ಕಲಬುರಗಿ: ಅಭಿವೃದ್ಧಿ ಮಾಡಬೇಕೆಂಬ ದೃಢ ಮನಸ್ಸು ಹೊಂದಿ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸಿದಾಗ ಒಳ್ಳೆಯ ಕೆಲಸಗಳಾಗಿ ಜನಮಾಸದಲ್ಲಿ ಉಳಿಯುತ್ತವೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರವಿವಾರ ಭೀಮಾ ನದಿ ಮೇಲೆ ಅಡ್ಡಲಾಗಿ 53 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕೋನಹಿಪ್ಪರಗಿ-ಸರಡಗಿ ಸೇತುವೆ ನಾಡಿಗೆ ಸಮರ್ಪಿಸಿ ಮಾತನಾಡಿದ ಅವರು, ತಾವು ಹಾಗೂ ದಿವಂಗತ ಧರ್ಮಸಿಂಗ್ ಅವರು ಅಭಿವೃದ್ಧಿ ಮಾಡಬೇಕೆಂಬ ಮನಸ್ಸು ಹೊಂದಿ ಜತೆಗೆ ಬದ್ಧತೆ ಹೊಂದಿರುವ ಪರಿಣಾಮವೇ 371ನೇ (ಜೆ) ಕಲಂ ಜಾರಿ, ಹೈಕೋರ್ಟ್ ಪೀಠ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ, ಹತ್ತಾರು ಹೊಸ ರೈಲುಗಳ ಓಡಾಟ, ರಾಷ್ಟ್ರೀಯ ಹೆದ್ಧಾರಿ, ರೈಲು ಮಾರ್ಗ ಸೇರಿದಂತೆ ಹತ್ತಾರು ಕೆಲಸಗಳಾಗಿವೆ ಎಂದು ವಿವರಿಸಿದರು.
ಇಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಏನು ಮಾಡಿದ್ದಾರೆಂದು ಪ್ರಶ್ನಿಸಲಾಗುತ್ತದೆ. ಆದರೆ ಜಲಸಿ(ಹೊಟ್ಟೆಕಿಚ್ಚು)ಯಿಂದ ಹೇಳಿರುವುದಕ್ಕೆ ಯಾವುದೇ ಔಷಧಿ ಇಲ್ಲ . ಆದರೆ ಮತದಾರರ ಪ್ರಭುಗಳಿಗೆ ಕೆಲಸ ಮಾಡಿದ್ದೇವೆ ಎನ್ನು ನಂಬಿಕೆ ಇರುವ ಪರಿಣಾಮವೇ ತಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ ಎಂದು ತಿರುಗೇಟು ನೀಡಿದರು.
ದೇಶಕ್ಕಾಗಿ ಮಹಾತ್ಮಾಗಾಂಧಿ, ಇಂದಿರಾಗಾಂಧಿ, ರಾಜೀವಗಾಂಧಿ ಪ್ರಾಣ ತೆತ್ತಿದ್ದಾರೆ. ಆದರೆ ಬಿಜೆಪಿ, ಆರ್‌ಎಸ್‌ಎಸ್‌ದಿಂದ ಒಂದು ನಾಯಿ ಕೂಡಾ ಸತ್ತಿಲ್ಲ. ಆದರೂ ದೇಶಪ್ರೇಮ ತಮ್ಮ ಆಸ್ತಿ ಎನ್ನುವಂತೆ ವರ್ತಿಸುತ್ತಿರುವುದು ನಿಜಕ್ಕೂ ನಾಚಿಗೇಡಿತನದ ಸಂಗತಿಯಾಗಿದೆ. ಇಷ್ಟು ದಿನ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸಲಾಗುತ್ತಿದೆ. ಸಂವಿಧಾನ ರಕ್ಷಿಸಿ ಉಳಿಸಿಕೊಂಡು ಬರಲಾಗಿದೆ. ಇದರ ಪರಿಣಾಮವೇ ಮೋದಿ ಪ್ರಧಾನಿಯಾಗಿದ್ದಾರೆ. ಆದ್ದರಿಂದ ಮರಳು ಹಾಗೂ ಭಾವುಕರಾಗಿ ಮಾತನಾಡುವುದಕ್ಕೆ ಸೊಪ್ಪು ಹಾಕದೇ ಅಭಿವೃದ್ಧಿಪೂರಕ ಕಾರ್ಯಕ್ಕೆ ತಮ್ಮ ಬೆಂಬಲಿ ಇರಲಿ ಎಂದು ಮನವಿ ಮಾಡಿದರು.
ಜೇವರ್ಗಿ ಶಾಸಕ ಹಾಗೂ ನವದೆಹಲಿ ವಿಶೇಷ ಪ್ರತಿನಿಧಿ ಡಾ| ಅಜಯಸಿಂಗ್ ಅಧ್ಯಕ್ಷತೆ ವಹಿಸಿ, ಕೊನಹಿಪ್ಪರಗಾ-ಸರಡಗಿ ಸೇತುವೆ ನಿರ್ಮಾಣದಿಂದ ತಾಲೂಕಿನ ಹತ್ತಾರು ಗ್ರಾಮಗಳಿಗೆ ಕಲಬುರಗಿ 20ರಿಂದ 25 ಕಿ.ಮೀ ಸಮೀಪವಾಗಿದೆ. ಸೇತುವೆ ನಿರ್ಮಾಣಕ್ಕೆ ಹಲವರು ಅಡೆತಡೆಯುಂಟು ಮಾಡಿದರೂ ಸಂಸದ ಖರ್ಗೆ ಅವರ ಬೆಂಬಲದೊಂದಿಗೆ ಪೂರ್ಣಗೊಳಿಸಿ ಸಮರ್ಪಿಸಲಾಗಿದೆ ಎಂದು ಸೇತುವೆ ಆರಂಭದಿಂದ ಇಂದಿನ ದಿನದವರೆಗೆ ಆಗಿರುವ ಹೆಜ್ಜೆಗಳ ಕುರಿತು ವಿವರಣೆ ನೀಡಿದರು.
ಶಾಸಕ ಎಂ.ವೈ. ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಮೇಯರ್ ಶರಣು ಮೋದಿ, ತಾಲೂಕಾ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಇಟಗಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವರಾಜ ಪಾಟೀಲ ರದ್ದೇವಾಡಗಿ, ಅರುಣಕುಮಾರ ಎಂ. ಪಾಟೀಲ, ಶಾಂತಪ್ಪ ಕೂಡಲಗಿ, ದಿಲೀಪ ಪಾಟೀಲ, ಜಿ.ಪಂ ಸಿಇಒ ಡಾ| ಪಿ.ರಾಜಾ, ಮುಖಂಡರಾದ ನೀಲಕಂಠರಾವ್ ಮೂಲಗೆ, ಚಂದ್ರಶೇಖರ ಹರನಾಳ, ಮಹಿಬೂಬ ಪಟೇಲ್, ರುಕುಂಪಟೇಲ್, ಬಸವನಗೌಡ ಹನ್ನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜ ಪೊಲೀಸ್ ಪಾಟೀಲ, ಚಂದನಕುಮಾರ ಬುಳ್ಳಾ ಸೇರಿದಂತೆ ಮುಂತಾದವರಿದ್ದರು.
ನರಿಬೋಳ-ಚಾಮನೂರು ಸೇತುವೆಯೂ ಪೂರ್ಣ
ಮಹತ್ವತಾಂಕ್ಷಿ ನರಿಬೋಳ-ಚಾಮನೂರು ಸೇತುವೆ ಕೂಡಾ ಪೂರ್ಣಗೊಂಡಿದೆ. ಸಂಪರ್ಕ ರಸ್ತೆಯಾಗಬೇಕಿದೆ. ಇನ್ನಾರು ತಿಂಗಳಲ್ಲಿ ಈ ಸೇತುವೆಯೂ ನಾಡಿಗೆ ಸಮರ್ಪಣೆಯಾಗಲಿದೆ. ಈ ಸೇತುವೆ ಚಿತ್ತಾಪುರ-ಜೇವರ್ಗಿ ತಾಲೂಕಿನ ನಡುವೆ ಸಂಪರ್ಕ ಕೊಂಡಿಯಾಗಲಿದೆ.
ಮಲ್ಲಿಕಾರ್ಜುನ ಖರ್ಗೆ, ಸಂಸದ