೆ ನ.9ರಂದು ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ನಗರದಲ್ಲಿ 144 ಕಲಂ ಜಾರಿ ಪ್ರಯುಕ್ತ ಮೊದಲನೇ ದಿನದ ಉದ್ಘಾಟನೆ ಹಾಗೂ ಇತರ ಕಾರ್ಯಕ್ರಮಗಳು ರದ್ದಾಗಿರುವುದರಿಂದ ಎರಡನೇ ಹಾಗೂ ಮೂರನೇ ದಿನದ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿವೆ.
ನ.10ರಂದು ಬೀದರ ಸಿದ್ಧರೂಢ ಮಠದ ಶಿವಕುಮಾರ ಸ್ವಾಮೀಜಿ, ಸೊಲ್ಲಾಪುರ ಕ್ಷೇತ್ರದ ಸಂಸದ ಡಾ| ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದ್ದು, ಸಂಸದರಾದ ಡಾ| ಉಮೇಶ ಜಾಧವ್, ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ ಹಾಗೂ ಶಾಸಕರು ಪಾಲ್ಗೊಳ್ಳಲಿದ್ದಾರೆ.
ಸಂಜೆ 4ಕ್ಕೆ ನಡೆಯುವ ಪ್ರೇರಣಾತ್ಮಕ ಉಪನ್ಯಾಸದಲ್ಲಿ ಹೆಡಗಿಮದ್ರಿಯ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಡಾ| ಅಭಿಷೇಕ ರಟ್ಕಲ್, ಸಂದೀಪ ಶರ್ಮಾ ಉಪನ್ಯಾಸ ನೀಡುವರು.
ತದನಂತರ ಖ್ಯಾತ ಗಾಯಕಿ ಶ್ರೀಹರ್ಷ ಅವರಿಂದ ಸಂಗೀತ ಸಂಜೆ ನಡೆದು ಬರಲಿದೆ. 11ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾರಕೂಡ ಮಠದ ಡಾ| ಚೆನ್ನವೀರ ಶಿವಾಚಾರ್ಯರು ಸಾನ್ನಿಧ್ಯದಲ್ಲಿ ಸಚಿವ ವಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಸಚಿವರಾದ ಆರ್. ಅಶೋಕ, ಸಿ.ಟಿ. ರವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ ನಡೆಯುವ ಉಪನ್ಯಾಸ ಗೋಷ್ಠಿಯಲ್ಲಿ ಸುಲಿಬಲೆ ಚಕ್ರವರ್ತಿ, ನಿವೃತ್ತ ನ್ಯಾಯಮೂರ್ತಿ ನ್ಯಾ| ಅರಳಿ ನಾಗರಾಜ ಉಪನ್ಯಾಸ ನೀಡುವರು.
ತದನಂತರ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕಿ ಐಶ್ವರ್ಯ ಪಂಡಿತ ಅವರಿಂದ ಸಂಗೀತ ರಾತ್ರಿ ನಡೆದು ಬರಲಿದೆ. ನ.13 ಹಾಗೂ 14ರಂದು ಶರಣಬಸವ ವಿವಿಯ ಯುವಜನೋತ್ಸವ ಜರುಗಲಿದೆ. ಎಸ್‌ಬಿಆರ್ ಪಿಯು ಕಾಲೇಜ್‌ನ ಬೆಳ್ಳಿ ಮಹೋತ್ಸವ, ಅಪ್ಪ ಸಿಬಿಎಸ್‌ಸಿ ಶಾಲೆಯ ದಶಮಾನೋತ್ಸವ ಹಾಗೂ ವಿವಿಯ ಯುವಜನೋತ್ಸವಕ್ಕೆ ಕಳೆದ ಹಲವಾರು ದಿನಗಳಿಂದ ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಸಂಸ್ಥೆಯ ಪ್ರಾಧ್ಯಾಪಕ ವರ್ಗದವರು, ಹಳೆ ವಿದ್ಯಾರ್ಥಿಗಳ ಸಂಘದವರು ಶ್ರಮಿಸುತ್ತಿದ್ದಾರೆ.